ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ₹ 6700 ದಂಡ

ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮರಾಟ– ಮಳಿಗೆಗಳ ಮೇಲೆ ದಿಢೀರ್‌ ದಾಳಿ
Last Updated 23 ಮಾರ್ಚ್ 2021, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕೋಟ್ಪಾ ಕಾಯ್ದೆ ಉಲ್ಲಂಘಿಸಿ ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 15 ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿದ್ದ 8 ಮಂದಿಗೆ ಬಿಬಿಎಂಪಿ ಪಶ್ಚಿಮ ವಲಯದ ಆರೋಗ್ಯ ಅಧಿಕಾರಿಗಳು ಮಂಗಳವಾರ ಒಟ್ಟು ₹ 6,700 ದಂಡ ವಿಧಿಸಿದರು.

ಕಾಯ್ದೆ ಉಲ್ಲಂಘಿಸಿ ಬಿಡಿ ಬಿಡಿಯಾಗಿ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು ಹಾಗೂ ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆಯಿತು.

ಮಲ್ಲೇಶ್ವರ ಬಡಾವಣೆ, ರಾಜಾಜಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವಾಣಿಜ್ಯ ಸಂಕೀರ್ಣ, ಪಿಇಎಸ್ ಕಾಲೇಜು ಸೇರಿದಂತೆ ಹಲವಾರು ಶಾಲಾ-ಕಾಲೇಜು ಸುತ್ತಮುತ್ತಲಿನಬೇಕರಿಗಳು, ಟೀ ಅಂಗಡಿಗಳು ಹಾಗೂ ಇತರ ಮಳಿಗೆಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದರು.

‘ಕೋಟ್ಪಾ ಕಾಯ್ದೆ ಪ್ರಕಾರ ತಂಬಾಕು ಉತ್ಪನ್ನ ಮಾರಾಟ ಮಾಡಲು ಅವಕಾಶ ಇರುವ ಅಂಗಡಿಗಳಲ್ಲೂ ‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬ ಫಲಕ ಪ್ರದರ್ಶಿಸಬೇಕು. ತಂಬಾಕು ಉತ್ಪನ್ನಗಳು ಬಿಡಿಯಾಗಿ ಮಾರುವಂತೆಯೇ ಇಲ್ಲ. ಈ ಕಾಯ್ದೆಯನ್ನು ಉಲ್ಲಂಘಿಸಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಡಾ.ಮನೋರಂಜನ್ ಹೆಗ್ಡೆ ಎಚ್ಚರಿಕೆ ನೀಡಿದರು.

‘ಸಾರ್ವಜನಿಕ ಸ್ಥಳಗಳ್ಲಿ ಧೂಮಪಾನ ನಡೆಸಿದವರಿಗೆ ₹ 200 ದಂಡ ವಿಧಿಸುತ್ತೇವೆ. ಶಾಲಾ ಕಾಲೇಜು ಸಮೀಪದ ಅಂಗಡಿಗಳಲ್ಲಿ ಅಕ್ರಮ ದಾಸ್ತಾನು ಇಟ್ಟುಕೊಂಡ ತಂಬಾಕು ಉತ್ಪನ್ನಗಳ ಪ್ರಮಾಣದ ಆಧಾರದಲ್ಲಿ ದಂಡ ವಿಧಿಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT