ಬುಧವಾರ, ಆಗಸ್ಟ್ 21, 2019
22 °C

ನಗರದೆಲ್ಲೆಡೆ ಸಡಗರದ ಸ್ವಾತಂತ್ರ್ಯ ದಿನಾಚರಣೆ

Published:
Updated:
Prajavani

ಬೆಂಗಳೂರು: ನಗರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಎಲ್ಲೆಲ್ಲೂ ರಾಷ್ಟ್ರಧ್ವಜ ಹಾರಾಡಿ ಅಭಿಮಾನ ಮೂಡಿಸಿದವು. 

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಾಷ್ಟ್ರ ನಾಯಕರಿಗೆ ನಮನ ಸಲ್ಲಿಸಲಾಯಿತು. ಶಾಲಾ–ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಿಹಿ ವಿತರಿಸಲಾಯಿತು. ನಗರದ ರಸ್ತೆಗಳಲ್ಲಿನ ಸಂಚರಿಸುವ ಆಟೊ ರಿಕ್ಷಾ ಸೇರಿದಂತೆ ವಿವಿಧ ವಾಹನಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ರೋಗಿಗಳು ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರು ಧ್ವಜಾರೋಹಣ ಮಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆವರಣದಲ್ಲಿ ಮಂಡಳಿಯ ಅಧ್ಯಕ್ಷ ಕೆ. ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ‘ಪ್ರಕೃತಿ ಮುನಿಸಿಕೊಂಡಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಾಡಿನ ಜನತೆ ತತ್ತರಿಸಿ ಹೋಗುತ್ತಿದ್ದಾರೆ. ಕೈಗಾರಿಕೆಗಳು ಪರಿಸರಸ್ನೇಹಿ ಕ್ರಮವನ್ನು ಅಳವಡಿಸಿಕೊಳ್ಳಬೇಕು. ದೇಶ ಕಾಯುವ ಯೋಧರ ಜತೆಗೆ ಪರಿಸರವನ್ನು ಉಳಿಸುವ ಯೋಧರ ಅಗತ್ಯ ನಮಗೆ ಇದೆ’ ಎಂದು ಸುಧಾಕರ್ ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಧ್ವಜಾರೋಹಣ ನೆರವೇರಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ, ಹಿರಿಯ ‍ಪತ್ರಕರ್ತ ಪದ್ಮರಾಜ ದಂಡಾವತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಕನ್ನಡಪರ ಹೋರಾಟಗಾರ ರಾ.ನ‌ಂ. ಚಂದ್ರಶೇಖರ ಇದ್ದರು. 

ಬ್ಲಾಸಂ ಪ್ರೌಢಶಾಲೆಯ ವಿದ್ಯಾರ್ಥಿಗಳು ನೆರೆ–ಹೊರೆ ಶೋಧನೆ ಕಾರ್ಯ ಯೋಜನೆಯ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರರನ್ನು ಆಹ್ವಾನಿಸಿದ್ದರು. ಅಶ್ವತ್ಥಪ್ಪ, ಗುರುಲಿಂಗಪ್ಪ, ರುಕ್ಮಿಣಿ ಭಾಷ್ಯಂ ಹಾಗೂ ಟಿ.ವಿ. ಮುರಳಿ ಅವರು ಧ್ವಜಾರೋಹಣ ನೆರವೇರಿಸಿದರು. 

ಉಚಿತ ನೇತ್ರ ತಪಾಸಣೆ: ನಗರದ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು ಕೆನರಾ ಬ್ಯಾಂಕ್
ಮಹಿಳಾ ಸಬಲೀಕರಣ ವಿಭಾಗದ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿತು. 100ಕ್ಕೂ ಅಧಿಕ ಶಿಬಿರಾರ್ಥಿಗಳು ನೇತ್ರದಾನದ ಪ್ರತಿಜ್ಞೆಯಲ್ಲಿ ಪಾಲ್ಗೊಂಡರು. ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ ಉಪಸ್ಥಿತರಿದ್ದರು.

ರಾಜ್ಯ ನಡಿಗೆದಾರರ ಒಕ್ಕೂಟ ಲಾಲ್‌ ಬಾಗ್‌ ಪಶ್ಚಿಮ ದ್ವಾರದ ಬಳಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಅದೇ ರೀತಿ, ಜಿಕೆವಿಕೆ, ಭಾರತ್ ವಿದ್ಯಾಸಂಸ್ಥೆ, ಭಾರತ್ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಕರ್ನಾಟಕ, ನೆಹರೂ ಯುವಕೇಂದ್ರ, ಶೇಷಾದ್ರಿಪುರ ಸಮೂಹ ಸಂಸ್ಥೆ, ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದವು. 

Post Comments (+)