ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಬೆಂಗಳೂರಿನ ಚಕ್ರವ್ಯೂಹ ಮತ್ತು ಸೆಂಜೆನ್‌ನ ರಾಜಮಾರ್ಗ

Last Updated 26 ಸೆಪ್ಟೆಂಬರ್ 2020, 5:01 IST
ಅಕ್ಷರ ಗಾತ್ರ

ಬೆಂಗಳೂರಿನ ಯಾವುದೇ ಭಾಗದಲ್ಲಿ ನಾವು ಹೊರಟು ನಿಲ್ಲಲಿ, ಎಲ್ಲ ರಸ್ತೆಗಳಲ್ಲೂ ಸದಾ ಕಾಮಗಾರಿಗಳದ್ದೇ ಭರಾಟೆ. ಹೆಜ್ಜೆ, ಹೆಜ್ಜೆಗೂ ಸಂಚಾರಕ್ಕೆ ಅಡೆತಡೆ. ರಸ್ತೆಯನ್ನು ಬಗೆದಿರುವುದು, ಅದರ ಕರುಳಿನಂತೆ ಒಳಗಿನ ವೈರ್‌ಗಳನ್ನು ಒಎಫ್‌ಸಿಗಳನ್ನು ಕಿತ್ತು ರಸ್ತೆಯ ಮೇಲೆಯೇ ಗುಡ್ಡೆ ಹಾಕಿರುವುದು, ಅದರ ಪಕ್ಕವೇ ದೊಡ್ಡ, ದೊಡ್ಡ ಪೈಪುಗಳನ್ನು ಅಡ್ಡಡ್ಡ ಮಲಗಿಸಿರುವುದು – ಬರೀ ಇಂತಹದ್ದೇ ನೋಟಗಳು.

ಒಂದು ಕಡೆ ಮೆಟ್ರೊ ಕಾಮಗಾರಿಯ ಭರಾಟೆ, ಮತ್ತೊಂದು ಕಡೆ ಮೇಲ್ಸೇತುವೆ ನಿರ್ಮಾಣದ ಕೆಲಸ, ಇನ್ನೊಂದು ಕಡೆ ಟೆಂಡರ್‌ ಶ್ಯೂರ್‌ ಕಾಮಗಾರಿಯ ಅಬ್ಬರ... ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ, ನೀವು ಎತ್ತ ಹೋದರೂ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಕಾಮಗಾರಿಗಳಾದರೋ ವರ್ಷಗಳಿಂದ ನಿಂತಲ್ಲೇ ನಿಂತಿವೆ. ಇಲ್ಲವೇ ಬಲು ನಿಧಾನಗತಿಯಲ್ಲಿ ತೆವಳುತ್ತಿವೆ. ಮಲ್ಲೇಶ್ವರದಲ್ಲಿ ನೀವು ಯಾವ ದಿಕ್ಕಿನಲ್ಲೇ ತಿರುಗಿ, ಎಲ್ಲ ರಸ್ತೆಗಳಲ್ಲೂ ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಬೋರ್ಡುಗಳು ಎದುರಾಗುತ್ತವೆ. ಅಲ್ಲಿ ನಡೆದಿರುವ ಕೆಲಸಗಳ ವೇಗವನ್ನು ನೋಡಿದರೆ ‘ಕಾಮಗಾರಿ ಪ್ರಗತಿಯಲ್ಲಿಲ್ಲ’ ಎನ್ನುವಂತೆ ತೋರುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ವ್ಯಯಿಸಿದ ಮೊತ್ತವನ್ನು ಲೆಕ್ಕ ಹಾಕಿದರೆ ನಗರದ ಪ್ರತಿಯೊಂದು ರಸ್ತೆಯೂ ಐಶ್ವರ್ಯ ರೈ ಅವರ ಕೆನ್ನೆಯಂತೆ ಫಳಫಳ ಹೊಳೆಯಬೇಕಿದ್ದವು. ಆದರೆ, ನಗರದಲ್ಲಿ ಹುಡುಕಿದರೂ ಗುಂಡಿ ಇಲ್ಲದ ಒಂದೇ ಒಂದು ರಸ್ತೆ ಸಿಗುವುದಿಲ್ಲ. ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅದು ಯಾವ ಧೈರ್ಯದ ಮೇಲೆಯೋ ಏನೋ, ‘ಗುಂಡಿಬಿದ್ದ ರಸ್ತೆಯನ್ನು ತೋರಿಸಿದರೆ ಸಾರ್ವಜನಿಕರಿಗೆ ಬಹುಮಾನ ನೀಡುವಂತಹ ಪರಿಪಾಟ ಆರಂಭಿಸಲಾಗುವುದು’ ಎಂದು ಘೋಷಿಸಿದ್ದರು. ಆ ಘೋಷಣೆ ಅನುಷ್ಠಾನಕ್ಕೆ ಬರಲಿಲ್ಲ ಎನ್ನುವುದು ಬೇರೇ ಮಾತು. ಇಲ್ಲದಿದ್ದರೆ ರಸ್ತೆ ಅಭಿವೃದ್ಧಿಗೆ ಎತ್ತಿಟ್ಟ ಎಲ್ಲ ಹಣವನ್ನೂ ಗುಂಡಿ ತೋರಿಸಿದ ಸಾರ್ವಜನಿಕರಿಗೇ ನೀಡಬೇಕಾಗುತ್ತಿತ್ತು.

ಮೈಸೂರು, ತುಮಕೂರು ಹಾಗೂ ಬನ್ನೇರುಘಟ್ಟ ರಸ್ತೆಗಳಲ್ಲಿ ನಡೆದಿರುವ ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿಗಳು ಏಕೆ ಅಷ್ಟೊಂದು ನಿಧಾನಗತಿಯಲ್ಲಿ ಸಾಗಿವೆ ಎಂದು ಸೋಜಿಗವಾಗುತ್ತದೆ. ಶಿವಾನಂದ ವೃತ್ತದಲ್ಲಿ ನಡೆದಿರುವ ಮೇಲ್ಸೇತುವೆ ಕಾಮಗಾರಿ ಮುಗಿದು ವರ್ಷವೇ ಆಗಬೇಕಿತ್ತು. ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಕೂಗಳತೆ ದೂರದಲ್ಲಿರುವ ಈ ಕಾಮಗಾರಿ ಅಷ್ಟೊಂದು ನಿಧಾನಗತಿಯಲ್ಲಿ ನಡೆದಿರುವುದು ಯಾರ ಗಮನಕ್ಕೂ ಬಾರದಿರುವುದು ಸಹ ಆಶ್ಚರ್ಯಕರವಾಗಿದೆ. ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ತೊಂದರೆಯಿಲ್ಲ ಎಂದು ಮುಖ್ಯಮಂತ್ರಿಯವರು ಸದಾ ಹೇಳುತ್ತಲೇ ಇರುತ್ತಾರೆ. ಹಾಗಾದರೆ ಕಾಮಗಾರಿಗಗಳಿಗೆ ಅಡಚಣೆ ಆಗಿರುವುದಾದರೂ ಏನು?

ಬೆಂಗಳೂರಿನಲ್ಲಿ ಒಟ್ಟಾರೆ 14 ಸಾವಿರ ಕಿ.ಮೀ. ಉದ್ದದಷ್ಟು ರಸ್ತೆ ಜಾಲವಿದೆ. ಬೇಕಾಬಿಟ್ಟಿ ಪಾರ್ಕಿಂಗ್‌ ವ್ಯವಸ್ಥೆ, ಗುಂಡಿಗಳು, ಕಾಮಗಾರಿಗಳು –ಇವೇ ಮೊದಲಾದ ಕಾರಣಗಳಿಂದ ನಗರದಲ್ಲಿ ಪ್ರತೀ ಗಂಟೆಗೆ ಹೆಚ್ಚೆಂದರೆ 12 ಕಿ.ಮೀ. ವೇಗದಲ್ಲಿ ಸಾಗಬಹುದು ಎಂದು ಸಮೀಕ್ಷೆಗಳು ಹೇಳುತ್ತವೆ. ರಸ್ತೆಗಳಲ್ಲಿಯೇ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿರುವ ಕುರಿತು ವರದಿಗಳಿದ್ದರೂ ಸದೃಢವಾದ ರಸ್ತೆಜಾಲದ ವ್ಯವಸ್ಥೆಗೆ ಸರ್ಕಾರ ಎಂದಿಗೂ ಮನಸ್ಸು ಮಾಡಿಲ್ಲ. ಹೊಸದಾಗಿ ಟಾರು ಹಾಕಿದರೂ ಒಂದೇ ಮಳೆಗೆ ಹರಿದುಹೋಗುವ ಕರಿನೀರು ಎಲ್ಲ ಕಪ್ಪು ಕಥೆಗಳನ್ನೂ ಬಟಾಬಯಲು ಮಾಡುತ್ತದೆ.

ಈ ನಿಟ್ಟಿನಲ್ಲಿ ಅಕ್ಕಪಕ್ಕದ ದೇಶಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ‘ಜಗತ್ತಿನ ಫ್ಯಾಕ್ಟರಿ’ ಎಂಬ ಹೆಸರನ್ನೂ ಅಂಟಿಸಿಕೊಂಡಿದ್ದು ಚೀನಾದ ಸೆಂಜೆನ್‌ ನಗರ. ಬೆಂಗಳೂರು ಹೇಗೆ ಭಾರತದ ಮಾಹಿತಿ ತಂತ್ರಜ್ಞಾನ ನಗರವೋ, ಹಾಗೆ ಸೆಂಜೆನ್‌ ಚೀನಾದ ಮಾಹಿತಿ ತಂತ್ರಜ್ಞಾನ ನಗರ. ಆ ನಗರದಲ್ಲಿ ಎಲ್ಲಿಯೇ ಓಡಾಡಿದರೂ ಸಿಗ್ನಲ್‌ಮುಕ್ತ ಸಂಚಾರ ವ್ಯವಸ್ಥೆ, ಪ್ರತಿಯೊಂದು ದೊಡ್ಡ ವೃತ್ತದಲ್ಲೂ ಮೇಲ್ಸೇತುವೆಗಳು, ಮಳೆನೀರು ಹರಿದುಹೋಗಲು ಚರಂಡಿಗಳ ಜಾಲ –ಎಲ್ಲವನ್ನೂ ಸಮರ್ಪಕವಾಗಿ ರೂಪಿಸಲಾಗಿದೆ. ಚೀನಾ ಸರ್ಕಾರ ತನ್ನೆಲ್ಲ ಸಾಮರ್ಥ್ಯ ಒಟ್ಟುಗೂಡಿಸಿ, ಕೆಲವು ವರ್ಷ ಆಚೀಚೆ ನೋಡದೆ, ಸೆಂಜೆನ್‌ನಲ್ಲಿ ಅದ್ಭುತ ಎನ್ನುವಂತಹ ಮೂಲಸೌಕರ್ಯ ಒದಗಿಸಿದೆ.

ಸಾರ್ವಜನಿಕರ ಸಂಚಾರಕ್ಕೆ ಇಲ್ಲಿಯಂತಹ ಉತ್ಕೃಷ್ಟ ವ್ಯವಸ್ಥೆ ಏಷ್ಯಾದಲ್ಲಿ ಪ್ರಾಯಶಃ ಬೇರೆಲ್ಲೂ ಇದ್ದಂತಿಲ್ಲ. ಬಸ್‌ಗಳ ತಡೆರಹಿತ ಸಂಚಾರಕ್ಕಾಗಿಯೇ ರಸ್ತೆಯ ಒಂದು ಭಾಗವನ್ನು (ಲೇನ್‌) ಮೀಸಲಿಡಲಾಗಿದೆ. ನಗರದ ಎಲ್ಲ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವಂತಹ ರೈಲ್ವೆ ಜಾಲವಿದೆ. ಆಯಾ ನಿಲ್ದಾಣಗಳಿಂದಲೇ ಚೀನಾದ ಇತರ ನಗರಗಳಿಗೆ ನೇರ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಗಂಟೆಗೆ ಒಂದರಂತೆ ಅತಿವೇಗದ ಬುಲೆಟ್‌ ರೈಲುಗಳು ಅಲ್ಲಿಂದ ಹೊರಡುತ್ತವೆ. ಮೆಟ್ರೊ ರೈಲು, ನಗರದ ಎಲ್ಲ ಭಾಗಗಳಲ್ಲದೆ ಉಪನಗರಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ನಗರದ ‘ವಿಂಡೋ ಟು ದಿ ವರ್ಲ್ಡ್‌’ ತಾಣದಲ್ಲಿ ಮೋನೊ ರೈಲು ಓಡಾಡುತ್ತದೆ.

ರೈಲು, ಮೆಟ್ರೊ, ಬಸ್‌, ಟ್ಯಾಕ್ಸಿ ನಿಲ್ದಾಣಗಳೆಲ್ಲ ಅಕ್ಕಪಕ್ಕದಲ್ಲೇ ಇವೆ. ಹತ್ತಿರದ ಸ್ಥಳದ ಪ್ರಯಾಣಕ್ಕೆ ಬೈಕ್‌ ಟ್ಯಾಕ್ಸಿಗಳಿವೆ. ಇದ್ಯಾವುದೂ ಬೇಡ ಸೈಕಲ್‌ ಸವಾರಿ ಮಾಡಿದರಾಯಿತು ಎನ್ನುವವರಿಗೆ ಮಾರು ದೂರಕ್ಕೊಂದು ಅವುಗಳ ಸ್ಟ್ಯಾಂಡ್‌ಗಳಿವೆ. ಈ ಸೈಕಲ್‌ಗಳ ಬಳಕೆಗೆ ನೀವು ಮೊದಲೇ ಹೆಸರು ನೋಂದಣಿ ಮಾಡಿಕೊಂಡು, ಹಣ ತುಂಬಿರಬೇಕು. ಸೈಕಲ್‌ ಮೇಲೆ ಅಂಟಿಸಿದ ‘ಕ್ಯುಆರ್‌’ ಕೋಡ್‌ ಸ್ಕ್ಯಾನ್‌ ಮಾಡಿದರೆ, ನೀವು ನೋಂದಾಯಿತ ಸೈಕಲ್‌ ಸವಾರರು ಎಂಬುದನ್ನು ಖಚಿತಪಡಿಸಿಕೊಂಡು ಅದರ ಲಾಕ್‌ ತೆರೆದುಕೊಳ್ಳುತ್ತದೆ. ಆಮೇಲೆ ಮನೆ ಹತ್ತಿರದ ಸೈಕಲ್‌ ಸ್ಟ್ಯಾಂಡ್‌ವರೆಗೂ ಪರಿಸರಸ್ನೇಹಿ ಪ್ರಯಾಣ. ಚೀನಾದ ಬೀಜಿಂಗ್‌, ಶಾಂಘೈ ನಗರಗಳು ಜಗತ್ತಿನಲ್ಲೇ ಮಾಲಿನ್ಯದಲ್ಲಿ ಮುಂದಿದ್ದರೆ, ಈ ಊರು ದೇಶದ ನಂಬರ್‌ ಒನ್‌ ಮಾಲಿನ್ಯಮುಕ್ತ ನಗರವಾಗಿದೆ (ಇಂಗಾಲದ ಹೆಜ್ಜೆ ಗುರುತುಗಳು ಇಲ್ಲಿ ಬಲು ಕಡಿಮೆ).

ಕಡಲ ತೀರದಲ್ಲಿರುವ ಈ ನಗರದಲ್ಲಿ ಮಳೆ ಜಾಸ್ತಿಯಂತೆ. ಆದರೆ, ಎಷ್ಟೇ ಮಳೆಯಾದರೂ ನಗರದ ರಸ್ತೆಗಳಲ್ಲಿ ಸ್ವಲ್ಪ ನೀರೂ ನಿಲ್ಲುವುದಿಲ್ಲ ಎಂದು ಚೀನಾ ಪ್ರವಾಸದಲ್ಲಿ ನಮ್ಮ ಮಾರ್ಗದರ್ಶಕರಾಗಿದ್ದ ಜೈನಿ ಮಾಹಿತಿ ನೀಡಿದ್ದರು. ಹೇಳಿ, ಸೆಂಜೆನ್‌ನಿಂದ ನಾವು ಕಲಿಬೇಕಾದುದು ಇಲ್ಲವೇ? ಸಿಂಗಪುರದಲ್ಲಿನ ರಸ್ತೆಗಳು ಸಹ ಸಪಾಟಾಗಿವೆ. ಈ ಊರಿನಲ್ಲಿ ಒಂದೇ ಒಂದು ಗುಂಡಿಯೂ ಕಾಣುತ್ತಿಲ್ಲವಲ್ಲ ಎಂಬ ನಮ್ಮ ಸಂಶಯಕ್ಕೆ ರಸ್ತೆಯಲ್ಲೇ ಉತ್ತರ ಸಿಕ್ಕಿತು. ಸಂಚಾರಿ ದುರಸ್ತಿ ಘಟಕವೊಂದು ರಸ್ತೆ, ರಸ್ತೆಯಲ್ಲಿ ಸದಾ ಗಸ್ತು ತಿರುತ್ತಿರುತ್ತದೆ. ಸಣ್ಣ ಗುಂಡಿ ಕಂಡರೂ ತಕ್ಷಣ ರಿಪೇರಿ ಮಾಡುತ್ತಾರೆ. ಇಂತಹ ಒಳ್ಳೆಯ ಮಾದರಿಗಳು ನಮಗೆ ಎಂದಿಗೂ ಪಾಠವಾಗುವುದಿಲ್ಲವೇ? ಅಧ್ಯಯನ ಪ್ರವಾಸಕ್ಕೆ ಹೋಗುವ ಜನಪ್ರತಿನಿಧಿಗಳು ಒಮ್ಮೆ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT