ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.91 ಕೋಟಿ ವಂಚನೆ: ಡಿವೈಎಸ್ಪಿ ದಾಳಿ ಬೆನ್ನಲ್ಲೇ ಎಫ್‌ಐಆರ್

* ಶೇಷಾದ್ರಿಪುರ ಠಾಣೆ ಪ್ರಕರಣ * ಅಕ್ರಮ ಬಂಧನ ಸಂತ್ರಸ್ತನ ವಿರುದ್ಧ ಪ್ರಕರಣ
Last Updated 21 ಜನವರಿ 2023, 20:40 IST
ಅಕ್ಷರ ಗಾತ್ರ

ಬೆಂಗಳೂರು: ಶೇಷಾದ್ರಿಪುರ ಠಾಣೆ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ಮಾಡಿದ್ದ ಬೆನ್ನಲ್ಲೇ, ಅಕ್ರಮ ಬಂಧನದ ಸಂತ್ರಸ್ತ ಆರ್. ಶ್ರೀಧರ್ ವಿರುದ್ಧ ₹ 2.91 ಕೋಟಿ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

‘ಶೇಷಾದ್ರಿಪುರ ನಿವಾಸಿ ಶ್ರೀಧರ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ’ ಎಂದು ಆರೋಪಿಸಿ ಅವರ ಮಗ ಚಂದರೇಶ್, ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ, ತನಿಖೆ ನಡೆಸುವಂತೆ ಐಜಿಪಿ ಅವರಿಗೆ ಸೂಚಿಸಿತ್ತು. ಡಿವೈಎಸ್ಪಿ ನೇತೃತ್ವದ ತಂಡ ಠಾಣೆ ಮೇಲೆ ಶುಕ್ರವಾರ (ಜ. 20) ದಾಳಿ ಮಾಡಿ, ಶ್ರೀಧರ್ ಅವರನ್ನು ರಕ್ಷಿಸಿತ್ತು. ಠಾಣೆಯಲ್ಲಿದ್ದ ದಾಖಲೆಗಳನ್ನು ಜಪ್ತಿ ಮಾಡಿತ್ತು.

ದಾಳಿ ನಡೆದ ದಿನವೇ ಶ್ರೀಧರ್ ವಿರುದ್ಧ ಎನ್‌.ಕುಮಾರಸ್ವಾಮಿ ಎಂಬುವರು ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

18 ಮಂದಿಗೆ ವಂಚನೆ: ‘ಚೀಟಿ ವ್ಯವಹಾರ ನಡೆಸುತ್ತಿದ್ದ ಶ್ರೀಧರ್, ಪ್ರತಿತಿಂಗಳು ಜನರಿಂದ ಹಣ ಸಂಗ್ರಹಿಸುತ್ತಿದ್ದ. ಈತನ ಮಾತು ನಂಬಿ ನಾನು ಸಹ ಚೀಟಿ ಕಟ್ಟುತ್ತಿದ್ದೆ. ಬಿಡ್ ಮಾಡುತ್ತಿದ್ದ ಸದಸ್ಯರಿಗೆ ಚೀಟಿ ಮೊತ್ತವನ್ನು ಕೊಡದೇ ಸತಾಯಿಸುತ್ತಿದ್ದ’ ಎಂದು ಕುಮಾರಸ್ವಾಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ನಾನು ಸೇರಿದಂತೆ 18 ಮಂದಿ, ಚೀಟಿ ಹೆಸರಿನಲ್ಲಿ ಶ್ರೀಧರ್‌ಗೆ ₹ 2.97 ಕೋಟಿ ನೀಡಿದ್ದೆವು. ಇನ್ನು ಹಲವರು ಚೀಟಿ ಕಟ್ಟಿರುವ ಮಾಹಿತಿ ಇದೆ. ಯಾರಿಗೂ ಚೀಟಿ ಹಣ ನೀಡದೇ ವಂಚಿಸಿರುವ ಆರೋಪಿ, ಮನೆಗೆ ಬೀಗ ಹಾಕಿಕೊಂಡುಪರಾರಿಯಾಗಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ’ ಎಂದೂ ಅವರು ಹೇಳಿದ್ದಾರೆ.

ಪೊಲೀಸರು, ‘ಕುಮಾರಸ್ವಾಮಿ ನೀಡಿದ್ದ ದೂರು ಆಧರಿಸಿ ಶ್ರೀಧರ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿತ್ತು. ಅಕ್ರಮ ಬಂಧನವೆಂದು ಹೇಳಿರುವ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ಆಯೋಗಕ್ಕೆ ಸೂಕ್ತ ದಾಖಲೆಗಳನ್ನು ನೀಡಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT