ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ಹೆಚ್ಚಳ: ಬೊಮ್ಮಾಯಿ

ಪ್ರತಿ ಎಕರೆಗೆ 10,781 ಅಡಿ ಅಭಿವೃದ್ಧಿಪಡಿಸಿದ ನಿವೇಶನ l ಸಾಲ ವಸೂಲಿಗೆ ಕಿರುಕುಳಕೊಟ್ಟರೆ ಶಿಕ್ಷೆ ದುಪ್ಪಟ್ಟು
Last Updated 18 ಫೆಬ್ರುವರಿ 2021, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ನೀಡುವ ರೈತರಿಗೆ ಪರಿಹಾರವಾಗಿ ಪ್ರತಿ ಎಕರೆಗೆ 10,781 ಚದರಡಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈವರೆಗೆ ಪ್ರತಿ ಎಕರೆಗೆ 9,583 ಚದರ ಅಡಿಯಷ್ಟು ಅಭಿವೃದ್ಧಿಪಡಿಸಿದ ನಿವೇಶನವನ್ನು ಪರಿಹಾರವಾಗಿ ನೀಡಲಾಗುತ್ತಿತ್ತು. ನಿವೇಶನ ನೀಡಿಕೆ ಪ್ರಮಾಣವನ್ನು ಶೇ 40 ರಿಂದ 45 ಕ್ಕೆ ಏರಿಸಲಾಗಿದೆ. ಭೂಮಿ ಕೊಟ್ಟವರು ನಿವೇಶನ ಅಥವಾ ಹಣ ಎರಡರಲ್ಲಿ ಒಂದನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಶಿಕ್ಷೆ ಹೆಚ್ಚಳ: ಕರ್ನಾಟಕ ಲೇವಾದೇವಿ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದ್ದು, ಇದರ ಅನ್ವಯ ದೈಹಿಕವಾಗಿ ಕಿರುಕುಳ ಕೊಟ್ಟು ಅಸಲು ಮತ್ತು ಬಡ್ಡಿ ವಸೂಲಿ ಮಾಡುವವರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಹಿಂದೆ 6 ತಿಂಗಳು ಇದ್ದ ಜೈಲು ಶಿಕ್ಷೆಯನ್ನು ಒಂದು ವರ್ಷಕ್ಕೂ, 2ನೇ ಬಾರಿ ಅದೇ ಅಪರಾಧ ಮಾಡಿದರೆ 2 ವರ್ಷಗಳಿಗೆ ಹೆಚ್ಚಿಸಲಾಗಿದೆ. ದಂಡದ ಪ್ರಮಾಣವನ್ನು ₹5 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಪ್ರಮುಖ ನಿರ್ಣಯಗಳು
* ಚಾಮರಾಜ ನಗರದಲ್ಲಿ ಹೊಸ ಕೃಷಿ ಕಾಲೇಜು ಆರಂಭಿಸಲು ಒಪ್ಪಿಗೆ.
* ₹199 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ 8 ಆಸ್ಪತ್ರೆಗಳು, 2 ಸಾರ್ವಜನಿಕ ಆಸ್ಪತ್ರೆಗಳು ಹಾಗೂ ವಿಜಯಪುರ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಅನುಮತಿ
* ರಾಜ್ಯದ ತಾಯಿ ಮತ್ತು ಮಕ್ಕಳ 22 ಆಸ್ಪತ್ರೆಗಳಿಗೆ ರಾಜ್ಯ ನಿಧಿ ಮತ್ತು ಎನ್‌ಎಚ್‌ಎಂನಿಂದ ₹14.64 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ
* 2010–11ರಲ್ಲಿ ಅನುಮೋದನೆ ಪಡೆದಿದ್ದ 225 ವಸತಿ ಯೋಜನೆಗಳ ಪೈಕಿ 4 ವಸತಿ ಯೋಜನೆಗಳು(₹561 ಕೋಟಿ) ಮತ್ತು 2011–12 ರಲ್ಲಿ ಅನುಮೋದನೆ ಪಡೆದಿದ್ದ 53 ವಸತಿ ಯೋಜನೆಗಳಲ್ಲಿ 4 ಯೋಜನೆಗಳ (₹797 ಕೋಟಿ) ಯೋಜನಾ ವೆಚ್ಚ ಪರಿಷ್ಕರಿಸಲು ಒಪ್ಪಿಗೆ.
* ಆದಿ ಚುಂಚನಗಿರಿ ಸಮೀಪದ ಅಯ್ಯನಕೆರೆ(ಜೋಡಿ ಕೆರೆ) ₹19.03 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಅನುಮತಿ
* ಬೆಂಗಳೂರಿನ ವಸಂತನಗರದಲ್ಲಿ ಲೋಕೋಪಯೋಗಿ ಇಲಾಖೆ ವಸತಿ ಗೃಹವನ್ನು ನೆಲಸಮ ಮಾಡಿ, ಆ ಜಾಗದಲ್ಲಿ ₹117 ಕೋಟಿ ವೆಚ್ಚದಲ್ಲಿ ಬಹು ಮಹಡಿ ವಸತಿ ಗೃಹ ನಿರ್ಮಾಣ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
* ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ₹350 ಕೋಟಿ ಅವಧಿ ಸಾಲ ಪಡೆಯಲು ಸರ್ಕಾರದಿಂದ ಖಾತರಿ ನೀಡಲು ಅನುಮತಿ
* ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯಡಿ ಎರಡನೇ ಹಂತದಲ್ಲಿ ₹1,848.95 ಕೋಟಿ ವೆಚ್ಚದಲ್ಲಿ 2204.39 ಕಿ.ಮೀ ಗ್ರಾಮೀಣ ರಸ್ತೆ ಮತ್ತು 75 ಕಿರು ಸೇತುವೆಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.
* ಸಂಡೂರು ತಾಲ್ಲೂಕು ಕೊಡಲು ಮತ್ತು ಇತರ 28 ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ₹75 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ
* ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಿಗೆ ನೀರುಣಿಸುವ ಶಂಕರಲಿಂಗ ಏತ ನೀರಾವರಿ ಯೋಜನೆಗೆ ಸಮಗ್ರ ಯೋಜನಾ ವರದಿ ತಯಾರಿಸಲು ₹67.40 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ
* ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌ನಿಂದ ಕೊರಮಂಗಲ ಮೂಲಕ ಬೆಳ್ಳಂದೂರು ಕೆರೆವರೆಗಿನ ರಾಜಕಾಲುವೆ ಅಭಿವೃದ್ಧಿಪಡಿಸಲು ₹169 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ನಿರ್ಣಯ

ಕೋವಿಡ್‌ ಬಿಲ್‌ ₹700 ಕೋಟಿ
ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಪರವಾಗಿ 1,35,754 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಇದರ ವೆಚ್ಚ ಸುಮಾರು ₹700 ಕೋಟಿ ಆಗಿದೆ. ಈ ಹಣವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಲು ಸಚಿವಸಂಪುಟ ಸಭೆ ಒಪ್ಪಿಗೆ ನೀಡಿದೆ. ಜನವರಿವರೆಗೆ ಆಗಿರುವ ಬಿಲ್‌ ಮೊತ್ತ ₹620 ಕೋಟಿ. ಮಾರ್ಚ್‌ ಕೊನೆಯವರೆಗೂ ಚಿಕಿತ್ಸಾ ವೆಚ್ಚ ಭರಿಸಲು ₹80 ಕೋಟಿ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT