ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿಯವರನ್ನು ಟೀಕಿಸುವ ನೈತಿಕತೆ ಜನಪ್ರತಿನಿಧಿಗಳಿಗಿಲ್ಲ: ಗೋಪಾಲಗೌಡ

Last Updated 4 ಅಕ್ಟೋಬರ್ 2020, 2:14 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ದೇಶದಲ್ಲಿ ಶಾಸನಬದ್ಧ ಆಳ್ವಿಕೆಯಿಲ್ಲ. ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಯುತ್ತಿಲ್ಲ ಎಂಬಂತಹ ಸ್ಥಿತಿ ದೇಶದಲ್ಲಿದೆ. ನ್ಯಾಯಾಂಗ ವ್ಯವಸ್ಥೆಯೂ ನ್ಯಾಯ ಕೊಡುವಲ್ಲಿ ವಿಫಲವಾಗುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಕುರಿತಸಾಕ್ಷ್ಯಚಿತ್ರ ‘ಮಹಾನ್‌ ತಾತ’ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೆಲವು ಬೇಜವಾಬ್ದಾರಿ ಜನಪ್ರತಿನಿಧಿಗಳು ದೊರೆಸ್ವಾಮಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆಯನ್ನು ಜನಪ್ರತಿನಿಧಿಗಳು ಉಳಿಸಿಕೊಂಡಿಲ್ಲ’ ಎಂದರು.

ಗುರುಪ್ರಸಾದ್ ಆಕೃತಿಯವರ ‘ಗೋಡ್ಸೆವಾದಿಗಳಿಗೆ ಗಾಂಧಿವಾದದ ಉತ್ತರ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಹೋರಾಟಗಾರ ಸಿರಿಮನೆ ನಾಗರಾಜು, ‘ದೊರೆಸ್ವಾಮಿಯವರ ಸಾಕ್ಷ್ಯಚಿತ್ರ 103 ಕಡೆಗಳಲ್ಲಿ ಪ್ರದರ್ಶನವಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಹಲವು ಜಿಲ್ಲೆಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ’ ಎಂದರು.

ಎಚ್.ಎಸ್. ದೊರೆಸ್ವಾಮಿ, ‘ನನ್ನ ಬಗ್ಗೆ ಕೆಲವರು ಮಾಡಿದ ಟೀಕೆಗಳು ಬೇಸರ ಉಂಟು ಮಾಡಲಿಲ್ಲ. ಆದರೆ, ನನ್ನ ಜೊತೆ ಆತ್ಮೀಯರಾಗಿದ್ದ ಒಬ್ಬರು ಪ್ರತಿರೋಧ ತೋರಲಿಲ್ಲ ಎಂಬುದು ಬೇಸರ ತರಿಸಿತು. ಬಹಳಷ್ಟು ಜನ ನನ್ನ ಪರವಾಗಿ ನಿಂತರು. ಗೋಪಾಲಗೌಡರು ಬೆಂಬಲ ನೀಡಿದರು’ ಎಂದರು.

‘ಟೀಕೆಗಳಿಗೆ ಉತ್ತರ ನೀಡಲೇಬೇಕು ಎಂದು ಈ ಸಾಕ್ಷ್ಯಚಿತ್ರ ಮತ್ತು ಪುಸ್ತಕ ಹೊರತರುತ್ತಿದ್ದೇವೆ. ಯಾರ ವಿರುದ್ಧವೂ ಕೆಟ್ಟ ಮಾತುಗಳನ್ನು ಆಡಿಲ್ಲ. ಟೀಕಿಸಿದವರಿಗೆ ಜ್ಞಾನೋದಯವಾಗಬೇಕು, ಪಶ್ಚಾತ್ತಾಪವಾಗಬೇಕು ಅಷ್ಟೇ’ ಎಂದರು.

ಸಾಕ್ಷ್ಯಚಿತ್ರದ ವಿಶೇಷ: 39 ನಿಮಿಷಗಳ ಈ ಸಾಕ್ಷ್ಯಚಿತ್ರ, ದೊರೆಸ್ವಾಮಿಯವರ ಜೀವನವನ್ನು ಇಂದಿನ ಪೀಳಿಗೆಯ ಮುಂದೆ ತೆರೆದಿಡುವ ಪ್ರಯತ್ನವಾಗಿದೆ. ‘‍ಪೆಡಸ್ಟ್ರಿಯನ್‌ ಪಿಕ್ಚರ್ಸ್‌’ ಬ್ಯಾನರ್‌ ಅಡಿ ಇದನ್ನು ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT