ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಮಿನಲ್–2: ವಾಯುವಜ್ರ ಬಸ್‌ ಸೇವೆ ಹೆಚ್ಚಳಕ್ಕೆ ಸಿದ್ಧತೆ

ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬಿಎಂಟಿಸಿ ಪತ್ರ; ವಾರದಲ್ಲೇ ಸಭೆ
Last Updated 30 ನವೆಂಬರ್ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಕಾರ್ಯಾರಂಭಕ್ಕೆ ಸಜ್ಜಾಗಿದ್ದು, ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ವಾಯುವಜ್ರ ಬಸ್‌ಗಳ ಸೇವೆ ಹೆಚ್ಚಿಸಲು ಬಿಎಂಟಿಸಿಯೂ ಸಿದ್ಧತೆ ಆರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಉದ್ಘಾಟಿಸಿದ ಟರ್ಮಿನಲ್–2 ಕಾರ್ಯಾರಂಭಕ್ಕೆ ಕಾದಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಈ ಟರ್ಮಿನಲ್‌ನಿಂದಲೇ ಪ್ರಯಾಣಿಕರು ವಿಮಾನ ಏರಲಿದ್ದಾರೆ. ಆರಂಭದಲ್ಲಿ ದೇಶೀಯ ವಿಮಾನಗಳ ಹಾರಾಟಕ್ಕೆಷ್ಟೇ ಅವಕಾಶ ದೊರಕಲಿದೆ. ಜನವರಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್) ನಿರ್ಧರಿಸಿದೆ.‌

ವಿಮಾನ ನಿಲ್ದಾಣಕ್ಕೆ ನಗರದಿಂದ ತೆರಳಲು ಸದ್ಯ ಇರುವುದು ರಸ್ತೆ ಮಾರ್ಗವಷ್ಟೆ. ಮೆಟ್ರೊ ರೈಲು ವಿಮಾನ ನಿಲ್ದಾಣದ ಆವರಣ ತಲುಪಲು 2025ರ ತನಕ ಕಾಯಬೇಕು. ಉಪನಗರ ರೈಲು ಮಾರ್ಗ ಕಲ್ಪಿಸುವ ಯೋಜನೆ ಇದ್ದರೂ, ಇನ್ನೂ ಕಾಮಗಾರಿ ಆರಂಭವಾಗುವ ಲಕ್ಷಣಗಳಿಲ್ಲ. ರೈಲು ನಿಲುಗಡೆ ತಾಣವಿದ್ದರೂ, ವಿಮಾಣ ನಿಲ್ದಾಣಕ್ಕೆ ಕೊಂಚ ದೂರದಲ್ಲಿರುವುದರಿಂದ ಪ್ರಯಾಣಿಕರ ನಿರಾಸಕ್ತಿ ವಹಿಸುತ್ತಿದ್ದಾರೆ.

ಬಿಎಂಟಿಸಿ ಬಸ್ ಮತ್ತು ಟ್ಯಾಕ್ಸಿಗಳನ್ನೇ ವಿಮಾನ ಪ್ರಯಾಣಿಕರು ಅವಲಂಬಿಸಿದ್ದಾರೆ. ಬಿಎಂಟಿಸಿಯಲ್ಲಿ ಸದ್ಯ 797 ಹವಾನಿಯಂತ್ರಿತ ವೋಲ್ವೊ ಬಸ್‌ಗಳಿದ್ದು, ಈ ಪೈಕಿ 120 ಬಸ್‌ಗಳನ್ನು 800 ಟ್ರಿಪ್‌ಗಳಲ್ಲಿ ವಾಯುವಜ್ರ ಸೇವೆಯಾಗಿ ಬಿಎಂಟಿಸಿ ಕಾರ್ಯಾಚರಣೆ ಮಾಡುತ್ತಿದೆ. ಟರ್ಮಿನಲ್–2 ಕಾರ್ಯಾರಂಭವಾದರೆ ಅಗತ್ಯಕ್ಕೆ ಅನುಗುಣವಾಗಿ ಇನ್ನಷ್ಟು ಬಸ್‌ಗಳನ್ನು ಈ ಮಾರ್ಗಕ್ಕೆ ಇಳಿಸಲು ತಯಾರಿ ನಡೆಸಿದೆ. ಈ ಸಂಬಂಧ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದಾರೆ.

‘‍ನಮ್ಮ ಪತ್ರಕ್ಕೆ ಬಿಐಎಎಲ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಚರ್ಚೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಟರ್ಮಿನಲ್–2ನಲ್ಲಿ ಬಸ್ ನಿಲುಗಡೆ ತಾಣ ಹೇಗಿದೆ, ಎಷ್ಟು ಬಸ್‌ಗಳನ್ನು ಏಕಕಾಲದಲ್ಲಿ ನಿಲ್ಲಿಸಲು ಸಾಧ್ಯವಿದೆ ಎಂಬುದರ ಸ್ಥಳ ಪರಿಶೀಲನೆ ನಡೆಸಲಾಗುವುದು. ಬಳಿಕ ಅಲ್ಲಿನ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ‘‍ಪ್ರಜಾವಾಣಿ’ಗೆ ತಿಳಿಸಿದರು.

ವಾಯುವಜ್ರ ಪ್ರಯಾಣಕ್ಕೆ ಆಸಕ್ತಿ

‌ವಾಯುವಜ್ರ ಸೇವೆಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದು, ತಿಂಗಳಿಗೆ ಸರಾಸರಿ 3 ಲಕ್ಷ ವಿಮಾನ ಪ್ರಯಾಣಿಕರು ಈ ಬಸ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ವಿವರಿಸಿದ್ದಾರೆ.

2022ರ ಜನವರಿಯಲ್ಲಿ 1.2 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ನವೆಂಬರ್ ವೇಳೆಗೆ 3 ಲಕ್ಷಕ್ಕೆ ಏರಿಕೆಯಾಗಿದೆ. ತಿಂಗಳಿಗೆ ₹8 ಕೋಟಿಯಷ್ಟು ವರಮಾನ ಈ ಸೇವೆಯಿಂದಲೇ ಬರುತ್ತಿದೆ. ಟ್ಯಾಕ್ಸಿಗಳಲ್ಲಿ ಪ್ರಯಾಣ ದರ ಹೆಚ್ಚಾಗಿರುವುದರಿಂದ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಆಗಿರಬಹುದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT