ಶುಕ್ರವಾರ, ಡಿಸೆಂಬರ್ 4, 2020
21 °C
ಹುಬ್ಬಳ್ಳಿ– ಅಂಕೋಲಾ ರೈಲ್ವೆ ಮಾರ್ಗ

ಭಾರಿ ವರಮಾನ ತರುವ ಔಷಧೀಯ ಸಸ್ಯ ಪ್ರಭೇದಕ್ಕೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸ್ತಾವಿತ ಹುಬ್ಬಳ್ಳಿ– ಅಂಕೋಲ ರೈಲು ಮಾರ್ಗವು ತೀರಾ ಅಪರೂಪದ ಸಸ್ಯ ಪ್ರಭೇದಕ್ಕೆ ಗಂಡಾಂತರ ತಂದೊಡ್ಡಲಿದೆ. ಅಂತರರಾಷ್ಟ್ರೀಯ ಔಷಧ ಮಾರುಕಟ್ಟೆಯಲ್ಲಿ ಈ ಪ್ರಭೇದದ ಮರಗಳ ಮೌಲ್ಯ ವರ್ಷಕ್ಕೆ ₹ 21 ಸಾವಿರ ಕೋಟಿ ಎಂದು ವಿಜ್ಞಾನಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ರೈಲ್ವೆ ಯೋಜನೆಗೆ ಈ ಮರಗಳನ್ನು ಕಡಿದಿದ್ದೇ ಆದರೆ, ಸರ್ಕಾರವು ಪ್ರಾಕೃತಿಕ ಸಂಪನ್ಮೂಲದಿಂದ ಬರುವ ಭಾರಿ ವರಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ರೈಲ್ವೆ ಮಾರ್ಗದಿಂದ ಬರುವ ವರಮಾನಕ್ಕಿಂತಲೂ ಹೆಚ್ಚು ಮೊತ್ತವು ಈ ಪ್ರಾಕೃತಿಕ ಸಂಪನ್ಮೂಲಗಳಿಂದ ಬರಲಿದೆ’ ಎಂದು ವಿಜ್ಞಾನಿ ಹೇಮಂತ್‌ ಆರ್‌.ನಾಯ್ಕ್‌ ಅಭಿಪ್ರಾಯಪಟ್ಟಿದ್ದಾರೆ. ಹೇಮಂತ್‌ ನಾಯ್ಕ್‌ ಅವರು ಪಶ್ಚಿಮ ಘಟ್ಟದಲ್ಲಿ 30ವರ್ಷಗಳಿಗೂ ಹೆಚ್ಚು ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ರಚಿಸಿದ್ದಾರೆ.  

ನೋಥಾಪೊಡೈಟ್ಸ್‌ ನಿಮ್ಮೊನಿಯಾನ ಪ್ರಭೇದದ ಮರವು ಕ್ಯಾನ್ಸರ್‌ ಗುಣಪಡಿಸುವ ಗುಣವಿರುವ ಕ್ಯಾಂಪ್ಟೊಥೆಸಿನ್‌ (ಸಿಪಿಟಿ) ಎಂಬ ಕ್ಷಾರ ಪದಾರ್ಥಗಳನ್ನು (ಆಲ್ಕಲಾಯ್ಡ್) ಹೇರಳವಾಗಿ ಹೊಂದಿದೆ. ಅವರು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ ಸಂಶೋಧನಾ ಪ್ರಬಂಧದ ಪ್ರಕಾರ ಸಿಪಿಟಿಯು ವಿಶೇಷವಾಗಿ ಗರ್ಭಕೋಶ, ಕರುಳು, ಶ್ವಾಸಕೋಶ, ಜಠರ ಹಾಗೂ ಮೊಲೆಗಳ ಕ್ಯಾನ್ಸರ್‌ನ ಪ್ರಾಥಮಿಕ ಕ್ಲಿನಿಕಲ್‌ ಪರೀಕ್ಷೆಗಳಲ್ಲಿ ಗಮನಾರ್ಹ ಕ್ಯಾನ್ಸರ್‌ ಉಪಶಮನಕಾರಕ ಗುಣವನ್ನು ತೋರಿದೆ. 

ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಬಹುಪಾಲು ಕ್ಯಾಂಪ್ಟೊಥೆಸಿನ್‌ ಅನ್ನು ಚೀನಾ ಪೂರೈಸುತ್ತಿದೆ. ಅಲ್ಲಿ ಹಿಮಾಲಯ ಪರ್ವತದ ತಪ್ಪಲಿನಲ್ಲಿ ಕಂಡುಬರುವ ಕ್ಯಾಂಪ್ಟೊಥೆಕಾ ಅಕ್ಯುಮಿನಾಟ ಎಂಬ ಪ್ರಭೇದದ ಸಸ್ಯದ ಕಾಂಡ ಮತ್ತು ತೊಗಟೆಯಿಂದ ಅದನ್ನು ಸಂಗ್ರಹಿಸಲಾಗುತ್ತದೆ. 

ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ ಹಾಗೂ ಅಮೆರಿಕದ ಪರ್ಡ್ಯು ವಿಶ್ವವಿದ್ಯಾಲಯದ ವಿಜ್ಞಾನಿಯಾಗಿರುವ ನಾಯ್ಕ್‌, ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ಪ್ರಕಟಿಸುವ ನಿಯತಕಾಲಿಕೆಯಲ್ಲಿ 2011ರಲ್ಲಿ ಪ್ರಕಟಿಸಿದ್ದ ಸಂಶೋಧನಾ ಪ್ರಬಂಧದ ಕಾರ ನೋಥಾಪೊಡೈಟ್ಸ್‌ ನಿಮ್ಮೊನಿಯಾನ ಪ್ರಭೇದದ ಮರವು ಸಿಪಿಟಿಯನ್ನು ಹೇರಳ ಪ್ರಮಾಣದಲ್ಲಿ ಹೊಂದಿದೆ.

‘ಈ ಪ್ರಭೇದದ ಮರಗಳು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಸಮೃದ್ಧವಾಗಿ ಬೆಳೆಯುತ್ತವೆ. ಇವುಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಿರುವ ಕೆಂಪು ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಮರಗಳು ಸಮೃದ್ಧವಾಗಿ ಬೆಳೆಯುವ ತಾಣಗಳಲ್ಲಿ ಕಾಳಿ ಹುಲಿ ಯೋಜನೆಯ ಪ್ರದೇಶವೂ ಒಂದು. ಈ ಪ್ರದೇಶದ ಮೂಲಕವೇ ಪ್ರಸ್ತಾವಿತ ರೈಲ್ವೆ ಮಾರ್ಗವು ಹಾದುಹೋಗುತ್ತದೆ’ ಎಂದು ಎಂದು ಹಿರಿಯ ಸಸ್ಯಶಾಸ್ತ್ರಜ್ಞ
ಡಾ.ಕಲಿಯಮೂರ್ತಿ ರವಿಕುಮಾರ್ ವಿವರಿಸಿದರು. 

‘ಈ ಮರಗಳ ಸಹಜ ಆವಾಸ ಸ್ಥಾನಗಳ ಸಂರಕ್ಷಣೆ ತೀರಾ ಮುಖ್ಯ. ಏಕೆಂದರೆ ಪಶ್ಚಿಮ ಘಟ್ಟದ ಆಚೆಯ ನಿಯಂತ್ರಿತ ವಾತಾವರಣದಲ್ಲಿ ಈ ಮರಗಳನ್ನು ಬೆಳೆಸಿದಾಗ ಅವುಗಳಲ್ಲಿ ಸಿಪಿಟಿ ಪ್ರಮಾಣ ಕಡಿಮೆ ಯಾಗುತ್ತದೆ. ಜಿಕೆವಿಕೆ ಪ್ರಾಂಗಣದಲ್ಲಿ ಪ್ರಾಯೋಗಿಕವಾಗಿ ಈ ಸಸ್ಯಗಳನ್ನು ಬೆಳೆಸಿದಾಗ ಅವುಗಳಲ್ಲಿ ಸಿಪಿಟಿ ಪ್ರಮಾಣವು ಶೇ 80ರಷ್ಟು ಕಡಿಮೆಯಾಗಿತ್ತು. ಈ ಪ್ರಭೇದದ ಮರಗಳು ಬೆಳೆಯಲು ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ ಇತರ ಕೆಲವು ಸಸ್ಯಗಳ ಹಾಗೂ ಶಿಲೀಂದ್ರಗಳ ಅವಶ್ಯಕತೆಯೂ ಇದೆ’ ಎಂದು ಅವರು ತಿಳಿಸಿದರು.

ಈಗಲೂ ನಡೆಯುತ್ತಿದೆ ಸಿಪಿಟಿ ಸಂಗ್ರಹ

ಪಶ್ಚಿಮ ಘಟ್ಟದಲ್ಲಿರುವ ನೋಥಾಪೊಡೈಟ್ಸ್‌ ನಿಮ್ಮೊನಿಯಾನ ಮರಗಳಿಂದ ಈಗಲೂ ಸಿಪಿಟಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಸಂಗ್ರಹಿಸಲಾಗುತ್ತಿದೆ.

‘ಈ ಮರಗಳ ತೊಗಟೆಯನ್ನು ಸಂಗ್ರಹಿಸುವುದಕ್ಕೆ ಸ್ಥಳೀಯ ಬುಡಕಟ್ಟು ಜನರಿಗೆ ದಿನಕ್ಕೆ ₹ 150ರಿಂದ ₹ 200 ನೀಡಲಾಗುತ್ತದೆ. ಈ ತೊಗಟೆಗಳಿಂದ ಮುಂಬೈನಲ್ಲಿ ಪುಡಿಯನ್ನು ತಯಾರಿಸಲಾಗುತ್ತದೆ. ಅಲ್ಲಿ ಅದಕ್ಕೆ ಪ್ರತಿ ಕೆ.ಜಿ.ಗೆ ₹ 15 ಸಾವಿರ ದರ ಇದೆ. 1 ಮಿಲಿ ಗ್ರಾಂ ಸಿಪಿಟಿ ಉತ್ಪಾದಿಸಲು ಹೆಚ್ಚೂ ಕಡಿಮೆ 1ಸಾವಿರ ಕೆ.ಜಿ.ಗಳಷ್ಟು ತೊಗಟೆಯ ಅಗತ್ಯವಿದೆ’ ಎಂದು ರವಿಕುಮಾರ್ ತಿಳಿಸಿದರು.

ಜಗತ್ತಿನಲ್ಲಿ ವರ್ಷಕ್ಕೆ1 ಟನ್‌ಗಳಷ್ಟು ಕಚ್ಚಾ ಸಿಪಿಟಿಗೆ ಬೇಡಿಕೆ ಇದೆ ಎಂದು ಎಲ್ಸಿವಿಯರ್‌ ವರದಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.