ಬೆಂಗಳೂರು: ನವರಾತ್ರಿಯ ಸಾಲು ಸಾಲು ರಜೆಗಳ ಕಾರಣದಿಂದ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವವರ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲದೇ ಬಿಎಂಟಿಸಿ ಬಸ್‌ಗಳನ್ನು ಕೂಡ ರಾಜ್ಯದ ವಿವಿಧೆಡೆಗೆ ಕಳುಹಿಸಲಾಗಿದೆ.
ಕೆಎಸ್‌ಆರ್‌ಟಿಸಿಯಿಂದ 2,000 ವಿಶೇಷ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಅವುಗಳು ಸಾಕಾಗದ ಕಾರಣ ಸುಮಾರು 125 ಬಿಎಂಟಿಸಿ ಬಸ್‌ಗಳನ್ನು ರಾಜ್ಯದ ವಿವಿಧೆಡೆ ಕಳುಹಿಸಲಾಗುತ್ತಿದೆ. ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಬಿಎಂಟಿಸಿ ಬಸ್‌ಗಳು ರಾಜಧಾನಿ ಬಿಟ್ಟು ಸಂಚರಿಸುತ್ತಿವೆ.
ದಾವಣಗೆರೆ, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧರ್ಮಸ್ಥಳ ಸಹಿತ ಅನೇಕ ಕಡೆಗಳಿಗೆ ನಾಡಪ್ರಭು ಕೆಂಪೇಗೌಡ ಬಸ್‌ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ ಸಹಿತ ವಿವಿಧ ಕಡೆಗಳಿಂದ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ.
‘ಬಸ್ ಕೆಎಸ್‌ಆರ್‌ಟಿಸಿಯಾ? ಬಿಎಂಟಿಸಿಯಾ ಎಂಬುದು ಮುಖ್ಯವಲ್ಲ.ಪ್ರಯಾಣಿಕರು ಊರು ತಲುಪಬೇಕು. ಈ ನಿಟ್ಟಿನಲ್ಲಿ ಪ್ರಯಾಣಿಕರಿಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ಸಾರಿಗೆ ಇಲಾಖೆ ಉಪಕಾರ ಮಾಡಿದೆ’ ಎಂದು ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.