ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವ: ಪೊಲೀಸ್ ಬಿಗಿ ಭದ್ರತೆ

ಗರುಡಾ, ಕ್ಷಿಪ್ರ ಕಾರ್ಯಪಡೆಯ ಹದ್ದಿನ ಕಣ್ಣು * 2,500ಕ್ಕೂ ಹೆಚ್ಚು ಸಿಬ್ಬಂದಿ ಗಸ್ತು
Last Updated 14 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ‘ಗರುಡಾ’ ಹಾಗೂ ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್‌) ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಮಾಣೆಕ್ ಷಾ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಹೆಚ್ಚು ಸುದ್ದಿ ಆಗಿರುವ ಚಾಮರಾಜಪೇಟೆ ಮೈದಾನದಲ್ಲೂ ಧ್ವಜಾರೋಹಣ ನೆರವೇರಲಿದೆ. ಜೊತೆಗೆ, ಕಾಂಗ್ರೆಸ್ ಪಕ್ಷದಿಂದಲೂ ‘ಸ್ವಾತಂತ್ರ್ಯ ನಡಿಗೆ’ ಮೆರವಣಿಗೆ ಆಯೋಜಿಸಲಾಗಿದೆ. ಮೂರು ಕಡೆಗಳಲ್ಲೂ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪೊಲೀಸ್ ಕಮಿಷನರ್ ‍ಪ್ರತಾಪ್‌ ರೆಡ್ಡಿ, ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು ಹಾಗೂ ಡಿಸಿಪಿಗಳು ಭದ್ರತೆ ಹೊಣೆ ಹೊತ್ತುಕೊಂಡಿದ್ದಾರೆ. ಭಾನುವಾರದಿಂದಲೇ ಕೆಲ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಅನುಮಾನ ಬಂದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜಾಗದ ವಿಚಾರವಾಗಿ ಚರ್ಚೆಗೆ ಕಾರಣವಾಗಿದ್ದ ಚಾಮರಾಜಪೇಟೆ ಮೈದಾನ ಬಳಿ ಹೆಚ್ಚಿನ ನಿಗಾ ವಹಿಸಲಾಗಿದೆ. ತುರ್ತು ಕಾರ್ಯಾಚರಣೆ ಕೈಗೊಳ್ಳುವ ತರಬೇತಿ ಪಡೆದಿರುವ ‘ಗರುಡಾ’ ಪಡೆಯ ಸಿಬ್ಬಂದಿಯನ್ನು ಮೈದಾನ ಬಳಿ ನಿಯೋಜಿಸಲಾಗಿದೆ. ಇವರ ಜೊತೆ ಕ್ಷಿಪ್ರ ಕಾರ್ಯಪಡೆಯ 240 ಸಿಬ್ಬಂದಿ ಕಾವಲು ಸಹ ಮೈದಾನಕ್ಕೆ ಇರಲಿದೆ.

ಮೈದಾನ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಭಾನುವಾರ ರಕ್ಷಣಾ ಪಡೆಗಳು, ಶಸ್ತ್ರಸಜ್ಜಿತವಾಗಿ ಪಥಸಂಚಲನ ಸಹ ನಡೆಸಿದವು. ಯಾರಾದರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಚಾಮರಾಜಪೇಟೆ ಮೈದಾನಕ್ಕೆ ಭಾನುವಾರ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು.

2,500ಕ್ಕೂ ಹೆಚ್ಚು ಸಿಬ್ಬಂದಿ: ‘ನಗರದ ಪ್ರತಿಯೊಂದು ಸ್ಥಳದಲ್ಲೂ ಬಿಗಿ ಭದ್ರತೆ ಇರಲಿದೆ. 2,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆಯಾ ಠಾಣೆ ಪೊಲೀಸರು, ನಿರಂತರವಾಗಿ ಗಸ್ತು ತಿರುಗಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದರೆ, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದ್ದಾರೆ. ತುರ್ತು ಕಾರ್ಯಾಚರಣೆ ಕೈಗೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT