ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ: ಸರ್ಕಾರದ ನಡೆಗೆ ಹೈಕೋರ್ಟ್‌ ಅಸಮಾಧಾನ

Last Updated 18 ಅಕ್ಟೋಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸರ್ಕಾರ ಕೋರ್ಟ್ ಆದೇಶಗಳನ್ನು ಸಮಪರ್ಕವಾಗಿ ಪಾಲನೆ ಮಾಡುತ್ತಿಲ್ಲ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಅನುಸಾರ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಂತೆ ಕಳೆದ ತಿಂಗಳು 16ರಂದು ನೀಡಿದ್ದ ಆದೇಶ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿ) ಕಾಯ್ದೆ-2004ರ ಪ್ರಕಾರ ಐಎಂಎ, ಆ್ಯಂಬಿಡೆಂಟ್ ಸೇರಿದಂತೆ 9 ವಂಚಕ ಕಂಪೆನಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಕಳೆದ ತಿಂಗಳ 27ರಂದು ನೀಡಿದ್ದ ಆದೇಶ ಪಾಲನೆಯಾಗಿಲ್ಲ’ ಎಂದಿದೆ.

‘ಸರ್ಕಾರದ ವೈಫಲ್ಯಗಳ ಬಗ್ಗೆ ಸ್ಪಷ್ಟನೆ ನೀಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಮಾಣಪತ್ರ ಸಲ್ಲಿಸಬೇಕು. ಅಂತೆಯೇ ಕೋರ್ಟ್‌ ಆದೇಶದ ಅನುಸಾರ ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಇಲ್ಲವಾದರೆ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿರುವ ನ್ಯಾಯಪೀಠ, ‘ಒಂಬತ್ತು ವಂಚಕ ಕಂಪೆನಿಗಳ ವಿರುದ್ಧದ ತನಿಖಾ ಪ್ರಗತಿಯ ವರದಿಯನ್ನು ಇದೇ 31ರೊಳಗೆ ಕೋರ್ಟ್‌ಗೆ ಸಲ್ಲಿಸಬೇಕು’ ಎಂದೂ ನಿರ್ದೇಶಿಸಿದೆ.

‘ಆ್ಯಂಬಿಡೆಂಟ್ ವಂಚನೆ ಸಂಬಂಧ ಇದೇ 30ರೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸಿ’ ಎಂದು ಪೀಠ ನಿರ್ದೇಶಿಸಿದೆ.

‘ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT