ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಪಡಿ ತೆರವು: ಎಇಇ ಮಾತೃ ಇಲಾಖೆಗೆ ವಾಪಸ್‌

Last Updated 23 ಜನವರಿ 2020, 10:41 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸದೆಯೇಜೋಪಡಿ ತೆರವುಗೊಳಿಸಲು ಕ್ರಮ ಕೈಗೊಂಡ ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಟಿ.ಎಂ.ನಾರಾಯಣ ಸ್ವಾಮಿ ಅವರನ್ನು ಬಿಬಿಎಂಪಿ ಕರ್ತವ್ಯದಿಂದ ಬಿಡುಗಡೆ ಮಾಡಿ, ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ವಾಪಸ್‌ ಕಳುಹಿಸಿದೆ.

ನಾರಾಯಣ ಸ್ವಾಮಿ ಅವರು ಪಾಲಿಕೆಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದರು.

‘ಬೆಳ್ಳಂದೂರು ವಾರ್ಡ್‌ನ ಕರಿಯಮ್ಮನ ಅಗ್ರಹಾರ ಗ್ರಾಮದ ಮಂತ್ರಿ ಎಸ್ಪಾನ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಕ್ಕದ ಖಾಸಗಿ ಪ್ರದೇಶದಲ್ಲಿ ಬಾಂಗ್ಲಾದೇಶದ ನಿವಾಸಿಗಳು ಅನಧೀಕೃತವಾಗಿ ಜೋಪಡಿ ನಿರ್ಮಿಸಿಕೊಂಡಿದ್ದು, ಈ ಪ್ರದೇಶವನ್ನು ಕೊಳಚೆ ಪ್ರದೇಶವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ಹದಗೆಟ್ಟ ವಾತಾವರಣ ಸೃಷ್ಟಿಯಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶೆಡ್‌ಗಳ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಬೇಕಿದೆ. ಈ ಸಮಯದಲ್ಲಿ ಭದ್ರತೆ ಒದಗಿಸಬೇಕು’ ಎಂದು ಕೋರಿ ಅವರು ಇದೇ 18ರಂದು ಮಾರತ್ತಹಳ್ಳಿ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದಿದ್ದರು.

‘ಮಹದೇವಪುರ ವಲಯದ ಜಂಟಿ ಆಯುಕ್ತರು ಹಾಗೂ ವಲಯ ಆಯುಕ್ತರ ಗಮನಕ್ಕೂ ತಾರದೆ ಅವರ ಅನುಮತಿಯನ್ನೂ ಪಡೆಯದೆಯೇ ಎಇಇ ಅವರು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದು ಕರ್ತವ್ಯಲೋಪ. ಅವರ ಸೇವೆ ಪಾಲಿಕೆಗೆ ಅಗತ್ಯವಿಲ್ಲ. ಅವರನ್ನು ಮಾತೃ ಇಲಾಖೆ ಕಳುಹಿಸುವ ಸಲುವಾಗಿ ನಗರಾಭಿವೃದ್ಧಿ ವಶಕ್ಕೆ ನೀಡಲಾಗಿದೆ’ ಎಂದು ಬಿಬಿಎಂಪಿ ಸೋಮವಾರ ಹೊರಡಿಸಿರುವ ಕಚೇರಿ ಆದೇಶದಲ್ಲಿ ತಿಳಿಸಿದೆ.

ಅಮಾನತಿಗೆ ಶಿಫಾರಸು

ಆಯುಕ್ತರ ಅನುಮತಿ ಪಡೆಯದೆ ಸ್ವ–ಇಚ್ಛೆಯಿಂದ ತೆರವು ಕಾರ್ಯಾಚರಣೆ ನಡೆಸಿರುವ ನಾರಾಯಣ ಸ್ವಾಮಿ ಗಂಭೀರ ಕರ್ತವ್ಯಲೋಪ ಎಸಗಿರುವುದರಿಂದ ಇಲಾಖಾ ವಿಚಾರಣೆ ನಡೆಸಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದೆ.

ಅವರು ಎಸಗಿರುವ ಕರ್ತವ್ಯ ಲೋಪದ ಕರಡು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT