ಬೆಂಗಳೂರು: ಮನೆ ಇಲ್ಲದವರಿಗೆ ಸೂರನ್ನು ಕಲ್ಪಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿ ಯೋಜನೆಯಡಿ 2.90 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಶಾಸಕರು ಫಲಾನುಭವಿಗಳ ಪಟ್ಟಿಯನ್ನು ನಿಗದಿತ ಅವಧಿಯಲ್ಲಿ ನೀಡದಿದ್ದರೆ, ಕೇಂದ್ರದ ಅನುದಾನ ವಾಪಸ್ ಹೋಗಲಿದೆ.
ಈ ಬಗ್ಗೆ ಮಾಹಿತಿ ಪಡೆದ ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್, ಗ್ರಾಮಸಭೆ ಹಾಗೂ ಶಾಸಕರ ಸಮಿತಿ ಈ ಫಲಾನುಭವಿಗಳನ್ನು ಅಂತಿಮಗೊಳಿಸಿ, ಪಟ್ಟಿಯನ್ನು ಒಂದು ವಾರದಲ್ಲಿ ಕಳುಹಿಸಿಕೊಡಲು ಸೂಚಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಸೇರಿ ವಿವಿಧ ಯೋಜನೆಗಳಲ್ಲಿ ಒಟ್ಟು 2,90,878 ಫಲಾನುಭವಿಗಳ ಆಯ್ಕೆ ಮಾಡಬೇಕಾಗಿದೆ. ಅ ಬಗ್ಗೆಯೂ ಶಾಸಕರಿಗೆ ಮನವಿ ಮಾಡಲಾಗಿದೆ. ಫಲಾನುಭವಿಗಳ ಪಟ್ಟಿ ಬಂದ ಕೂಡಲೇ ಹಂಚಿಕೆ ಮಾಡಲಾಗುವುದು. ಇದೇ 20ರೊಳಗೆ ಹಂಚಿಕೆ ಮಾಡಲಿದ್ದರೆ, ಯೋಜನೆ ಕೇಂದ್ರಕ್ಕೆ ವಾಪಸ್ ಹೋಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಗ್ರಾಮೀಣ ಅವಾಜ್ ಯೋಜನೆಯಡಿ ಗ್ರಾಮೀಣ ಭಾಗದ ವಸತಿ ರಹಿತರಿಗೆ ಮನೆ ಕಟ್ಟಿಸಿಕೊಡುವ ಯೋಜನೆಯಡಿ ರಾಜ್ಯಕ್ಕೆ 1.41 ಲಕ್ಷ ಮನೆ ಹಂಚಿಕೆಯಾಗಿದೆ. ಇದುವರೆಗೂ 63 ಸಾವಿರ ಮನೆಗೆ ಫಲಾನುಭವಿಗಳ ಆಯ್ಕೆಯಾಗಿದೆ. 78 ಸಾವಿರ ಮನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ.
ಗ್ರಾಮಸಭೆಗಳಿಗೆ ಈ ಕುರಿತು ಶಾಸಕರು ಸೂಚನೆ ನೀಡಿ ಒಂದು ವಾರದಲ್ಲಿ ಪಟ್ಟಿ ಅಂತಿಮಗೊಳಿಸಿದರೆ ಯೋಜನೆಯ ಲಾಭ ರಾಜ್ಯದ ವಸತಿ ರಹಿತರಿಗೆ ಸಿಗುತ್ತದೆ. ಆನ್‌ಲೈನ್ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗೆ 60ಃ40 ಅನುಪಾತದಲ್ಲಿ ಅನುದಾನ ನೀಡಲಿವೆ. ಸಾಮಾನ್ಯ ವರ್ಗಕ್ಕೆ ₹1.03 ಲಕ್ಷ, ಎಸ್‌ಸಿ–ಎಸ್‌ಟಿ ಸಮುದಾಯಕ್ಕೆ ₹1.25ಲಕ್ಷ ಸಬ್ಸಿಡಿ ಸಿಗಲಿದೆ. 150ರಿಂದ 700 ಚದರಡಿವರೆಗೆ ವೈಯಕ್ತಿಕ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.