ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಟಿಂಗ್ಟನ್ ರೋಗಿಗಳಿಗೆ ಅಗತ್ಯ ಚಿಕಿತ್ಸೆ: ಸಚಿವ ದಿನೇಶ್ ಗುಂಡೂರಾವ್ ಭರವಸೆ

Published : 17 ಆಗಸ್ಟ್ 2024, 15:09 IST
Last Updated : 17 ಆಗಸ್ಟ್ 2024, 15:09 IST
ಫಾಲೋ ಮಾಡಿ
Comments

ಬೆಂಗಳೂರು: ‘ಹಂಟಿಂಗ್ಟನ್ ಕಾಯಿಲೆಗೆ ಒಳಗಾದವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ‌

ಹಂಟಿಂಗ್ಟನ್‌ ಸೊಸೈಟಿ ಆಫ್‌ ಇಂಡಿಯಾ (ಎಚ್‌ಡಿಎಸ್‌) ಸಂಸ್ಥೆಯು 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ರೋಗ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು.

ರೋಗಿಗಳ ಆರೈಕೆಗೆ ಕ್ಲಿನಿಕ್‌ಗಳ ಸ್ಥಾಪನೆ, ರೋಗವನ್ನು ಅಪರೂಪದ ಕಾಯಿಲೆಗಳ ಪಟ್ಟಿಗೆ ಸೇರ್ಪಡೆಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಸ್ಥೆಯ ಪ್ರತಿನಿಧಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಂಟಿಂಗ್ಟನ್ ಅನುವಂಶೀಯ ರೋಗ. ಇದಕ್ಕೆ ತುತ್ತಾದವರಿಗೆ ಕ್ರಮೇಣ ನಿತ್ಯದ ಚಟುವಟಿಕೆಗಳು ಕಷ್ಟವಾಗುತ್ತವೆ’ ಎಂದರು.  ‘ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಸಂಗ್ರಹಿಸಿ, ರೋಗಿಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕಿದೆ. ಆರೈಕೆಗೆ ವಿವಿಧ ಸಂಘ–ಸಂಸ್ಥೆಗಳೂ ಕೈಜೋಡಿಸಬೇಕು’ ಎಂದರು. 

ಸಂಸದ ಡಾ.ಸಿ.ಎನ್.ಮಂಜುನಾಥ್, ‘ಹಂಟಿಂಗ್ಟನ್‌ ಕಾಯಿಲೆಯಿಂದ ಮಿದುಳಿನಲ್ಲಿ ಜೀವಕೋಶಗಳ ನಾಶದ ಜತೆಗೆ ವ್ಯಕ್ತಿಯ ಚಿಂತನಾ ಶಕ್ತಿ ಕುಂದುತ್ತದೆ. ದೈನಂದಿನ ಕೆಲಸ, ಸಂವಹನ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಇದನ್ನು ಅಪರೂಪದ ರೋಗಗಳ ರಾಷ್ಟ್ರೀಯ ನೀತಿಯಡಿ ಗುರುತಿಸಬೇಕಿದೆ’ ಎಂದು ತಿಳಿಸಿದರು. 

‘ದೇಶದಲ್ಲಿ ಈ ಕಾಯಿಲೆ ಹಾಗೂ ಚಿಕಿತ್ಸಾ ಸೌಲಭ್ಯದ ಬಗ್ಗೆ ಅರಿವಿನ ಕೊರತೆಯಿದೆ. ಚಿಕಿತ್ಸೆಗೆ ಆಯ್ಕೆಗಳೂ ಪೂರಕವಾಗಿಲ್ಲ. ನಿರ್ವಹಣೆಯಲ್ಲೂ ಸಮಸ್ಯೆಯಾಗುತ್ತದೆ. ಸರಳ ಪರೀಕ್ಷೆಗಳ ಮೂಲಕ ಕಾಯಿಲೆಯನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕಿದೆ’ ಎಂದು ಎಚ್‌ಡಿಎಸ್‌ ಪ್ರತಿನಿಧಿಗಳು ಸಭೆಯಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT