ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ: ‘ಲಾಭ’ವೇ ಇಲ್ಲದೆ ₹ 123 ಕೋಟಿ ತೆರಿಗೆ ಪಾವತಿ!

Last Updated 16 ಮಾರ್ಚ್ 2020, 4:58 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ಹಣ ವಂಚಿರುವ ಐಎಂಎ (ಐ-ಮಾನಿಟರಿ ಅಡ್ವೈಸರಿ) ಕಂಪನಿ, ತಾನು ಭಾರಿ ‘ಲಾಭದಾಯಕ’ ಸಂಸ್ಥೆ ಎಂದು ಬಿಂಬಿಸಿಕೊಳ್ಳಲು ₹ 123 ಕೋಟಿ ಆದಾಯ ತೆರಿಗೆ ಪಾವತಿಸಿದೆ!

ಅಷ್ಟೇ ಅಲ್ಲದೆ, ಉತ್ತರ ಪ್ರದೇಶದಲ್ಲೂ ಐಎಂಎ ಸಂಸ್ಥೆ ಆಸ್ತಿ ಖರೀದಿಸಿರುವುದು ಪತ್ತೆಯಾಗಿದೆ. ಕಂಪನಿಗೆ ಸೇರಿದ 43 ಆಸ್ತಿಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಈ ಪೈಕಿ, 19 ಆಸ್ತಿಗಳಿಗೆ ಐಎಂಎ ಖಾತೆಯಿಂದ ಹಣ ಹೋಗಿರುವುದು ಖಚಿತವಾಗಿದೆ. ಉಳಿದ 23 ಆಸ್ತಿಗಳ ಮಾರಾಟಕ್ಕೆ ಸಂಬಂಧ ಈ ಆಸ್ತಿಗಳ ಖರೀದಿದಾರರು, ಹಣ ಪಾವತಿ, ಬ್ಯಾಂಕ್ ಖಾತೆಗಳನ್ನು ಕ್ರಯಪತ್ರಗಳನ್ನು ಆಧರಿಸಿ ಪತ್ತೆ ಹಚ್ಚುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಈ ಪ್ರಕರಣದಲ್ಲಿ ಸಿಬಿಐ ಪರವಾಗಿ ಫೋರೆನ್ಸಿಕ್‌ ಆಡಿಟ್‌ ಸಂಸ್ಥೆ ಡೆಲೋಯಿಟ್, ಐಎಂಎ ಕಂಪನಿಯ ಲೆಕ್ಕ ಪರಿಶೋಧನೆ ನಡೆಸುತ್ತಿದೆ. ಲೆಕ್ಕಪರಿಶೋಧನೆ ವೇಳೆ ಈ ಅಂಶಗಳು ಗೊತ್ತಾಗಿವೆ. ಐಎಂಎ ಕಂಪನಿಯ ವ್ಯವಹಾರ ಉದ್ದೇಶ ವಂಚಿಸುವುದೇ ಆಗಿತ್ತು ಎಂಬ ಸಂಗತಿಯನ್ನೂ ತನ್ನ ವರದಿಯಲ್ಲಿ ಡೆಲೋಯಿಟ್‌ ಹೇಳಿದೆ.

ತನ್ನ ವ್ಯವಹಾರದಿಂದ ಐಎಂಎ ಕಂಪನಿಗೆ ವಾಸ್ತವವಾಗಿ ಯಾವುದೇ ಆದಾಯ ಇರಲಿಲ್ಲ ಎನ್ನುವುದು ಡೆಲೋಯಿಟ್ ಲೆಕ್ಕಪರಿಶೋಧನೆ ವೇಳೆ ಬಹಿರಂಗವಾಗಿದೆ. ಆದರೂ, ಭಾರಿ ಲಾಭ ಗಳಿಸುತ್ತಿರುವುದಾಗಿ ನಂಬಿಸಿ, ಗ್ರಾಹಕರನ್ನು ಆಕರ್ಷಿಸಿದೆ. ಈ ಉದ್ದೇಶದಿಂದ ತಪ್ಪು ಲೆಕ್ಕ ತೋರಿಸಿ ಕೋಟ್ಯಂತರ ರೂಪಾಯಿ ಆದಾಯ ತೆರಿಗೆಯನ್ನು ಸಂಸ್ಥೆ ಪಾವತಿಸಿದೆ. ಈ ಮೊತ್ತವನ್ನು ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿ ಮಾಡಿಕೊಂಡು ವಂಚನೆಗೆ ಒಳಗಾದ ಹೂಡಿಕೆದಾರರಿಗೆ ಮರಳಿಸಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ.

‘ಒಬ್ಬರಿಂದ ಹಣ ತೆಗೆದುಕೊಂಡು ಇನ್ನೊಬ್ಬರಿಗೆ ಕೊಡುತ್ತಿದ್ದ ಐಎಂಎ ಸಂಸ್ಥೆ, ಆದಾಯ ಬರುವ ಯಾವುದೇ ವ್ಯವಹಾರ ನಡೆಸುತ್ತಿರಲಿಲ್ಲ. ಆದರೆ, ಬ್ಯಾಲೆನ್ಸ್‌ ಶೀಟ್‌ನಲ್ಲಿ ಲಾಭ ಇದೆ ಎಂದು ತೋರಿಸಿ ತೆರಿಗೆ ಪಾವತಿಸಿದೆ. ಹೀಗೆ ಪಾವತಿಸಿದ ಹಣವನ್ನು ಮರಳಿ ಪಡೆದು ಹೂಡಿಕೆದಾರರಿಗೆ ಮರಳಿಸುವ ಯೋಚನೆ ಇದೆ. ಆದರೆ, ಆದಾಯ ತೆರಿಗೆ ಇಲಾಖೆಯಿಂದ ಹಣ ವಾಪಸು ಪಡೆಯಲು ಕೆಲವು ಕಾನೂನು ಅಡಚಣೆಗಳಿಗೆ. ಡೆಲೋಯಿಟ್ ಸಂಸ್ಥೆಯಿಂದ ಸಂಪೂರ್ಣ ಆಡಿಟ್‌ ವರದಿ ಪಡೆದುಕೊಂಡು, ಅದರ ಆಧಾರದಲ್ಲಿ ಹಣ ಮರುಪಾವತಿಸುವಂತೆ ಐಟಿ ಇಲಾಖೆಗೆ ರಿಫಂಡ್‌ ಕ್ಲೇಮು ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದೆ. ಅಗತ್ಯ ಬಿದ್ದರೆ, ಹಣ ವಾಪಸು ಪಡೆಯಲು ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ ತಿಳಿಸಿದರು.

ಇನ್ನೂ ಸಿಕ್ಕಿಲ್ಲ ಕಚೇರಿ!: ಸಕ್ಷಮ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಈವರೆಗೆ ಕೆಲವು ಸಿಬ್ಬಂದಿಯನ್ನು ನೇಮಿಸಿ, ಒಂದಷ್ಟು ಅನುದಾನ ನೀಡಿದೆ. ಕಚೇರಿಗೆ ಇನ್ನೂ ಸೂಕ್ತ ಜಾಗ ನೀಡಿಲ್ಲ. ‘ಸದ್ಯ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪ್ರಾಧಿಕಾರದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನಗೆ ತಾತ್ಕಾಲಿಕವಾಗಿ ಬಹುಮಹಡಿ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡುವ ಭರವಸೆ ಸಿಕ್ಕಿದೆ’ ಎಂದು ಹರ್ಷ ಗುಪ್ತ ಹೇಳಿದರು.

ಶೇ 27ರಷ್ಟು ವಹಿವಾಟಿನ ಮಾಹಿತಿ ಇಲ್ಲ!

ಫಲಾನುಭವಿಗಳಿಗೆ ಸಂಬಂಧಿಸಿದಂತೆ ಐಎಂಎ ಕಂಪನಿ ನಡೆಸಿದ ಒಟ್ಟು ವಹಿವಾಟಿನಲ್ಲಿ ಶೇ 27ರಷ್ಟರ ಮಾಹಿತಿ ಲಭ್ಯ ಇಲ್ಲದಿರುವುದು ಡೆಲೋಯಿಟ್ ಸಂಸ್ಥೆ ನಡೆಸಿದ ಅಡಿಟ್‌ನಿಂದ ಗೊತ್ತಾಗಿದೆ. ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದ ಐಎಂಎಗೆ ಸೇರಿದ ಐದು ಘಟಕಗಳ ವ್ಯವಹಾರಗಳ ಬಗ್ಗೆ ಪರಿಶೋಧನೆ ನಡೆಯುತ್ತಿದೆ. ಕಂಪನಿಯ ಬ್ಯಾಂಕ್‌ ಖಾತೆಯಿಂದ ಉತ್ತರ ಪ್ರದೇಶದಲ್ಲಿ ಆಸ್ತಿ ಖರೀದಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿಯನ್ನು ಸಿಬಿಐಗೆ ಡೆಲೋಯಿಟ್ ಸಂಸ್ಥೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT