ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬುಲ್ಸ್‌ಗೆ ರಮೇಶ್‌ ಕೋಚ್‌

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಹಿರಿಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್‌ ಅವರು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಅವರು ಬುಲ್ಸ್‌ ಫ್ರಾಂಚೈಸ್‌ ಜೊತೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಬುಲ್ಸ್‌ ಅಕಾಡೆಮಿ ಆರಂಭವಾದ ದಿನದಿಂದಲೂ ಅಲ್ಲಿ ಮುಖ್ಯ ಕೋಚ್‌ ಆಗಿ ಕೆಲಸ ಮಾಡುತ್ತಿದ್ದೆ. ಈ ಬಾರಿ ಸೀನಿಯರ್‌ ತಂಡಕ್ಕೆ ತರಬೇತಿ ನೀಡುವಂತೆ ಆಹ್ವಾನ ಬಂದಿದ್ದರಿಂದ ಒಪ್ಪಿಕೊಂಡಿದ್ದೇನೆ. ಮತ್ತೊಬ್ಬ ಕೋಚ್‌ ರಣಧೀರ್‌ ಸಿಂಗ್‌ ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದರು.

‘ಗುರುವಾರ ಮುಕ್ತಾಯವಾದ ಹರಾಜಿನಲ್ಲಿ ಅನುಭವಿ ಮತ್ತು ಯುವ ಆಟಗಾರರನ್ನು ಖರೀದಿಸಿದ್ದೇವೆ. ಈ ಸಲ ಕರ್ನಾಟಕದ ನಾಲ್ಕು ಮಂದಿ ತಂಡದಲ್ಲಿದ್ದಾರೆ. ತರಬೇತಿಯ ವೇಳೆ ಆಟಗಾರರು ತೋರುವ ಸಾಮರ್ಥ್ಯದ ಆಧಾರದಲ್ಲಿ ಆಡುವ ಬಳಗವನ್ನು ಅಂತಿಮಗೊಳಿಸುತ್ತೇವೆ. ರೋಹಿತ್‌ ಕುಮಾರ್‌, ಕಾಶಿಲಿಂಗ್‌ ಅಡಕೆ ಮತ್ತು ಪವನ್‌ ಕುಮಾರ್‌ ಅವರಂತಹ ಪ್ರತಿಭಾನ್ವಿತ ರೈಡರ್‌ಗಳು ತಂಡದಲ್ಲಿದ್ದಾರೆ. ಈ ಬಾರಿ ಪ್ರಶಸ್ತಿ ಗೆಲ್ಲಲು ಶ್ರಮಿಸುತ್ತೇವೆ’ ಎಂದರು.

‘ರಕ್ಷಣಾ ವಿಭಾಗದಲ್ಲಿ ತಂಡದ ಶಕ್ತಿ ವೃದ್ಧಿಸಬೇಕಿದೆ. ಹೀಗಾಗಿ ತರಬೇತಿ ವೇಳೆ ಈ ವಿಭಾಗಕ್ಕೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ನುಡಿದರು.

ಮಿಂಚುವ ವಿಶ್ವಾಸವಿದೆ: ‘ಈ ಬಾರಿ ಮತ್ತೆ ತಮಿಳ್‌ ತಲೈವಾಸ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನೆಲಮಂಗಲದ ರೈಡರ್ ಜೆ.ದರ್ಶನ್‌ ಹೇಳಿದರು.

‘ಆಟಗಾರರ ಹರಾಜಿನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಬೆಂಗಳೂರು ಬುಲ್ಸ್‌ ತಂಡಗಳು ನನ್ನ ಮೇಲೆ ಹೆಚ್ಚು ಬಿಡ್‌ ಮಾಡಿದ್ದವು. ತಲೈವಾಸ್‌ ಫ್ರಾಂಚೈಸ್‌ ‘ಆರ್‌ಟಿಎಂ’ ಕಾರ್ಡ್‌ ಬಳಸಿ ತಂಡದಲ್ಲಿ ಉಳಿಸಿಕೊಂಡಿತು’ ಎಂದು ಸಂತಸ ವ್ಯಕ್ತಪಡಿಸಿದರು.

‘ಅಜಯ್‌ ಠಾಕೂರ್‌, ಸುಖೇಶ್‌ ಹೆಗ್ಡೆ ಅವರಂತಹ ಅನುಭವಿಗಳು ತಂಡದಲ್ಲಿದ್ದು ಅವರಿಂದ ಹೊಸ ಕೌಶಲಗಳನ್ನು ಕಲಿಯಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT