ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವದ ವೇಳೆಗೆ 75 ಕಿ.ಮೀ. ಮೆಟ್ರೊ ಜಾಲ

ವಿಸ್ತರಿತ ಮಾರ್ಗದ ಉದ್ಘಾಟನೆ * ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯವರೆಗೆ ಮೆಟ್ರೊ ರೈಲು ಸೇವೆ ಇಂದಿನಿಂದ
Last Updated 14 ಜನವರಿ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಮೊದಲ ವಿಸ್ತರಿತ ಮಾರ್ಗದಲ್ಲಿ ರೇಷ್ಮೆ ಸಂಸ್ಥೆಯವರಿಗೆ ಮೆಟ್ರೊ ರೈಲು ಸೇವೆಗೆ ಚಾಲನೆ ದೊರಕುವುದರೊಂದಿಗೆ ಬೆಂಗಳೂರು ದಕ್ಷಿಣ ಭಾಗದಲ್ಲಿನ ಮೆಟ್ರೊ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆ ಗುರುವಾರ ಈಡೇರಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್‌ದೀಪ್ ಸಿಂಗ್‌ ಪುರಿ ಈ ಸೇವೆಗೆ ಹಸಿರು ನಿಶಾನೆ ತೋರಿದರು. 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸಾರ್ವಜನಿಕ ಸೇವೆ ಆರಂಭವಾಗಲಿದೆ. ರೇಷ್ಮೆ ಸಂಸ್ಥೆಯಿಂದ ಬೆಳಿಗ್ಗೆ 7ಕ್ಕೆ ಮೊದಲ ರೈಲು ಹಾಗೂ ರಾತ್ರಿ 8.55ಕ್ಕೆ ಕೊನೆಯ ರೈಲು ಹೊರಡಲಿದೆ.

ವರ್ಚುವಲ್ ರೂಪದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹರ್‌ದೀಪ್‌ ಸಿಂಗ್‌ ಪುರಿ, ‘ಬೆಂಗಳೂರಿನಲ್ಲಿ ಮೆಟ್ರೊ ರೈಲು ಸೇವೆ ಆರಂಭವಾದ ನಂತರ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಮನ್ವಂತರವೇ ಸೃಷ್ಟಿಯಾಗಿದೆ. ದೇಶದ 18 ನಗರಗಳಲ್ಲಿ 700 ಕಿ.ಮೀ.ವರೆಗೆ ಮೆಟ್ರೊ ಜಾಲ ಇದೆ. 1,000 ಕಿ.ಮೀ. ಮಾರ್ಗ ನಿರ್ಮಾಣ ಹಂತದಲ್ಲಿದೆ’ ಎಂದರು.

‘ಕೋವಿಡ್‌ ಬಿಕ್ಕಟ್ಟಿನಿಂದ ಮೆಟ್ರೊ ರೈಲು ವಲಯವೂ ಸಾಕಷ್ಟು ನಷ್ಟ ಅನುಭವಿಸಿದೆ. ಕೋವಿಡ್‌ಗಿಂತ ಪೂರ್ವದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಪೈಕಿ, ಈಗ ಶೇ 25ರಷ್ಟು ಜನ ಮಾತ್ರ ಪ್ರಯಾಣಿಸುತ್ತಿದ್ದಾರೆ’ ಎಂದರು.

‘ವಿಮಾನ ನಿಲ್ದಾಣದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣದ ಬಗ್ಗೆ ಬೆಂಗಳೂರಿಗರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಗಮನದಲ್ಲಿದೆ. ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್ ಪುರ (2ಎ) ಹಾಗೂ ಕೆ.ಆರ್. ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (2ಬಿ) 56 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ನಮ್ಮ ಇಲಾಖೆಯಿಂದ ಸಿದ್ಧಪಡಿಸಲಾಗಿದೆ. ₹14,844 ಕೋಟಿ ವೆಚ್ಚದ ಈ ಯೋಜನೆಯ ವರದಿಯನ್ನು ಸಾರ್ವಜನಿಕ ಹೂಡಿಕೆ ಮಂಡಳಿಗೆ ( ಪಿಐಬಿ) ಕಳುಹಿಸಲಾಗಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಸ್ವಾತಂತ್ರ್ಯೋತ್ಸವಕ್ಕೆ 75 ಕಿ.ಮೀ. ಜಾಲ:‘ಮುಂಬರುವ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ನಗರದ ಮೆಟ್ರೊ ಜಾಲವನ್ನು 75 ಕಿ.ಮೀ ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ. 2025ರ ವೇಳೆಗೆ 172 ಕಿ.ಮೀ ಉದ್ದದ ಮೆಟ್ರೊ ಮಾರ್ಗವು ಸಿದ್ಧವಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಈ ವಿಸ್ತರಿತ ಮಾರ್ಗದ ಮೆಟ್ರೊ ಸಂಪರ್ಕ ಜಾಲವು 48 ಕಿ.ಮೀ ವರೆಗೆ ವಿಸ್ತರಿಸಿದಂತಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 30 ಕಿ.ಮೀ ಮಾರ್ಗದಲ್ಲಿ ರೈಲು ಸಂಚರಿಸುವಂತೆ ಮಾಡಲಾಗುವುದು. 2025ರ ವೇಳೆಗೆ 172 ಕಿ.ಮೀ ಉದ್ದದ ಮೆಟ್ರೊ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದರು.

‘ಒಂದು ವರ್ಷದೊಳಗೆ ನಗರದ ಚಹರೆಯನ್ನೇ ಬದಲಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದು, ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ಇದು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿರುವ ನಗರವನ್ನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಬೆಂಗಳೂರಿನಲ್ಲೇ ಶೇ 35ರಷ್ಟು ಮಂದಿ ವಾಸಿಸುತ್ತಿದ್ದಾರೆ.2030ರ ವೇಳೆಗೆ ಈ ಸಂಖ್ಯೆ 3 ಕೋಟಿ ದಾಟುವ ಅಂದಾಜಿದೆ. ವಾಹನ ದಟ್ಟಣೆ, ಮಾಲಿನ್ಯ ನಿಯಂತ್ರಣಕ್ಕೆ ಮೆಟ್ರೊ ಪರಿಹಾರವಾಗಲಿದೆ’ ಎಂದರು.

‘ಈ ವಿಸ್ತರಿತ ಮಾರ್ಗದಲ್ಲಿ ನಿತ್ಯ 75 ಸಾವಿರ ಮಂದಿ ಸಂಚರಿಸಲಿದ್ದಾರೆ. 2031ರ ವೇಳೆಗೆ 1.85 ಲಕ್ಷದಿಂದ 2 ಲಕ್ಷ ಮಂದಿ ಪ್ರಯಾಣಿಸುವ ನಿರೀಕ್ಷೆ ಇದೆ’ ಎಂದರು.

ಮಹಿಳಾ ಚಾಲಕಿ: ಉದ್ಘಾಟನಾ ರೈಲನ್ನು ಚಾಲಕಿ ಎಂ.ಎನ್. ಕವಿತಾ ಚಲಾಯಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್, ಎಸ್. ಸುರೇಶ್‌ಕುಮಾರ್, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್‌.ಆರ್. ವಿಶ್ವನಾಥ್, ಸತೀಶ್ ರೆಡ್ಡಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT