ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ; 8,749 ಮಂದಿಗೆ ಸೋಂಕು

ಬಿಬಿಎಂಪಿ ವ್ಯಾಪ್ತಿಯಲ್ಲಿ 5,352 ಪ್ರಕರಣ; ಆತಂಕ ಬೇಡ –ಅಧಿಕಾರಿಗಳ ಅಭಯ
Last Updated 22 ಆಗಸ್ಟ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರದ ಹಾವಳಿ ಮುಂದುವರೆದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಈವರೆಗೆ 8,749 ಮಂದಿ ಸೋಂಕಿನಿಂದ ಬಳಲಿದ್ದಾರೆ. 6 ಜನ ಜ್ವರದ ತೀವ್ರತೆಗೆ ಮೃತಪಟ್ಟಿದ್ದಾರೆ.

ಕಳೆದ ವರ್ಷ ಈ ವೇಳೆ ರಾಜ್ಯದಲ್ಲಿ 2,287 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ 313 ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದವು. ಆದರೆ, ಈ ವರ್ಷ ಡೆಂಗಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚು ವರದಿಯಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು 5,352 ಮಂದಿ ಡೆಂಗಿಯಿಂದ ಬಳಲಿದ್ದಾರೆ. ದಕ್ಷಿಣ ಕನ್ನಡ (857), ಶಿವಮೊಗ್ಗ (350), ಹಾವೇರಿ (231), ಚಾಮರಾಜನಗರ (171),ಕಲಬುರ್ಗಿ (167), ಹಾಸನ (153), ಉಡುಪಿ (148), ಚಿಕ್ಕಮಗಳೂರು (145), ದಾವಣಗೆರೆ (143) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ.

ಕಳೆದ ಒಂದು ವಾರದಲ್ಲಿ 679 ಡೆಂಗಿ ಪ್ರಕರಣಗಳು ವರದಿಯಾಗಿವೆ.ದಕ್ಷಿಣ ಕನ್ನಡ ಹಾಗೂ ಬೆಂಗಳೂರು ನಗರದಲ್ಲಿ ತಲಾ ಇಬ್ಬರು, ರಾಮನಗರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಡೆಂಗಿಗೆ ಸಾವನ್ನಪ್ಪಿದ್ದಾರೆ.

‘ಮಳೆ ಚುರುಕು ಪಡೆದ ಹಿನ್ನೆಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಬರುತ್ತಿದ್ದು, ಜನರು ಆತಂಕ ಪಡಬೇಕಾಗಿಲ್ಲ. ಪರೀಕ್ಷೆಯ ಬಳಿಕ ವರದಿ ಬರಲು ತಡವಾಗುತ್ತದೆ. ಇದರಿಂದಾಗಿ ಪ್ರಕರಣಗಳು ವರದಿಯಾಗುತ್ತವೆ’ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆ ಹಾವಳಿ ಪ್ರದೇಶಕ್ಕಿಲ್ಲ ಭೀತಿ: ಬೆಳಗಾವಿ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 10ಕ್ಕೂ ಅಧಿಕ ಪ್ರದೇಶದಲ್ಲಿ ನೆರೆ ಹಾವಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೆಂಗಿ ಕಾಣಿಸಿಕೊಳ್ಳಬಹುದೆಂಬ ಆತಂಕ ಉಂಟಾಗಿತ್ತು.

ಆದರೆ, ಈ ಪ್ರದೇಶದಲ್ಲಿ ಸಾಮಾನ್ಯವಾಗಿಈಡೀಸ್ ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ಜನತೆ ಹೆದರ ಬೇಕಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

‘ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾಮಾನ್ಯವಾಗಿ ವಾಂತಿ, ಭೇದಿ ಸೇರಿದಂತೆ ನೀರಿಗೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.ಕೆಸರು ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುವುದಿಲ್ಲ. ಇದರಿಂದ ಡೆಂಗಿಯ ಬಗ್ಗೆ ಆತಂಕ ಪಡಬೇಕಾಗಿಲ್ಲ.

ನೀರು ನಿಂತ ಕಡೆ ಲಾರ್ವಾ ನಾಶಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಕುಮಾರ್ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಪರೀಕ್ಷೆಗೆ ಮೂರು ವರ್ಷದ ಹಿಂದೆಯೇ ಸರ್ಕಾರದಿಂದ ದರ ನಿಗದಿ ಮಾಡಲಾಗಿದೆ.

ಪ್ರಥಮ ಬಾರಿ ಪರೀಕ್ಷೆಗೆ₹250 ಮಾತ್ರ ಪಡೆದುಕೊಳ್ಳಬೇಕು. ಎರಡನೇ ಬಾರಿ ಪರೀಕ್ಷೆ ಮಾಡಿದರೂ ₹500ಕ್ಕಿಂತ ಅಧಿಕ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಪಡೆದರೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಬೇಕು’ ಎಂದು ಅವರು ಕೋರಿದರು.

* ಕಳೆದ ಒಂದು ವಾರದಲ್ಲಿ 679 ಪ್ರಕರಣಗಳು ಪತ್ತೆ

* ಬೆಂಗಳೂರಿನ ಇಬ್ಬರು ಸೇರಿ 6 ಮಂದಿ ಸಾವು

* ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಹೆಚ್ಚಿನ ಶುಲ್ಕ ಕೇಳಿದರೆ ದೂರು ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT