ಫ್ಲೆಕ್ಸ್‌ ತೆರವಿಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ

7
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ

ಫ್ಲೆಕ್ಸ್‌ ತೆರವಿಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ

Published:
Updated:

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಿಂಚಿತ್ತೂ ದಾಕ್ಷಿಣ್ಯ ತೋರುವ ಪ್ರಮೇಮಯವೇ ಇಲ್ಲ ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಸೇರಿದಂತೆ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ‘ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ನೀತಿಯ ಕುರಿತಂತೆ ಇನ್ನೂ ಏಕೆ ತೀರ್ಮಾನ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘2016 ರಲ್ಲೇ ಈ ನೀತಿ ರೂಪಿಸಿರುವುದಾಗಿ ಹೇಳುತ್ತಿದ್ದೀರಿ. ಆದರೆ ಇಷ್ಟು ದಿನ ಕಳೆದರೂ ಕಡತವನ್ನು ಅಡಿಗೆ ಹಾಕಿಕೊಂಡು ಕುಳಿತಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಈ ರೀತಿಯ ನಿರ್ಲಕ್ಷ್ಯಕ್ಕೆ ಅಧೀನ ಅಧಿಕಾರಿಗಳನ್ನು ಹೊಣೆಗಾರಿಕೆಯನ್ನಾಗಿ ಮಾಡುವ ಬದಲು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಹೊಣೆ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಇದು ನಿರ್ಲಕ್ಷ್ಯದ ಪರಮಾವಧಿ. ವ್ಯವಸ್ಥೆಗೆ ಅಧಿಕಾರಿಗಳು ಮಾಡುತ್ತಿರುವ ಅವಮಾನ ಎಂದರಲ್ಲದೆ, ಜಾಹೀರಾತು ನೀತಿ ಕುರಿತಂತೆ ಸಮಗ್ರ ಮತ್ತು ಸ್ಪಷ್ಟವಾದ ರೂಪುರೇಷೆಯೊಂದಿಗೆ ಕೋರ್ಟ್‌ಗೆ ವಿಶದಪಡಿಸಿ’ ಎಂದು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರಿಗೆ ತಾಕೀತು ಮಾಡಿದರು.

‘ನೀವೇನು ಮಾಡುತ್ತೀರೆಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು. ಸಮಸ್ಯೆ ಬಗೆಹರಿಯಬೇಕು. ಬೆಂಗಳೂರನ್ನು ಫ್ಲೆಕ್ಸಗಳಲ್ಲಿ ನೋಡುವುದು ಬೇಡ. ಸ್ವಾಭಾವಿಕ ಸೌಂದರ್ಯದಲ್ಲೇ ನೋಡುವಂತಾಗಬೇಕು’ ಎಂದರು.

ಫ್ಲೆಕ್ಸ್‌ಗಳನ್ನು ತೂಗು ಹಾಕುವವರ ಮನಸ್ಥಿತಿ ಸಂಘಟಿತ ಅಪರಾಧಿಗಳ ಮನಸ್ಥಿತಿಯಂತಿದೆ ಎಂದ ಅವರು, ಈ ಅರ್ಜಿಗಳನ್ನು ನಾನು ನಿತ್ಯವೂ ವಿಚಾರಣೆ ನಡೆಸಲು ತಯಾರಿದ್ದೇನೆ ಎಂದರು. ವಿಚಾರಣೆಯನ್ನು ಇದೇ 10 ಕ್ಕೆ ಮುಂದೂಡಲಾಗಿದೆ.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜಬರಲ್ ಎ.ಎಸ್. ಪೊನ್ನಣ್ಣ, ಬಿಬಿಎಂಪಿ ಪರ ವಿ‌.ಶ್ರೀನಿಧಿ, ಅರ್ಜಿದಾರರ ಪರ ರಮೇಶ್‌ಚಂದ್ರ, ಜಿ.ಆರ್.ಮೋಹನ್ ಮತ್ತು ಪರವಾನಗಿ ಪಡೆದು ಜಾಹೀರಾತು ಫಲಕಗಳನ್ನು ಹಾಕಿರುವವರ ಪರವಾಗಿ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !