ಗುರುವಾರ , ನವೆಂಬರ್ 14, 2019
26 °C

ಸ್ವಾತಂತ್ರ್ಯೋತ್ಸವ: ಭಾವಪರವಶಗೊಳಿಸಿದ ದೃಶ್ಯಕಾವ್ಯ

Published:
Updated:
Deccan Herald

ಬೆಂಗಳೂರು: ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ ಮೈನಡುಗಿಸುತ್ತಿದ್ದರೂ ರಾಷ್ಟ್ರಭಕ್ತಿಯ ಪುಳಕ ಮನದೊಳಗೆ ಬಿಸಿಯ ಕಾವು ನೀಡುತ್ತಿತ್ತು. ಧ್ವಜಾರೋಹಣದ ವೇಳೆಗೆ ಬಾನಂಗಳದಿಂದ ಹೆಲಿಕಾಪ್ಟರ್‌ ಸುರಿಸಿದ ಹೂಮಳೆ, ಕವಾಯತು ಹಾಗೂ ಮೈನವಿರೇಳಿಸುವ ಸಾಹನ ಪ್ರದರ್ಶನ ನೆರೆದಿದ್ದ ಜನರನ್ನು ಭಾವಪರವಶಗೊಳಿಸಿದವು.

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಚಿತ್ತಾಕರ್ಷಿಸಿದ ದೃಶ್ಯಗಳಿವು. ಇದರ ಜೊತೆಗೆ ದೇಶಭಕ್ತಿ ಗೀತೆಗಳಿಗೆ ಹೆಜ್ಜೆಹಾಕಿದ ವಿವಿಧ ಶಾಲೆಗಳ ಮಕ್ಕಳು ಮನಸೂರೆಗೊಂಡರು.

ಅರಳಿದ ಬಾವುಟ ಸ್ವಚ್ಛಂದವಾಗಿ ಹಾರಾಡುತ್ತಿದ್ದಂತೆ ತೆರೆದ ಜೀಪಿನಲ್ಲಿ ಸಾಗಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗೌರವ ರಕ್ಷೆ ಸ್ವೀಕರಿಸಿದರು. ಮುಖ್ಯಮಂತ್ರಿಯ ಭಾಷಣ ಮುಗಿಯುತ್ತಿದ್ದಂತೆ ಡಿಸಿಪಿ ಯೋಗೇಶ್‌ ಕುಮಾರ್‌ ನೇತೃತ್ವದಲ್ಲಿ 33 ತುಕಡಿಗಳು ಶಿಸ್ತುಬದ್ಧ ಪಥಸಂಚಲನ ನಡೆಸಿದವು. 

ಸೇನಾ ಪಡೆಗಳು, ಗಡಿ ಭದ್ರತಾ ಪಡೆ, ಅಗ್ನಿಶಾಮಕದಳ, ಪೊಲೀಸ್, ಗೃಹರಕ್ಷಕ ದಳ, ಪೊಲೀಸ್‌ ಬ್ಯಾಂಡ್‌, ಶ್ವಾನದಳ, ಸಂಚಾರ ವಾರ್ಡನ್‌, ಅಬಕಾರಿ, ಕಂದಾಯ, ಅರಣ್ಯ ಪೊಲೀಸ್‌ ಪಡೆಗಳು, ಎನ್‌ಸಿಸಿ, ಎನ್‌ಎಸ್‌ಎಸ್‌ ತುಕಡಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದವು.

ರಮಣ ಮಹರ್ಷಿ ಅಂಧರ ಶಾಲೆ ಹಾಗೂ ಸಮರ್ಥನಂ ಸಂಸ್ಥೆಯ ಅಂಗವಿಕಲ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪೊಲೀಸ್ ಬ್ಯಾಂಡ್‌ನ ಕಲಾವಿದರು ವಾದ್ಯಗಳ ಮೂಲಕ ‘ಸಾರೆ ಜಹಾಂಸೆ ಅಚ್ಛಾ...' ಹಾಡಿಗೆ ಜೀವ ತುಂಬಿದರು.

ಗೃಹಲಕ್ಷ್ಮಿ ಬಡಾವಣೆ ಮತ್ತು ನೆಲಗದರನಹಳ್ಳಿ ಸರ್ಕಾರಿ ಶಾಲೆಯ 650 ಮಕ್ಕಳು ಪ್ರಸ್ತುತ ಪಡಿಸಿದ ‘ಕ್ರಾಂತಿವೀರ ಮುಂಡರಗಿ ಭೀಮರಾಯ’ ನೃತ್ಯರೂಪಕ 1857ರಲ್ಲಿ ಬ್ರಿಟಿಷರ ಅನ್ಯಾಯ, ದಬ್ಬಾಳಿಕೆ, ದತ್ತು ಮಕ್ಕಳಿಗೆ ಹಕ್ಕಿಲ್ಲ, ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ವಿರುದ್ಧ ಬಂಡಾಯವೆದ್ದು, ಹೋರಾಡಿದ ಕಥೆಯನ್ನು ಪರಿಚಯಿಸಿತು.

ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆಯ 650 ಮಕ್ಕಳು ‘ದೇಶಭಕ್ತ ಮೈಲಾರ ಮಹಾದೇವ’ ನೃತ್ಯರೂಪಕ ನಡೆಸಿಕೊಟ್ಟರು. ಇದು ಈಗಿನ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ರೈತ ಕುಟುಂಬದಲ್ಲಿ ಜನಿಸಿದ ಮೈಲಾರಪ್ಪ ಅವರ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನೆನಪಿಸಿತು.

‘ಜೈಹಿಂದ್‌ ಜೈ ಭಾರತ’ ನೃತ್ಯರೂಪಕದಲ್ಲಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗಡಿಕಾಯುವ ಯೋಧರಿಗೆ ನಮನ ಸಲ್ಲಿಸಿದ ಲಿಲ್ಲಿರೋಸ್‌ ಪ್ರೌಢಶಾಲೆಯ 700 ಮಕ್ಕಳು, ಪ್ರೇಕ್ಷಕರು ಮನದಲ್ಲೇ ‘ವಂದೇ ಮಾತರಂ’ ಗುನುಗುವಂತೆ ಮಾಡಿದರು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ನಾಡಗೀತೆ ಹಾಗೂ ರೈತಗೀತೆ ಹಾಡಿದರು.

ಬೈಕ್ ಸಾಹಸ ಪ್ರದರ್ಶನ: ಸೇನಾ ಸೇವಾ ದಳದ (ಎಎಸ್‌ಸಿ) ‘ಟಾರ್ನಾಡೋಸ್‌’ ತಂಡದ ಯೋಧರು ನಡೆಸಿಕೊಟ್ಟ ಬೈಕ್ ಪ್ರದರ್ಶನ ಪ್ರೇಕ್ಷಕರ ಮೈಜುಮ್ಮೆನ್ನುವಂತೆ ಮಾಡಿತು. ಕ್ಯಾಪ್ಟನ್‌ ರಿಷಬ್‌ ಘಾಘಾಟ್ ನೇತೃತ್ವದಲ್ಲಿ 24 ಯೋಧರು ಬೈಕ್ ಮೇಲೆ ಕಸರತ್ತು ಪ್ರದರ್ಶಿಸಿದರು. ಬುಲೆಟ್ ಬೈಕ್‌ಗಳ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಕಾಲು ಮೇಲೆ ಮಾಡಿ, ಚಲಿಸುತ್ತಿರುವ ಬೈಕ್ ಮೇಲೆ ಏಣಿ ಏರಿ ಸಾಗಿದ ಯೋಧರು ನೋಡುಗರನ್ನು ಮಂತ್ರಮುಗ್ಧಗೊಳಿಸಿದರು.

ಬೈಕ್‌ಗಳ ಮೇಲೆ ಮಾನವ ಪಿರಮಿಡ್ ಸೃಷ್ಟಿಸಿ ನೆರೆದ ಪ್ರೇಕ್ಷಕರನ್ನು ಚಕಿತಗೊಳಿಸಿದರು. ಟ್ಯೂಬ್ ಲೈಟ್ ಜಂಪ್ ಹಾಗೂ ಬೆಂಕಿ ಚಕ್ರದ ಜಿಗಿತದ ಕಸರತ್ತುಗಳು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದವು.

ಜಿಮ್ನಾಸ್ಟಿಕ್‌ ಕಸರತ್ತು: ಇದೇ ಮೊದಲ ಬಾರಿಗೆ ಜಿಮ್ನಾಸ್ಟಿಕ್‌ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ) ಮತ್ತು ಸೆಂಟರ್‌ನ 15 ಸದಸ್ಯರು ರೋಮಾಂಚನಕಾರಿ ಕಸರತ್ತುಗಳನ್ನು ನಡೆಸಿಕೊಟ್ಟರು.

ಸಾಂಸ್ಕೃತಿಕ ವಿಭಾಗದ ಪ್ರಶಸ್ತಿ
ಸಾಂಸ್ಕೃತಿಕ ವಿಭಾಗದಲ್ಲಿ ಬನ್ನೇರುಘಟ್ಟದ ಲಿಲ್ಲಿರೋಸ್ ಪ್ರೌಢಶಾಲೆ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಗೃಹಲಕ್ಷ್ಮಿ ಬಡಾವಣೆ ಹಾಗೂ ನೆಲಗದರನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ದ್ವಿತೀಯ ಮತ್ತು ಬಿಬಿಎಂಪಿ ಶಾಲೆಗೆ ತೃತಿಯ ಬಹುಮಾನ ಲಭಿಸಿತು. 

ಅತಿಥಿ ತಂಡವಾಗಿ ಭಾಗವಹಿಸಿದ್ದ ಗೋವಾ ಪೊಲೀಸ್ ಪಡೆಗೆ ವಿಶೇಷ ಬಹುಮಾನ ದೊರೆಯಿತು. ಜೊತೆಗೆ ರಮಣ ಮಹರ್ಷಿ ಅಂಧರ ಶಾಲೆ ಹಾಗೂ ಸಮರ್ಥನಂ ಟ್ರಸ್ಟ್‌ನ ಚಿಣ್ಣರ ತಂಡಗಳೂ ಈ ಬಹುಮಾನ ಪಡೆದವು. 

ಪಥಸಂಚಲನ ಬಹುಮಾನ ವಿಜೇತರು
* ಮೊದಲನೇ ವಿಭಾಗ: ಗಡಿ ಭದ್ರತಾ ಪಡೆ
* ಎರಡನೇ ವಿಭಾಗ: ಅಬಕಾರಿ ಪೊಲೀಸ್ ಪಡೆ
* ಮೂರನೇ ವಿಭಾಗ: ಭಾರತ್ ಸೇವಾ ದಳ
* ನಾಲ್ಕನೇ ವಿಭಾಗ: ಮಿತ್ರ ಅಕಾಡೆಮಿ
* ಐದನೇ ವಿಭಾಗ: ಬೆಂಗಳೂರು ಅಂತರರಾಷ್ಟ್ರೀಯ ಅಕಾಡೆಮಿ
* ಆರನೇ ವಿಭಾಗ: ಪೊಲೀಸ್ ಪಬ್ಲಿಕ್ ಶಾಲೆ

***

–ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು

ಹೊಸಕೋಟೆ: ಸ್ವಾತಂತ್ರ್ಯ ದಿನಾಚರಣೆ
ಹೊಸಕೋಟೆ:
ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ತಹಶೀಲ್ದಾರ್ ಕೆ.ರಮೇಶ್ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

‘ಪ್ರತಿಯೊಬ್ಬ ಭಾರತೀಯನೂ ದೇಶಪ್ರೇಮ ಬೆಳಸಿಕೊಳ್ಳಬೇಕು. ಅಲ್ಲದೆ ತಮ್ಮ ಜವಾಬ್ದಾರಿ ಅರಿತು ಬಲಿಷ್ಠ ಭಾರತ ನಿರ್ಮಾಣ ಮಾಡುವಲ್ಲಿ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಎನ್.ನಾಗರಾಜು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಶರತ್ ಬಚ್ಚೇಗೌಡ ಧ್ವಜಾರೋಹಣ ನೆರವೇರಿಸಿದರು. ಟೌನ್ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷೆ ಟಿ.ಅರುಣ ಧ್ವಜಾರೋಹಣ ಮಾಡಿದರು.

ಪ್ರತಿಭಟನೆ: ತಾಲ್ಲೂಕಿನ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಅಧ್ಯಕ್ಷ ಪಿ.ಎಂ.ಚಿನ್ನಸ್ವಾಮಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಸಂವಿಧಾನವನ್ನು ಸುಟ್ಟ ದೇಶದ್ರೋಹಿಗಳನ್ನು ಗಡಿಪಾರುವಂತೆ ಆಗ್ರಹಿಸಿ ಇಲ್ಲಿನ ಪ್ರವಾಸಿ ಮಂದಿರದ ವೃತ್ತದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.

ಯಲಹಂಕ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಬೆಂಗಳೂರು:
ಯಲಹಂಕ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಡಳಿತ ಸಮಿತಿ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ‘ನಮ್ಮ ದೇಶದ ಗಡಿಯಾಚೆಗಿನ ಶತ್ರುಗಳಿಗಿಂತ ದೇಶದೊಳಗಿನ ಶತ್ರುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹೊರಗಿನ ಶತ್ರುಗಳಿಂದ ರಕ್ಷಿಸಲು ನಮ್ಮ ಸೈನಿಕರು ಚಳಿ, ಮಳೆಯೆನ್ನದೆ ಗಡಿ ಕಾಯುತ್ತಿದ್ದಾರೆ. ಆದರೆ ದೇಶದೊಳಗಿದ್ದುಕೊಂಡು ದ್ರೋಹ ಬಗೆಯುವವರನ್ನು ಮಟ್ಟಹಾಕಲು ದೇಶದ ಪ್ರತಿಯೊಬ್ಬ ಪ್ರಜೆಯೂ ಸರ್ವಸನ್ನದ್ಧರಾಗಬೇಕು’ ಎಂದರು.

ಪೊಲೀಸರು, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಕವಾಯತು ನಡೆಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ನೃತ್ಯ, ಹಾಡು, ಯೋಗಾಸನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನಸೆಳೆದವು. 

ಪ್ರತಿಕ್ರಿಯಿಸಿ (+)