ಹೆಸರಘಟ್ಟ: ಭಾರತೀಯ ಕೃಷಿ ಅಧ್ಯಯನ ಪರಿಷತ್–ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಸಿಎಆರ್-ಐಐಎಚ್‌ಆರ್) ರೈತರು ಮತ್ತು ತೋಟಗಾರಿಕಾ ಬೆಳೆಗಾರರ ಅನುಕೂಲಕ್ಕಾಗಿ 8 ಬಗೆಯ ಸೌಲಭ್ಯ ಕೇಂದ್ರಗಳನ್ನು ಉದ್ಘಾಟಿಸಲಾಯಿತು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾ ನಿರ್ದೇಶಕ ಹಿಮಾಂಶು ಪಾಠಕ್ ಈ ಕೇಂದ್ರಗಳನ್ನು ಉದ್ಘಾಟಿಸಿದರು.
ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಸುಮಾರು 330 ಮಿಲಿಯನ್ ಮೆಟ್ರಿಕ್ ಟನ್‌ಗಳಾಗಿದೆ. ತೋಟಗಾರಿಕಾ ಬೆಳೆಗಳ ಉತ್ಪಾದನೆ ಸುಮಾರು 350 ಮಿಲಿಯನ್ ಮೆಟ್ರಿಕ್ ಟನ್. ಈ ಮೂಲಕ ದೇಶದ ಜನರ ಆಹಾರ ಭದ್ರತೆಯಲ್ಲದೆ ಪೋಷಕಾಂಶ ಭದ್ರತೆಗೂ ಖಾತ್ರಿಪಡಿಸಿಕೊಳ್ಳಲಾಗಿದೆ. ಇದಲ್ಲದೆ ತೋಟಗಾರಿಕಾ ಉತ್ಪನ್ನಗಳ ರಫ್ತಿನಿಂದ ದೇಶದ ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹಿಮಾಂಶು ಪಾಠಕ್ ತಿಳಿಸಿದರು.
ಸೌಲಭ್ಯ ಕೇಂದ್ರಗಳು ವಿದ್ಯಾರ್ಥಿಗಳ, ರೈತರ, ನವೋದ್ಯಮಿಗಳ ಹಾಗೂ ತೋಟಗಾರಿಕೆಯ ಇತರ ಪಾಲುದಾರರಿಗೆ ಅತ್ಯಮೂಲ್ಯವಾಗಿದ್ದು ತನ್ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳ ಭೋಜನಾಲಯ, ಸಸ್ಯ ಆರೋಗ್ಯ ಚಿಕಿತ್ಸಾಲಯ, ಸಸ್ಯ ಮಾಲ್(ನರ್ಸರಿ), ಕರ್ನಾಟಕ ವಿದೇಶಿ ಹಣ್ಣುಗಳ ಬೆಳೆಗಾರರ ಸಂಘದ ಘಟಕ, ಕಮಲಂ (ಡ್ರ್ಯಾಗನ್) ಹಣ್ಣಿನ ಶ್ರೇಷ್ಠತೆಯ ಕೇಂದ್ರ, ಕೃಷಿ ವ್ಯಾಪಾರ ಪೋಷಣ ಕೇಂದ್ರ, ಅಣಬೆ ಬೀಜೋತ್ಪಾದನೆ ಹಾಗೂ ಬೆಳೆಗಾರರ ಸಾಮರ್ಥ್ಯ ಅಭಿವೃದ್ಧಿ ಕೇಂದ್ರ, ಎಚ್ಎಎಲ್ ಸಹಭಾಗಿತ್ವದೊಂದಿಗೆ ಬೀಜ ಉತ್ಪಾದನಾ ಕೇಂದ್ರ ಉದ್ಘಾಟನೆಗೊಂಡವು.
ವಿವಿಧ ಏಜೆನ್ಸಿಗಳ ಆರ್ಥಿಕ ನೆರವಿನೊಂದಿಗೆ ಈ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ ಎಂದು ಐಐಎಚ್ಆರ್ ತಿಳಿಸಿದೆ.
ಐಐಎಚ್ಆರ್ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್, ಎಚ್ಎಎಲ್ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎಸ್. ಶ್ರೀನಿವಾಸ್, ಕೆಇಎಫ್ಎ ಅಧ್ಯಕ್ಷ ಎಸ್.ಡಿ. ಬಾಬು ಸಿದ್ದಕುಮಾರ್, ಜಂಟಿ ಕೃಷಿ ನಿರ್ದೇಶಕಿ ದೀಪಜ, ಡಾ.ವಿ.ಬಿ. ಪಾಟೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.