ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತ

ಇಂದಿರಾ ನಗರದಲ್ಲಿ ಕಟ್ಟಡ ನಿಯಮ ಉಲ್ಲಂಘನೆ: ಬೆಸ್ಕಾಂ ಕ್ರಮ
Last Updated 4 ನವೆಂಬರ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ಹಾಗೂ ಅಗ್ನಿಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ಇಂದಿರಾನಗರದಲ್ಲಿನ 14 ಬಹುಮಹಡಿ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಸೋಮವಾರ ಕಡಿತಗೊಳಿಸಿದೆ.

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ಕೆಎಫ್‌ಇಎಸ್‌) ಇಲಾಖೆ ನೀಡಿದ ವರದಿ ಆಧರಿಸಿ ಬೆಸ್ಕಾಂ ಈ ಕ್ರಮವನ್ನು ಕೈಗೊಂಡಿದೆ.

‘ಅನುಮತಿ ಪಡೆದಿದ್ದಕ್ಕಿಂತ ಹೆಚ್ಚುವರಿ ಅಂತಸ್ತುಗಳನ್ನು ಕಟ್ಟುವ ಮೂಲಕ ಬಿಬಿಎಂಪಿಯ ಕಟ್ಟಡ ನಿಯಮವನ್ನು ಈ ಬಹುಮಹಡಿ ಕಟ್ಟಡಗಳ ಮಾಲೀಕರು ಉಲ್ಲಂಘಿಸಿದ್ದರು. ಅಲ್ಲದೆ, ಅಗ್ನಿ ಸುರಕ್ಷತೆ ನಿಯಮಗಳನ್ನೂ ಈ ಕಟ್ಟಡಗಳು ಉಲ್ಲಂಘಿಸಿದ್ದವು. ಈ ಕಾರಣದಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕಟ್ಟಡವು 15 ಮೀಟರ್‌ಗಿಂತ ಹೆಚ್ಚಿನ ಎತ್ತರ ಹೊಂದಿದ್ದರೆ ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪಡೆಯಬೇಕು. ಈ ಕಟ್ಟಡಗಳು ಅನುಮತಿ ಪಡೆದಿರಲಿಲ್ಲ. ಅಲ್ಲದೆ, ನಿಯಮ ಮೀರಿ ಹೆಚ್ಚುವರಿ ಅಂತಸ್ತುಗಳನ್ನು ಕಟ್ಟಿದ್ದರಿಂದ ಅವು ಅಪಾಯಕಾರಿ ಸ್ಥಿತಿಯಲ್ಲಿದ್ದವು. ತಿಂಗಳ ಹಿಂದೆಯೇ ಈ ಕುರಿತು ಬೆಸ್ಕಾಂಗೆ ವರದಿ ಸಲ್ಲಿಸಲಾಗಿತ್ತು. ಅಲ್ಲದೆ, ಇತ್ತೀಚೆಗೆ ಈ ಕುರಿತು ಸಭೆಯೂ ನಡೆದಿತ್ತು. ಈ ಕಟ್ಟಡಗಳು 21 ಮೀಟರ್‌ಗಿಂತ ಹೆಚ್ಚು ಎತ್ತರ ಹೊಂದಿದ್ದು, ಅತಿ ಅಪಾಯಕಾರಿಯಾಗಿವೆ’ ಎಂದು ಕೆಎಫ್‌ಇಎಸ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತವಾಗಿ ಹದಿನಾಲ್ಕು ಕಟ್ಟಡಗಳನ್ನು ಗುರುತಿಸಿದ್ದೇವೆ. ಇದೇ ರೀತಿ ಸುರಕ್ಷತೆಯಿಲ್ಲದ, ಅಪಾಯಕಾರಿಯಾಗಿರುವ ಉಳಿದ ಕಟ್ಟಡಗಳ ವಿವರವನ್ನು ಶೀಘ್ರವೇ ಬೆಸ್ಕಾಂಗೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತ ಜಿ.ಎಂ. ರವೀಂದ್ರ, ‘ಈ ಕುರಿತು ವರದಿ ನೀಡುವಂತೆ ನಾವು ಅಗ್ನಿಶಾಮಕ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಆದರೆ, ಅವರು ಬೆಸ್ಕಾಂಗೆ ವರದಿ ನೀಡಿದ್ದಾರೆ.

ಅದರಂತೆ ಬೆಸ್ಕಾಂ ಈ ಕ್ರಮಕೈಗೊಂಡಿದೆ. ಕಟ್ಟಡ ನಿಯಮ ಉಲ್ಲಂಘಿಸಿರುವ ಕಾರಣ ನಾವು ಈಗಾಗಲೇ ಈ ಬಹುಮಹಡಿ ಕಟ್ಟಡಗಳಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಇದಲ್ಲದೆ, ಈ ಕಟ್ಟಡಗಳಿಗೆ ನೀಡಲಾಗಿರುವ ವ್ಯಾಪಾರ ಪರವಾನಗಿ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ರದ್ದು ಮಾಡುವ ಕುರಿತು ಹಿರಿಯ ಅಧಿಕಾರಿಗಳ ಅನುಮತಿ ಕೇಳಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT