ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಯು ರೋಗಿಗಳ ಸ್ಥಿತಿಗತಿ ಮಾಹಿತಿ ಏಕಿಲ್ಲ: ಸಂಬಂಧಿಕರ ಪ್ರಶ್ನೆ

ತೀವ್ರ ನಿಗಾ ಘಟಕದಲ್ಲಿರುವ, ಮೃತ ರೋಗಿಗಳ
Last Updated 29 ಏಪ್ರಿಲ್ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ‌ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ. ಅದರಲ್ಲಿಯೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ನೋಡಲಾಗದೆ, ಅವರ ಸ್ಥಿತಿಗತಿ ತಿಳಿಯದೇ ಆತಂಕದಲ್ಲಿಯೇ ಇರಬೇಕಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ.

ಸರ್ಕಾರಿ ಕೋಟಾ ರೋಗಿಗಳ ನಿರ್ಲಕ್ಷ್ಯ
’ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗುವ ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನನ್ನ ಪತಿ ಏ.12ರಂದು ಶಾಂತಿನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದರು. ಆಮ್ಲಜನಕ ಮಟ್ಟ ಸ್ವಲ್ಪ ಕಡಿಮೆ ಇತ್ತು. ಬಿಬಿಎಂಪಿ ಕಡೆಯಿಂದ (ಸರ್ಕಾರಿ ಕೋಟಾ) ಅಡ್ಮಿಟ್‌ ಆಗಿದ್ದೆವು. ಮೊದಲಿಗೆ, ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಖಾಲಿ ಆಗಿದೆ. ತೆಗೆದುಕೊಂಡು ಬನ್ನಿ ಇಲ್ಲದಿದ್ದರೆ ₹ 1,800 ಕೊಡಿ ಎಂದರು. ಇಷ್ಟು ದುಡ್ಡೇಕೆ ನಾವು ಸರ್ಕಾರಿ ಕೋಟಾದಡಿ ದಾಖಲಾಗಿದ್ದೇವೆ ಎಂದು ಪ್ರಶ್ನಿಸಿದ್ದಕ್ಕೆ ವೈದ್ಯರು, ಶುಶ್ರೂಷಕರು ಅಸಮಾಧಾನಗೊಂಡರು. ನಾವೇ ಹೊರಗಿನಿಂದ ಇಂಜೆಕ್ಷನ್ ತಂದುಕೊಟ್ಟೆವು. ಪ್ರಶ್ನೆ ಮಾಡುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ನಮ್ಮ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದರು‘ ಎಂದು ಅವರ ಪತ್ನಿ ’ಪ್ರಜಾವಾಣಿ‘ಗೆ ತಿಳಿಸಿದರು.

’ಸರ್ಕಾರಿ ಕೋಟಾದಡಿ ದಾಖಲಾಗುವವರಿಗೆ ಮೀಸಲಾಗಿದ್ದ ಐಸಿಯು ಹಾಸಿಗೆ ಖಾಲಿ ಆಗಿದೆ. ನಿಮ್ಮ ಪತಿಯನ್ನು ಖಾಸಗಿ ಕೋಟಾದಡಿ ದಾಖಲಿಸಿದರೆ ಹಾಸಿಗೆ ಸಿಗಲಿದೆ. ಇಲ್ಲದಿದ್ದರೆ ನೀವು ಬೇರೆ ಆಸ್ಪತ್ರೆ ನೋಡಿಕೊಳ್ಳಬೇಕು ಎಂದರು. ಐಸಿಯು ಹಾಸಿಗೆ ನೀಡುವುದಕ್ಕೇ ನಾಲ್ಕು ದಿನ ಕಾಯಿಸಿದರು. ಪತಿಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದುದರಿಂದ ನಾವು ಖಾಸಗಿ ಕೋಟಾದಡಿ ದಾಖಲಿಸಲು ಒಪ್ಪಿಕೊಂಡೆವು. ಐಸಿಯುದಲ್ಲಿ ಒಂದು ವಾರ ಚಿಕಿತ್ಸೆ ನೀಡಿದರು. ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೆ ₹ 4,500 ಬಿಲ್ ಮಾಡಿದ್ದರು. ಎಲ್ಲ ಔಷಧ ಮತ್ತು ಆಸ್ಪತ್ರೆ ಖರ್ಚು ಸೇರಿ ₹ 3 ಲಕ್ಷ ಬಿಲ್ ಮಾಡಿದರು. ಪತಿ ಚೇತರಿಸಿಕೊಳ್ಳಲೇ ಇಲ್ಲ. ಏ.22ಕ್ಕೆ ತೀರಿಕೊಂಡರು‘ ಎಂದು ಅವರು ಕಣ್ಣೀರಾದರು.

’ಎಲ್ಲದರ ಬಿಲ್ ನನ್ನ ಬಳಿ ಇದೆ. ಮಧುಮೇಹ ಇರುವ ಬಗ್ಗೆ ನೀವು ಹೇಳಿರಲಿಲ್ಲ. ಅವರ ಸಾವಿಗೆ ಇದೂ ಕಾರಣ ಎಂದು ವೈದ್ಯರು ಹೇಳಿದರು. ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಇದೆ ಎಂದು ಮೊದಲೇ ಹೇಳಿದ್ದೆವು. ಆದರೆ, ಈ ಯಾವ ಮಾತ್ರೆಗಳನ್ನೂ ಅವರಿಗೆ ನೀಡಲಿಲ್ಲ. ಖಾಸಗಿ ಕೋಟಾಗೆ ಸೇರಿಸಿದ ಮೇಲೆ ಐಸಿಯು ಹಾಸಿಗೆ ನೀಡುವ ಬದಲು, ಸರ್ಕಾರಿ ಕೋಟಾದಡಿ ಆಸ್ಪತ್ರೆಗೆ ದಾಖಲಾದ ದಿನವೇ ಐಸಿಯುಗೆ ದಾಖಲು ಮಾಡಿಕೊಂಡಿದ್ದರೆ ನನ್ನ ತಂದೆ ಬದುಕುಳಿಯುತ್ತಿದ್ದರು‘ ಎಂದು ಮೃತರ ಮಗಳು ಹೇಳಿದರು.

ಆತ್ಮಹತ್ಯೆಯಲ್ಲ, ಕೊಲೆ: ಆರೋಪ
’ನನ್ನ ಮಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅವನ ಹೆಸರು ಕುಮಾರ್. 27 ವರ್ಷ. ಉಸಿರಾಟದ ಸಮಸ್ಯೆ ಇದ್ದಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೆವು. ಅವನಿಗೆ ಯಾವ ರೀತಿ ಚಿಕಿತ್ಸೆ ಕೊಡುತ್ತಿದ್ದರು, ಯಾವ ಔಷಧಿ ಕೊಡುತ್ತಿದ್ದರು ಎಂಬ ಮಾಹಿತಿಯನ್ನು ವೈದ್ಯರು ನೀಡುತ್ತಿರಲಿಲ್ಲ. ಸಾಯುವುದಕ್ಕೆ ಸ್ವಲ್ಪ ಹೊತ್ತು ಮುಂಚೆ ಕರೆ ಮಾಡಿ, ನನಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಇವರು ನನ್ನನ್ನು ಸಾಯಿಸಿ ಬಿಡುತ್ತಾರೆ ಎಂದು ಗೋಗರೆದಿದ್ದ. ಅದಾಗಿ ಕೆಲವೇ ತಾಸಿನ ನಂತರ ನಿಮ್ಮ ಮಗ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂದು ಆಸ್ಪತ್ರೆ ಸಿಬ್ಬಂದಿ ಬಂದು ಹೇಳಿದರು. ಇದು ಆತ್ಮಹತ್ಯೆಯಲ್ಲ, ಕೊಲೆ‘ ಎಂದು ಮೃತನ ತಾಯಿ ಆರೋಪಿಸಿದರು.

’ಐಸಿಯುದಲ್ಲಿರುವ ರೋಗಿಗಳ ಬಗ್ಗೆ ಸರಿಯಾಗಿ ಮಾಹಿತಿಯೇ ನೀಡುವುದಿಲ್ಲ. ಕೋವಿಡ್‌ ಇರುವುದರಿಂದ ಯಾರೂ ಹತ್ತಿರ ಬರುವಂತಿಲ್ಲ ಎಂದು ಹೇಳುತ್ತಾರೆ. ರೋಗಿಯ ಸ್ಥಿತಿಗತಿ ಕುರಿತು ದಿನಕ್ಕೆ ಕನಿಷ್ಠ ಎರಡು ಬಾರಿ ವೈದ್ಯರು ರೋಗಿಯ ಸಂಬಂಧಿಕರಿಗೆ ಮಾಹಿತಿ ನೀಡಬೇಕು. ಅಗತ್ಯ ಇರುವಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು‘ ಎಂದು ಮೃತನ ಸಂಬಂಧಿಕರು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕರೆ ಮಾಡಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ರೋಗಿಯ ಲಕ್ಷಣ ಆಧರಿಸಿ ಬಿಯು ಸಂಖ್ಯೆ ನೀಡಲಿ
’ನಾನು ಮತ್ತು ನನ್ನ ಪತಿ ಚಳಿ ಮತ್ತು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದೆವು. ಮೂರು ಬಾರಿ ಪರೀಕ್ಷೆ ಮಾಡಿದಾಗಲೂ ವರದಿ ನೆಗೆಟಿವ್‌ ಬಂದಿತ್ತು. ಆರ್‌ಟಿ ಪಿಸಿಆರ್‌ನಲ್ಲಿ ಪಾಸಿಟಿವ್‌ ಬಾರದೆ ಹೋದರೆ ಬಿಯು ಸಂಖ್ಯೆ ಸಿಗುವುದಿಲ್ಲ. ಬಿಯು ಸಂಖ್ಯೆ ಸಿಗದಿದ್ದರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಿಲ್ಲ. ಇತರೆ ರೋಗಿಗಳು ಎಂದರೂ ಹಲವು ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲಿಲ್ಲ. ಕೊನೆಗೆ, ಸಂಬಂಧಿಕರ ನೆರವಿನಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾದೆವು. ದಾಖಲಾದ ನಂತರವೂ ಶಿಷ್ಟಾಚಾರ ಎಂದುಕೊಂಡು ಇಂಜೆಕ್ಷನ್, ಆಕ್ಸಿಜನ್ ಕೊಡಲು ಎರಡು ದಿನ ತಡ ಮಡಿದರು. ಪತಿಯ ಆಮ್ಲಜನಕ ಮಟ್ಟ ಕಡಿಮೆಯಾದ ನಂತರ ಮೇಲೆ ಇಂಜೆಕ್ಷನ್, ಆಕ್ಸಿಜನ್ ನೀಡಿದರು. ಪತಿಯ ಆಮ್ಲಜನಕ ಮಟ್ಟ ಕುಸಿಯುತ್ತಾ ಹೋಗಿ ಅವರು ಅಸುನೀಗಿದರು. ನೆಗೆಟಿವ್‌ –ಪಾಸಿಟಿವ್‌ ವರದಿ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಬದಲು, ರೋಗಿಯ ಆರೋಗ್ಯ ಸ್ಥಿತಿ ಆಧರಿಸಿ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು‘ ಎಂದು ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಸುಮಾ ಚಂದ್ರಶೇಖರ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ವೈದ್ಯರು–ಶುಶ್ರೂಷಕರು ದೇವರಂತಿದ್ದರು’
‘ಜ್ವರ, ಉಸಿರಾಟದ ಸಮಸ್ಯೆ ಇತ್ತು. ಬಸವೇಶ್ವನಗರದಲ್ಲಿರುವ ಪುಣ್ಯ ಆಸ್ಪತ್ರೆಗೆ ದಾಖಲಾಗಿದ್ದೆ. ಪತ್ನಿ ಮತ್ತು ಕುಟುಂಬದ ಮತ್ತಿಬ್ಬರಿಗೂ ಸೋಂಕು ತಗುಲಿತ್ತು. ಅವರು ಮೂರು ಜನ ಹೋಂ ಐಸೊಲೇಶನ್‌ನಲ್ಲಿದ್ದರೆ, ನಾನು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದೆ. ಮೊದಲ ಎರಡು ದಿನ ರೆಮ್‌ಡಿಸಿವಿರ್ ಇಂಜೆಕ್ಷನ್ ಇಲ್ಲ ಎಂದಾಗ ಆತಂಕಗೊಂಡಿದ್ದೆ. ಆದರೆ, ವೈದ್ಯರು ತುಂಬಾ ಧೈರ್ಯ ತುಂಬಿದರು. ಉತ್ತಮ ಚಿಕಿತ್ಸೆ ನೀಡಿದರು. ಈಗ ಸಂಪೂರ್ಣ ಗುಣಮುಖನಾಗಿ ಬಂದಿದ್ದೇನೆ’ ಎಂದು ಆರ್. ಶಶಿಧರ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾತ್ರಿಯಾದರೂ ನರ್ಸ್‌ಗಳು ಮತ್ತು ವಾರ್ಡ್‌ ಬಾಯ್‌ ಗಳು ನಮ್ಮ ಮೇಲೆ ನಿಗಾ ಇಟ್ಟಿರುತ್ತಿದ್ದರು. ಬೇಕು–ಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ದಿನಕ್ಕೆ ಮೂರು ಬಾರಿ ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದರು’ ಎಂದರು.

‘ವೈದ್ಯಕೀಯ ವಿಮೆ ಇದ್ದುದರಿಂದ ಚಿಕಿತ್ಸಾ ಶುಲ್ಕ ಭರಿಸುವುದು ಕಷ್ಟವಾಗಲಿಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT