ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್–ಐಪಿಎಸ್‌ ವಲಯದಲ್ಲಿ ಭಿನ್ನ ಅಭಿಪ್ರಾಯ

ಅಧಿಕಾರಿಗಳ ಬಂಧನ: ಅಸಮಾಧಾನ
Last Updated 8 ಜುಲೈ 2022, 19:23 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್ ಅಧಿಕಾರಿ ಜೆ.ಮಂಜುನಾಥ್‌ ಮತ್ತು ಐಪಿಎಸ್‌ ಅಧಿಕಾರಿ ಅಮ್ರಿತ್ ಪೌಲ್‌ ಅವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವುದು ರಾಜ್ಯ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಲವು ಅಧಿಕಾರಿಗಳು ಬಂಧನದ ಕ್ರಮವನ್ನು ‘ಕಠಿಣ ಕ್ರಮ’ ಎಂದು ಭಾವಿಸಿದ್ದರೆ, ಇನ್ನು ಕೆಲವರು ‘ತಪ್ಪುಗಳನ್ನು ಸರಿಪಡಿಸುವ ಕ್ರಮ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಮಂಜುನಾಥ್‌ ಅವರ ಬಂಧನದ ಬಗ್ಗೆ ಐಎಎಸ್‌ ವಲಯದಲ್ಲಿ ಅಸಮಾಧಾನ ಮಡುಗಟ್ಟಿದೆ. ಕೆಲವು ದಿನಗಳ ಹಿಂದೆ ಐಎಎಸ್‌ ಅಧಿಕಾರಿಗಳ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಬಂಧಿಸಿದ ರೀತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಈ ಬಂಧನವು ನಮ್ಮನ್ನು ದುರ್ಬಲಗೊಳಿಸಿದೆ ಮತ್ತು ಹೈಕೋರ್ಟ್‌ ಎಸಿಬಿಯ ಮೇಲೆ ಕೆಂಡ ಕಾರಿರುವುದರಿಂದ ನಾವು ಒತ್ತಡಕ್ಕೆ ಸಿಲುಕಿದ್ದೇವೆ’ ಎಂದು ಅವರು ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡಿದ್ದಾರೆ.

ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಉದಾಹರಣೆಗೆ ನನಗೆ ಕೊಡಲೆಂದು ಲಂಚ ತೆಗೆದುಕೊಂಡಿರುವುದಾಗಿ ನನ್ನದೇ ಕಚೇರಿಯ ಜವಾನ ಹೇಳಿದರೆ, ಆ ಹೇಳಿಕೆ ಆಧರಿಸಿ ನನ್ನನ್ನು ಬಂಧಿಸಬಹುದೇ’ ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಹಲವು ಅಧಿಕಾರಿ ಗಳನ್ನು‍ಮಾತನಾಡಿಸಿದಾಗ, ‘ಈ ಬೆಳವಣಿಗೆ ಅತ್ಯಂತ ಕಳವಳಕಾರಿ. ನಾವು ಈಗ ಯಾರದ್ದೇ ಮೇಲೆ ಕ್ರಮ ತೆಗೆದುಕೊಳ್ಳಲು ಹೋದರೆ ನಮ್ಮನ್ನೇ ಸಿಕ್ಕಿಸಿ ಹಾಕುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಹಿಂದೆ ಐಎಎಸ್‌ ಎಂದರೆ ‘ನಾನು ಸುರಕ್ಷಿತ’ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು. ಈಗ ಮಂಜುನಾಥ್‌ ಬಂಧನದ ರೀತಿ ಐಎಎಸ್‌ ಅಧಿಕಾರಿಗಳ ಸ್ಥಾನ ಮತ್ತು ಅವರು ತೆಗೆದುಕೊಳ್ಳುವ ನಿರ್ಣಯಗಳನ್ನೂ ದುರ್ಬಲಗೊಳಿಸಿದೆ’ ಎಂದ ಅವರು ಹೇಳಿದರು.

‘ಸುಪ್ರಿಂ ಕೋರ್ಟ್‌ ಮಾರ್ಗಸೂಚಿಯ ಪ್ರಕಾರ, ಯಾವುದೇ ವ್ಯಕ್ತಿ ಜಾಮೀನುರಹಿತ ಅಪರಾಧ ಎಸಗಿದ್ದರೆ, ಒಬ್ಬ ಅಪರಾಧಿ ವಿಮಾನದ ಮೂಲಕ ಪರಾರಿಯಾಗುವ ಅಥವಾ ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆ ಇದ್ದಾಗ ಬಂಧಿಸಬಹುದು. ಮಂಜುನಾಥ ಇಂತಹ ಯಾವುದೇ ಅಪಾಯವನ್ನೂ ಒಡ್ಡಿಲ್ಲ’ ಎಂದರು.

ಮತ್ತೊಬ್ಬರು ಅಧಿಕಾರಿ ಮಾತನಾಡಿ, ‘ಒಂದು ವೇಳೆ ಮಂಜುನಾಥ ಅವರು ಆರೋಪಿಯಾಗಿದ್ದರೂ ಬಂಧಿಸುವ ಅಗತ್ಯವಿರಲಿಲ್ಲ. ಯಾವುದೇ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗುವವರೆಗೂ ಆತನನ್ನು ಮುಗ್ಧ ಎಂದೇ ಪರಿಗಣಿಸಬೇಕಾಗುತ್ತದೆ’ ಎಂದು ಹೇಳಿದರು.

ಡಿಜಿಪಿ ಅಮ್ರಿತ್ ಪೌಲ್ ಅವರ ಬಂಧನದ ಬಗ್ಗೆ ಐಪಿಎಸ್‌ ಅಧಿಕಾರಿಗಳು ಯಾರೂ ತುಟ್ಟಿ ಬಿಚ್ಚುತ್ತಿಲ್ಲ. ಆದರೆ ಕೆಲವು ಅಧಿಕಾರಿಗಳು ವೈಯಕ್ತಿಕ ಮಟ್ಟದಲ್ಲಿ ಅನುಕಂಪ ವ್ಯಕ್ತಪಡಿಸಿದ್ದಾರೆ. ಆದರೆ, ಬಂಧನ ಇತರ ಅಧಿಕಾರಿಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ವ್ಯವಸ್ಥೆಯಲ್ಲಿ ತಪ್ಪು ಸರಿಪಡಿಸುವ ಕೆಲಸ ಅಗತ್ಯವಾಗಿ ಆಗಬೇಕು. ಹಲವು ಚಟುವಟಿಕೆಗಳಲ್ಲಿ ಅಧಿಕಾರಿಗಳಿಂದ ಸಾಕಷ್ಟು ಹಸ್ತಕ್ಷೇಪಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣವೇ ಇಲ್ಲವಾಗಿದೆ. ವೈಯಕ್ತಿವಾಗಿ ಬೇಸರ ಎನಿಸಿದರೂ, ವ್ಯವಸ್ಥೆಯ ದೃಷ್ಟಿಯಿಂದ ಇಂತಹ ಕ್ರಮ ಅಗತ್ಯ’ ಎಂದು ಐಪಿಎಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಐಪಿಎಸ್‌ ಅಧಿಕಾರಿಯನ್ನು ಬಲಿಪಶು ಮಾಡಬಾರದು. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಏಕೆಂದರೆ, ಪೌಲ್ ಏಕಾಂಗಿಯಾಗಿ ಈ ಕೆಲಸ ಮಾಡಿರಲಿಕ್ಕಿಲ್ಲ. ಸರ್ಕಾರದಲ್ಲಿ ಕೆಲವರ ಗಮನಕ್ಕೆ ಬಾರದೇ ಇವೆಲ್ಲ ನಡೆದಿಲ್ಲ’ ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT