ಶುಕ್ರವಾರ, ಡಿಸೆಂಬರ್ 2, 2022
20 °C
ತಂದೆಯಿಂದ ಪೊಲೀಸರಿಗೆ ದೂರು

ಮೊದಲ ಮದುವೆ ಮುಚ್ಚಿಟ್ಟ ಪತಿ: ಪ್ರೀತಿಸಿ ಮದುವೆಯಾಗಿದ್ದ ಎರಡನೇ ಪತ್ನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಗೌತಮಿ (24) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪತಿ ಪ್ರಸಾದ್ ರೆಡ್ಡಿ ಹಾಗೂ ಈತನ ಮೊದಲ ಪತ್ನಿ ಅಯೇಷಾ ಬಾನು ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿ.ಕಾಂ ಪದವೀಧರರಾದ ಗೌತಮಿ, ಆಂಧ್ರಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಪರಿಚಯವಾದ ಪ್ರಸಾದ್ ರೆಡ್ಡಿಯನ್ನು ಪ್ರೀತಿಸಿ, 9 ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಕಾವೇರಿ ಲೇಔಟ್‌ನ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸೆ. 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಪ್ರಸಾದ್, ಹಲವು ವರ್ಷಗಳ ಹಿಂದೆಯೇ ಅಯೇಷಾ ಬಾನು ಅವರನ್ನು ಮದುವೆಯಾಗಿದ್ದರು. ಈ ವಿಷಯ ಮುಚ್ಚಿಟ್ಟು, ಗೌತಮಿ ಅವರನ್ನು ಪ್ರೀತಿಸುತ್ತಿದ್ದರು. ಪ್ರಸಾದ್ ಅವರಿಗೆ ತಾವೇ ಮೊದಲ ಪತ್ನಿಯೆಂದು ತಿಳಿದು ಗೌತಮಿ ಮದುವೆಯಾಗಿದ್ದರು.'

‘ಕೆಲದಿನಗಳ ನಂತರ ಪ್ರಸಾದ್‌ಗೆ ಮೊದಲ ಪತ್ನಿ ಇರುವ ಸಂಗತಿ ಗೌತಮಿ ಅವರಿಗೆ ಗೊತ್ತಾಗಿತ್ತು. ಈ ಸಂಬಂಧ ಮನೆಯಲ್ಲಿ ಗಲಾಟೆಯೂ ಆಗಿತ್ತು. ಮನೆ ಸಮೀಪದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದ ಆಯೇಷಾ ಬಾನು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಇದರಿಂದ ಗಲಾಟೆ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಪ್ರಸಾದ್ ಹಾಗೂ ಅಯೇಷಾ ಇಬ್ಬರೂ ಸೇರಿ ಗೌತಮಿ ಅವರಿಗೆ ಕಿರುಕುಳ ನೀಡಲಾರಂಭಿಸಿದ್ದರು.’

‘ಪ್ರಸಾದ್ ಹಾಗೂ ಅಯೇಷಾ ಬಾನು ಇಬ್ಬರೂ ನ್ಯಾಯಾಂಗಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು