ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಒತ್ತಡಕ್ಕೆ ಸಿಲುಕಿದ ಆಕಾಂಕ್ಷಿಗಳು

ಯಾದಗಿರಿ, ಗುರುಮಠಕಲ್ ಮತಕ್ಷೇತ್ರಗಳಲ್ಲಿ ಹಂಚಿಕೆಯಾಗದ ಬಿಜೆಪಿ ಟಿಕೆಟ್
Last Updated 12 ಏಪ್ರಿಲ್ 2018, 11:32 IST
ಅಕ್ಷರ ಗಾತ್ರ

ಯಾದಗಿರಿ: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಶಹಾಪುರದಿಂದ ಗುರು ಪಾಟೀಲ ಶಿರವಾಳ, ಸುರಪುರದಿಂದ ನರಸಿಂಹ ನಾಯಕ (ರಾಜೂಗೌಡ) ಅವರಿಗೆ ಟಿಕೆಟ್‌ ದೊರೆತಿದೆ. ಆದರೆ, ಯಾದಗಿರಿ ಮತ್ತು ಗುರುಮಠಕಲ್ ಮತಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ.

ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಪೈಪೋಟಿ ಹೆಚ್ಚಿರುವುದರಿಂದ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಕುತೂಹಲ ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ಕೋಲಿ ಸಮಾಜದ ಪ್ರಭಾವಿ, ಬಿಎಸ್‌ಆರ್ ಕಾಂಗ್ರೆಸ್‌ನ ಲಲಿತಾ ಅನಪೂರ ಬಿಜೆಪಿ ಸೇರ್ಪಡೆಯಾಗುವ ಮೂಲಕ ಮತ್ತಷ್ಟೂ ಕುತೂಹಲ ಹೆಚ್ಚಿಸಿದ್ದಾರೆ.

ಲಲಿತಾ ಅವರ ಬಿಜೆಪಿ ಪ್ರವೇಶಕ್ಕೂ ಮುಂಚೆ ಯಾದಗಿರಿ ಮತಕ್ಷೇತ್ರದಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ಡಾ.ವೀರಬಸಂತ ರಡ್ಡಿ, ಡಾ.ಶರಣಭೂಪಾಲರಡ್ಡಿ, ಡಾ.ಭೀಮಣ್ಣ ಮೇಟಿ ಮಧ್ಯೆ ಟಿಕೆಟ್ ಪೈಪೋಟಿ ಇತ್ತು. ಈ ನಾಲ್ವರು ಟಿಕೆಟ್ ಆಕಾಂಕ್ಷಿತರಲ್ಲಿ ಡಾ.ವೀರಬಸಂತರೆಡ್ಡಿ ಈಗಾಗಲೇ ಒಮ್ಮೆ ಶಾಸಕರಾಗಿದ್ದವರು, ಅನುಭವಿಗಳು. ಅವರ ಹಿರಿತನಕ್ಕೆ ಪಕ್ಷ ಮನ್ನಣೆ ನೀಡಿ ಟಿಕೆಟ್ ಸಿಕ್ಕರೂ ಸಿಗಬಹುದು ಎಂದೇ ಭಾವಿಸಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲಲಿತಾ ಅನಪೂರ, ಪ್ರಭಾವಿ ನಾಯಕ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಪಕ್ಷ ಸೇರ್ಪಡೆಯಾದಾಗಿನಿಂದ ಈ ಆಕಾಂಕ್ಷಿತರಲ್ಲಿ ತಳಮಳ ಶುರುವಾಗಿದೆ.

ಬಿಎಸ್ಆರ್ ಕಾಂಗ್ರೆಸ್‌ ಸಂಸ್ಥಾಪಕ ಶ್ರೀರಾಮುಲು ಬಿಜೆಪಿ ಸೇರ್ಪಡೆಗೊಂಡಾಗ ಲಲಿತಾ ಅನಪೂರ ಬಿಜೆಪಿ ಕಡೆಗೆ ಒಲವು ತೋರಿರಲಿಲ್ಲ. ಸ್ಥಳೀಯ ನಾಯಕರಿಂದ ಒತ್ತಡ ಬಂದಾಗಲೂ ಅವರು ನಿರಾಕರಿಸಿದ್ದರು. ಆದರೆ, ಚುನಾವಣಾ ಅಧಿಸೂಚನೆ ಸಮೀಪಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂಬ ಬಲವಾದ ಸುದ್ದಿ ಹರಡಿದೆ.

‘ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಿಕೆಟ್ ನೀಡುವ ಬಗ್ಗೆ ಭರವಸೆ ಕೊಟ್ಟಿರುವುದರಿಂದಲೇ ಪಕ್ಷ ಸೇರ್ಪಡೆಯಾಗಬೇಕಾಯಿತು. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಇಳಿಯುವ ಉದ್ದೇಶ ಇತ್ತು’ ಎಂದು ಲಲಿತಾ ಅನಪೂರ ಹೇಳುತ್ತಾರೆ.

‘ಲಲಿತಾ ಅನಪೂರ ಅವರು ಈಗ ಪಕ್ಷ ಸೇರಿದ್ದಾರೆ. ಅವರ ಪ್ರವೇಶದಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಆದರೆ, ಟಿಕೆಟ್ ಹಂಚಿಕೆ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದವರಿಗೆ ಸಿಗಲಿದೆ. ಪಕ್ಷಕ್ಕಾಗಿ ದುಡಿದವರಿಗೆ ಪಕ್ಷ ಎಂದೂ ಕಡೆಗಣಿಸಿಲ್ಲ. ಬಿಜೆಪಿ ಪಕ್ಷನಿಷ್ಠರಿಗೆ ಆದ್ಯತೆ ನೀಡುತ್ತಾ ಬಂದಿದೆ. ಅದನ್ನೇ ರಾಜಕೀಯ ತತ್ವವನ್ನಾಗಿ ರೂಢಿಸಿ ಕೊಂಡಿದೆ’ ಎನ್ನುತ್ತಾರೆ ಟಿಕೆಟ್ ಆಕಾಂಕ್ಷಿ ಡಾ.ಶರಣಭೂಪಾಲರಡ್ಡಿ.

‘ಗುರುಮಠಕಲ್’ ಮತಕ್ಷೇತ್ರದಲ್ಲಿ ಈ ಸಲ ಟಿಕೆಟ್ ಗಾಗಿ ಸ್ಥಳೀಯ ಮುಖಂಡ ಸಾಯಿಬಣ್ಣ ಬೋರಬಂಡಾ– ಹಿರಿಯ ಮುಖಂಡ ವೆಂಕಟರಡ್ಡಿ ಮುದ್ನಾಳ ಮಧ್ಯೆ ಇದುವರೆಗೂ ಪೈಪೋಟಿ ಇದೆ. ಈಗ ಅಲ್ಲೂ ಲಲಿತಾ ಅನಪೂರ ಅವರ ಹೆಸರು ಕೇಳಿಬರುತ್ತಿದೆ. ಕೋಲಿ ಸಮಾಜ ಮಹಿಳೆಯಾಗಿರುವುದರಿಂದ ಹೈಕಮಾಂಡ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೂ ಅಚ್ಚರಿ ಇಲ್ಲ. ಇದ ರಿಂದಾಗಿ ಇಲ್ಲೂ ಟಿಕೆಟ್‌ ಆಕಾಂಕ್ಷಿಗಳು ಸಹಜವಾಗಿ ಒತ್ತಡಕ್ಕೆ ಸಿಲುಕಿದ್ದಾರೆ.

**

ಗುರುಮಠಲ್‌ನಲ್ಲಿ ಅಷ್ಟಾಗಿ ಪಕ್ಷ ಸಂಘಟಿಸಿಲ್ಲ. ಹಾಗಾಗಿ, ನಾನು ಯಾದಗಿರಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ. ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ – ಲಲಿತಾ ಅನಪೂರ, ಬಿಜೆಪಿ ಟಿಕೆಟ್ ಆಕಾಂಕ್ಷಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT