ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳೇಶ್ವರ ಗುಹೆಯಲ್ಲೊಂದು ಬೆಳಗು

Last Updated 16 ಜೂನ್ 2018, 11:31 IST
ಅಕ್ಷರ ಗಾತ್ರ

ನಾವು ಪಾತಾಳೇಶ್ವರ ಗುಹಾಮಂದಿರದತ್ತ ಹೋದಾಗ ಎಳೆ ಬಿಸಿಲು ಮೂಡಿ ದೂರದಿಂದ ಗುಹೆಯು ಹೊಳೆಯುತ್ತಿತ್ತು. ನೆಲದಲ್ಲೆಲ್ಲಾ ಯಾವುದೋ ಅನಾಮಿಕ ಹೂವುಗಳು ಬಿದ್ದು ಆ ಕಲ್ಲಿನ ರಾಜಧಾನಿ ಹೂವಿನಂತೆಯೂ ಕಾಣುತ್ತಿತ್ತು.

ಪುಣೆ ಅನ್ನೋ ಸುಂದರ ನಗರಿಯಲ್ಲಿ ತಿರುಗಲು, ನೋಡಲು, ನಿಜವಾದ ಪುಳಕ ಅನುಭವಿಸಲು ಕೆಲವೊಂದು ಚಿತ್ತಾಕರ್ಷಕ ತಾಣಗಳಿವೆ. ಮುಂಬೈಯಂತೆ ಮಹಾನಗರದ ಜಂಜಡದಲ್ಲಿ ಪುಣೆ ಕಳೆದುಹೋಗದೆ ತನ್ನತನವನ್ನು, ಹಳೆಯ ಗತ್ತನ್ನು ಉಳಿಸಿಕೊಂಡಿದೆ. ತನ್ನನ್ನು ನೋಡಲು ಬರುವ ಸಾವಿರಾರು ಪ್ರವಾಸಿಗರನ್ನು ಪುಣೆ ಅನ್ನೊ ಐತಿಹಾಸಿಕ ನಗರಿ ಆ ದಿನಗಳ ತೆಕ್ಕೆಯಲ್ಲಿ ಹಾಯಾಗಿ ಜಾರಿಸುತ್ತದೆ.

ಪುಣೆ ಪೇಟೆಯ ಹೃದಯಭಾಗದಲ್ಲಿರುವ ಪಾತಾಳೇಶ್ವರ ಸ್ಮಾರಕವಂತೂ ನೋಡುಗರನ್ನು ಹಳೆಯ ಸೊಗಡಿನಲ್ಲಿ, ರಾಜಮಹಾರಾಜರ ದರ್ಪ ದೌಲತ್ತುಗಳ ಗತ ಘಳಿಗೆಗಳಲ್ಲಿ ಅದ್ದಿ ತೆಗಿಯುತ್ತದೆ. ಸುಮ್ಮನೆ ಈ ಸ್ಮಾರಕಗಳನ್ನು, ಇಲ್ಲಿನ ಭಾರೀ ಗಾತ್ರದ ಕಂಬಗಳನ್ನು ನಿರುಕಿಸುತ್ತಾ ಒಂದಷ್ಟು ಹೊತ್ತು ಕೂತರೆ ಮೈಮನಸ್ಸು ತುಂಬಾ ಹಿಂದಕ್ಕೋಡಿ ಆ ಕಂಬಗಳ ನೆರಳು ಬೆಳಕಿನ ನಡುವೆ ಜೀವನ ಪ್ರೀತಿಗೆ ಬೇಕಾಗಿದ್ದೆಲ್ಲವೂ ಸಿಕ್ಕೇ ಸಿಕ್ಕುತ್ತದೆ.

ಚೆಲುವಿನ ಹಂದರ

ಮಹಾರಾಷ್ಟ್ರದ ಪುಣೆಯ ಜಂಗ್ಲಿ ಮಹಾರಾಜ್ ರಸ್ತೆಯ ಹೃದಯ ಭಾಗದಲ್ಲಿರುವ ಈ ಪಾತಾಳೇಶ್ವರ ಗುಹಾ ಮಂದಿರ ಪೇಟೆಯ ಭಾರೀ ಗದ್ದಲಗಳ ನಡುವಲ್ಲಿದೆ. ಆದರೆ, ಇಲ್ಲಿನ ಕಲ್ಲುಕಲ್ಲುಗಳಲ್ಲೂ ವಿಚಿತ್ರವಾದ ಮೌನವಿದೆ. ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡ ಈ ಗುಹಾಮಂದಿರವನ್ನು ಸಂರಕ್ಷಿತ ಐತಿಹಾಸಿಕ ಸ್ಮಾರಕವೆಂದು ಘೋಷಿಸಲಾಗಿದೆ. ಮಂದಿರದ ಆವರಣಕ್ಕೆ ಪ್ರವೇಶವಾಗುತ್ತಿದ್ದಂತೆಯೇ ಕಣ್ಣು ಸೆಳೆಯುವ ದೈತ್ಯ ಆಲದ ಮರಗಳ ಹಿನ್ನೆಲೆಯಲ್ಲಿ ನುಣುಪು ಕಲ್ಲುಗಳಿಂದ ಹೊಳೆಯುತ್ತಾ ನಿಂತಿರುವ ಪಾತಾಳೇಶ್ವರ ಮಂದಿರ ನೋಡಿದರೆ ರಸ್ತೆಯಿಂದ ಭಾರೀ ಅಡಿಯಲ್ಲಿ ಇದ್ದಂತೆ ಕಾಣಿಸುತ್ತದೆ. ಪಾತಾಳದಲ್ಲಿರುವ ಈಶ್ವರನೇ ಪಾತಾಳೇಶ್ವರ.

ವಿಶಾಲವಾದ ಸಾಮ್ರಾಜ್ಯದಂತಿರುವ ಇಡೀ ಗುಹಾಮಂದಿರದ ನಿರ್ಮಾಣಕ್ಕೆ ಏಕಶಿಲಾ ಕಪ್ಪುಕಲ್ಲನ್ನು ಬಳಸಲಾಗಿದೆ. ಶಿವನೇ ಈ ಮಂದಿರದ ಮೂಲದೇವರು. ಆತನನ್ನು ಆರಾಧಿಸಲು ಪುಣೆಯ ಜನರು ಬಗೆಬಗೆಯ ಹೂವು, ಹಣ್ಣುಗಳನ್ನು ಪ್ರತಿದಿನ ತಂದು ಶಿವನ ಭಕ್ತಿಯಲ್ಲಿ ಲೀನರಾದರೂ, ಇದೊಂದು ಬರೀ ಆಡಂಬರದ ಭಕ್ತಿ ಇರುವ, ಧೂಪ ದೀಪದ ಪರಿಮಳವಿರುವ ಮಂದಿರವಾಗಿ ಉಳಿದಿಲ್ಲ. ಇಲ್ಲಿನ ಕಂಬಗಳ ಕಲಾಕುಸುರಿಯನ್ನು, ಗುಹೆಯನ್ನು ನಿರ್ಮಾಣ ಮಾಡಿದ ಶಿಲ್ಪಗಳ ಕಲಾಪ್ರೌಢಿಮೆಯನ್ನು ನೋಡಿ, ಇಲ್ಲಿನ ಅಗಾಧ ಮೌನಕ್ಕೆ, ಗುಹೆಯೊಳಗಿರುವ ಆಪ್ತ ಕತ್ತಲಿಗೆ ಶರಣಾಗುವ ಪ್ರವಾಸಿಗ ತನ್ನೊಳಗೆ ಅಗಾಧವಾದ ಇತಿಹಾಸದ ಕುರಿತ ಕಾಳಜಿ ಪ್ರೀತಿಯಿದ್ದರೆ ಅಷ್ಟು ಬೇಗಕ್ಕೆ ಇಲ್ಲಿಂದ ಹೊರಡಲು ಮನಸ್ಸು ಮಾಡುವುದಿಲ್ಲ.

ಕಲಾಭಿರುಚಿ ಇರುವವರಿಗಂತೂ ಇಲ್ಲಿನ ಶಾಂತತೆಯಲ್ಲಿ ಕೂತು ಮತ್ತೂ ಶಾಂತರಾಗುತ್ತ ಧ್ಯಾನ ಮಾಡಲು ಪ್ರೇರೇಸುತ್ತದೆ ಈ ಗುಹಾಮಂದಿರ. ಗುಹೆಯೊಳಗೆ ಶಿವಲಿಂಗನಿಗೆ ಭಕ್ತರೇ ಅಭಿಷೇಕ, ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ನಮಿಸುತ್ತಾರೆ. ಬರಿ ಶಿವನಷ್ಟೇ ಅಲ್ಲ. ಸೀತೆ, ಲಕ್ಷ್ಮಿ, ರಾಮ, ಲಕ್ಷ್ಮಣ, ಗಣಪತಿಯ ಮೂರ್ತಿಗಳೂ ಈ ಗುಹೆಯ ಸುತ್ತಲಿನಲ್ಲಿ ರಾರಾಜಿಸುತ್ತಿವೆ. ಗುಹೆಯ ಮಧ್ಯದಲ್ಲಿರುವ ಶಿವಲಿಂಗವೂ ಆಕರ್ಷಕವಾಗಿ ಕಂಡು ಭಕ್ತರ ಭಕ್ತಿ-ಭಾವಗಳಿಂದ ಇನ್ನಷ್ಟು ಕಳೆಗಟ್ಟಿದಂತೆ ಕಾಣುತ್ತದೆ.

ಸುಮಾರು 1,300 ವರ್ಷದಷ್ಟು ಹಳೆಯದಾಗಿರುವ ಈ ಮಂದಿರದ ವಾಸ್ತುಶಿಲ್ಪ ಆಕರ್ಷಕವಾಗಿದ್ದು, ಕೆಲವೊಂದು ಕಡೆ ಅಪೂರ್ಣ ಕೆತ್ತನೆಗಳೂ ಕಾಣಿಸುತ್ತವೆ. ಕಲ್ಲಿನ ಸೌಂದರ‍್ಯ ಪೂರ್ತಿಯಾಗುವುದುಂಟೇ? ಎಂದು ನಾವು ಆ ಅಪೂರ್ಣತೆಯಲ್ಲಿಯೂ ವಿಸ್ಮಯವನ್ನೇ ಕಾಣುತ್ತೇವೆ.

ದಣಿದು ಬಂದ ನಾವು ಕೊಂಚ ಬೆವರಿ ಒಳಗೆ ಹೋದರೆ ಕಲ್ಲಿನ ಬಿಸಿಯಿಂದ ಮೈ ಮತ್ತಷ್ಟು ಬಿಸಿಯಾಗಬಹುದು ಎಂದುಕೊಂಡು ಕತ್ತಲನ್ನೇ ನುಂಗಿಕೊಂಡು ವಿಶಾಲವಾಗಿ ಹರಡಿದ್ದ ಆ ಗುಹೆಯೊಳಗೆ ಕಾಲಿಟ್ಟಾಗ ಅಲ್ಲೊಂದು ಹಿತವಾದ ತಂಪಿತ್ತು. ಆ ತಂಪಗಿನ ವಾತಾವರಣದಲ್ಲಿ ಅಲ್ಲಿನ ಕಂಬಗಳು, ಕೆತ್ತನೆಗಳು, ಕಲ್ಲುಗಳ ನಡುವಿರುವ ಮಬ್ಬಾದ ಜಾಗ, ವಿಶೇಷವಾಗಿ ಸೆಳೆಯುತ್ತಿದ್ದ ದೈತ್ಯ ಕಲ್ಲಿನ ಚಪ್ಪಡಿಗಳೆಲ್ಲಾ ಅರೆಕ್ಷಣದಲ್ಲಿಯೇ ನಾವಿನ್ನೂ ಕಾಣದ ಲೋಕದತ್ತ ನಮ್ಮನ್ನು ಕಳೆದು ಹಾಕಿದವು. ಗುಹೆಯ ಸುತ್ತಲೂ ಸುತ್ತುತ್ತ ಹೋದಂತೆ ದೀರ್ಘ ಕತ್ತಲು ಆವರಿಸಿತು. ‌

ಮತ್ತೆ ಅರೆಕ್ಷಣದಲ್ಲೇ ಅಲ್ಲಿಯ ಕಿಟಕಿಯಿಂದ ಇಣುಕಿದ ಬೆಳಕು, ಗುಹೆಯಲ್ಲಿ ಬಿದ್ದು ಕಲ್ಲೆಲ್ಲಾ ಮಿಂಚಿ ಕೊನೆಗೆ ಮತ್ತೆ ಕತ್ತಲಲ್ಲಿ ಅಡಗಿದವು. ಆದರೂ, ಕತ್ತಲಲ್ಲೂ ಅಲ್ಲಲ್ಲಿ ಕಲ್ಲುಚಪ್ಪಡಿಗಳ ಹಿತವಾದ ಕೆತ್ತನೆ ಕಂಡು ಮೈಯಲ್ಲೆಲ್ಲಾ ರೋಮಾಂಚನದ ಬೆಳಕು, ಕಣ್ಣಲ್ಲೆಲ್ಲಾ ಖುಷಿಯ ಥಳುಕು ಮೂಡದೇ ಇರಲಿಲ್ಲ. ಮುಂದಕ್ಕೆ ಸಾಗುತ್ತಿದ್ದಂತೆಯೇ ಮಂದಿರದ ಕಿಟಕಿ ಸಿಕ್ಕಿತು. ಅಲ್ಲಿಂದ ನುಸುಳಿದ ರವಿ ವದನ, ಇದೇ ನೋಡು ಶಿವ ಸದನ, ಸೌಂದರ್ಯದ ಕವನ ಎಂದಿತು. ಆ ಬೆಳಕಿಗೆ ಉದ್ದಕ್ಕಿದ್ದ ಕಲ್ಲುಗಂಬಗಳೆಲ್ಲ ಭಾರೀ ಚೆಂದ ಕಾಣುತ್ತಿದ್ದವು. ಅಲ್ಲೇ ಕೂತಿದ್ದ ಅಜ್ಜಿಯೊಬ್ಬಳು ಕಂಬಗಳ ನಡುವೆಯೇ ಹೊಚ್ಚ ಹೊಸದಾಗಿ ತನ್ನ ಹರೆಯದ ದಿನಗಳನ್ನು ನೆನೆದುಕೊಳ್ಳುವಂತೆ ಕಂಡಳು. ಪಾತಾಳೇಶ್ವರದಲ್ಲಿರುವ ನಂದಿ ಮಂಟಪವೂ ಭಾರೀ ಸುಂದರವಾಗಿದೆ.

ಇಲ್ಲಿರುವ ಕಲ್ಲಿನ ಬೃಹತ್ ನಂದಿಯನ್ನು ನೋಡುತ್ತಾ ಕೂರಬೇಕು ಅನ್ನಿಸುವಷ್ಟು ಆ ನಂದಿಯ ಸೌಂದರ್ಯ ತುಂಬಿಕೊಂಡಿದೆ. ಆ ದಿನ ಎಷ್ಟು ಚೆಂದ ಇತ್ತಲ್ಲ. ಆ ಕಾಲದ ಕಂಬಗಳೋ? ಕಲ್ಲುಗಳೋ ಎಷ್ಟು ಚೆಂದ ಎಂದು ಆ ಕಾಲವನ್ನು ಮತ್ತೆ ಆಗಾಗ ನೆನಪಿನ ಪರದೆಯಲ್ಲಿ ಕಣ್ತುಂಬಿಕೊಳ್ಳುವವರು ಪಾತಾಳೇಶ್ವರ ಗುಹಾ ಮಂದಿರಕ್ಕೊಮ್ಮೆ ಹೋಗಲೇಬೇಕು. ಅಲ್ಲಿನ ಶಾಂತತೆಯಲ್ಲಿ ಕೂತು, ಆ ಕಲ್ಲಿನ ಕಲೆಯಲ್ಲಿ ಭಾವದ ಸೆಲೆಯಲ್ಲಿ ಅಲೆದಾಡಲೇಬೇಕು.

ಹೋಗೋದು ಹೇಗೆ?

ಪಾತಾಳೇಶ್ವರ ಗುಹಾ ಮಂದಿರ ಪುಣೆ ಪೇಟೆ ಮಧ್ಯವಿರುವುದರಿಂದ ಇಲ್ಲಿಗೆ ತಲುಪೋದು ಕಷ್ಟವೇನಲ್ಲ. ಜಂಗ್ಲಿ ಮಹಾರಾಜ್ ರಸ್ತೆಯಲ್ಲಿರುವ ಈ ಮಂದಿರಕ್ಕೆ ಪುಣೆ ಸಾರಿಗೆ ಬಸ್‌ಗಳ ಮೂಲಕ ಸುಲಭವಾಗಿ ತಲುಪಬಹುದು. ರೈಲಿನಲ್ಲಾದರೆ ಹತ್ತಿರದ ಪುಣೆ ರೈಲು ನಿಲ್ದಾಣ ತಲುಪಿ ಅಲ್ಲಿಂದ ಜಂಗ್ಲಿ ಮಹಾರಾಜ್ ರಸ್ತೆಯ ದಾರಿ ಹಿಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT