ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣ ಖರೀದಿ: ಕಾಂಗ್ರೆಸ್ ತರಾಟೆ

Last Updated 29 ಜೂನ್ 2021, 21:56 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿರ್ವಹಣೆಗಾಗಿ ವೈದ್ಯಕೀಯ ಉಪಕರಣಗಳ ಖರೀದಿಯ ವಿಧಾನ ಮತ್ತು ಹಣದ ನಿಗದಿಯಲ್ಲಿ ಹಲವು ಸಂಶಯಗಳಿವೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ತಕರಾರು ಎತ್ತಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಈ ಸಂಬಂಧ ಕೆಲವು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳಿಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದ್ದಾರೆ.

ಕೆಲವು ಪ್ರಶ್ನೆಗಳು ಹೀಗಿವೆ
* ರಕ್ತ ಪರೀಕ್ಷೆ ಸಾಧನವನ್ನು (ಹೆಮಟಲಾಜಿ ಸೆಲ್‌ ಕೌಂಟ್ಸ್‌) ರಾಜ್ಯ ಸರ್ಕಾರ ಪ್ರತಿ ಯೂನಿಟ್‌ಗೆ ₹2,96,180 ನೀಡಿ 1.195 ಯೂನಿಟ್‌ಗಳನ್ನು ಖರೀದಿಸಿದೆ. ಆದರೆ, ಇದೇ ಯೂನಿಟ್‌ಗೆ ಹಿಮಾಚಲಪ್ರದೇಶ ರಾಜ್ಯವು ಕೇವಲ ₹1.30 ಲಕ್ಷ ನೀಡಿ ಖರೀದಿಸಿದೆ. ಈ ವ್ಯತ್ಯಾಸ ₹25 ಕೋಟಿಗೂ ಅಧಿಕವಾಗಿದೆ.

*ರಾಜ್ಯ ಸರ್ಕಾರವು ಮೆ: ಸಿಸ್ಮೆಕ್‌ ಕಾರ್ಪೊರೇಷನ್‌ ಲಿ.ರವರಿಂದಹೆಮಟಲಾಜಿ ಸೆಲ್‌ ಕೌಂಟ್ಸ್‌ ಪ್ರತಿ ಯುನಿಟ್‌ಗೆ ₹8,35,000 ನೀಡಿ 165 ಯುನಿಟ್‌ಗಳನ್ನು ಖರೀದಿಸಿದೆ. ಆದರೆ, ಇದೇ ಸಾಧನವನ್ನು ಕೇರಳ ಕೇವಲ ₹4,60,200 ನೀಡಿ ಖರೀದಿಸಿದೆ. ಇದರ ವ್ಯತ್ಯಾಸ ₹6.18 ಕೋಟಿ ಆಗಿದೆ.

*ಮೊದಲ ಬಾರಿಗೆ ರ್‍ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ಖರೀದಿಸಲು ಆಹ್ವಾನಿಸಿದ್ದ ದರಪಟ್ಟಿಯನ್ನು ಏಕೆ ಅಂತಿಮಗೊಳಿಸಲಿಲ್ಲ.

*ಬಹುಪಾಲು ಮೊದಲ ಬಾರಿ ದರಪಟ್ಟಿ ಸಲ್ಲಿಸಿದ್ದ ಕಂಪನಿಗಳೇ ಎರಡನೇ ಬಾರಿ ದರ ಪಟ್ಟಿ ಆಹ್ವಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸುವಲ್ಲಿ ವಿಳಂಬ ಏಕಾಯಿತು.

* ಆರೋಗ್ಯ ಇಲಾಖೆಯು ರಚಿಸಿದ್ದ ಕಾರ್ಯಪಡೆ ಔಷಧ ಖರೀದಿಗೆ ₹80.34 ಕೋಟಿಗಳಿಗೆ ಅನುಮತಿ ನೀಡಿದ್ದರೂ, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ನಿಧಾನಗತಿಯಲ್ಲಿ ಕೆಲಸ ಮಾಡಿದ್ದರಿಂದ ಔಷಧ ದಾಸ್ತಾನು ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ತಜ್ಞರ ತಂಡಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದರೂ ನಿಗಮ ಕುಂಟುತ್ತಾ ಕಾರ್ಯನಿರ್ವಹಿಸುತ್ತಿದೆ.

* ಕಪ್ಪು ಶಿಲೀಂಧ್ರ ರೋಗಕ್ಕೆ ಸಂಬಂಧಿಸಿದಂತೆ ಮೆ ಮೈಲಾನ್‌ ಫಾರ್ಮಾಸುಟಿಕಲ್ಸ್‌ ಸಂಸ್ಥೆ ಎರಡನೇ ಬಿಡ್‌ದಾರರಾಗಿದ್ದರೂ, ಆ ಸಂಸ್ಥೆಯಿಂದ ಆಂಪೋಟೆರಿಸಿನ್‌ ಔಷಧ ಖರೀದಿಸಿದ್ದರಿಂದ ರಾಜ್ಯಕ್ಕೆ ಹೆಚ್ಚುವರಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT