ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿಯಲ್ಲಿ 1945ರಲ್ಲಿ ಸ್ಥಾಪನೆಯಾದ ಸಂಸ್ಥೆ: ಸಂಸ್ಕೃತಿಯ ಸೇತು ಐಐಡಬ್ಲ್ಯುಸಿ

Last Updated 25 ಡಿಸೆಂಬರ್ 2021, 19:58 IST
ಅಕ್ಷರ ಗಾತ್ರ

ಬೆಂಗಳೂರು: ನೃತ್ಯ, ಸಂಗೀತ, ಕಲಾ ಪ್ರದರ್ಶನ, ವಿಚಾರಗೋಷ್ಠಿ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 75ಕ್ಕೂ ಅಧಿಕ ವರ್ಷಗಳಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್ (ಐಐಡಬ್ಲ್ಯುಸಿ) ವೇದಿಕೆ ಕಲ್ಪಿಸುತ್ತಿದೆ. ಹಲವು ತಲೆಮಾರುಗಳ ಅರಿವಿನ ಕುತೂಹಲ ತಣಿಸಿದ, ಸಾಂಸ್ಕೃತಿಕ ಅನುಭವಗಳನ್ನು ಉಣಬಡಿಸಿದ ಈ ಸಂಸ್ಥೆ ಕೆಲ ತಿಂಗಳ ಹಿಂದಷ್ಟೇ ಅಮೃತ ಮಹೋತ್ಸವವನ್ನೂ ಆಚರಿಸಿಕೊಂಡಿದೆ.

ಬಸವನಗುಡಿಯ ಹಸಿರು ವಾತಾವರಣದಲ್ಲಿ 1945ರಲ್ಲಿ ಜನ್ಮ ತಳೆದ ಈ ಸಂಸ್ಥೆಯು ಬಿ.ಪಿ. ವಾಡಿಯ ಅವರ ಚಿಂತನೆಯ ಕೂಸು. ಮೊದಲ ನಾಲ್ಕು ವರ್ಷಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಚಟುವಟಿಕೆ ನಡೆಸಿ, 1948ರಲ್ಲಿ ಸ್ವಂತ ಜಾಗವನ್ನು ಖರೀದಿಸಿತು. ಅಂದಿನಿಂದ ಇಂದಿನವರೆಗೂ ಈ ಸಾಂಸ್ಕೃತಿಕ ಕೇಂದ್ರವು ಈ ನೆಲದ ಕಲೆ ಮತ್ತು ಸಂಸ್ಕತಿಯ ಸೊಬಗನ್ನು ವಿಸ್ತರಿಸಲು ಅವಿರತವಾಗಿ ಶ್ರಮಿಸುತ್ತಿದೆ.

‘ಸಂಸ್ಥೆಯು ಜನ್ಮ ತಳೆದಿರುವುದು ಮಾನವೀಯತೆಯ ಹೆಗ್ಗುರುತಾಗಿರುವಂತಹ ಬದುಕಿನ ಸೊಬಗುಗಳನ್ನು ರೂಢಿಸಿಕೊಳ್ಳಲು. ಇದು ಜನಸಾಮಾನ್ಯರಿಗೆ ಅವಕಾಶ ಕಲ್ಪಿಸುವ ಸಾಂಸ್ಕೃತಿಕ ಕೇಂದ್ರವಾಗಿದೆಯೇ ಹೊರತು, ವಿದ್ವತ್ ಸಭೆಯಲ್ಲ’ ಎನ್ನುವುದು ಸಂಸ್ಥೆಯ ಧ್ಯೇಯ ವಾಕ್ಯ. ಇದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಸಾವಿರಾರು ಸಮಾರಂಭಗಳಿಗೆ ವೇದಿಕೆ ಕಲ್ಪಿಸಿದೆ.

ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಪೆಂಚನ್ ಲಾಮಾ ಅವರಂತಹ ಖ್ಯಾತನಾಮರು, ಸಿ.ವಿ.ರಾಮನ್, ಜ್ಯೂಲಿಯನ್ ಹೆಕ್ಸ್‌ಲೇ, ರಿಚರ್ಡ್‌ ಬಂಚ್‌ ಒಳಗೊಂಡಂತೆ ವಿವಿಧ ನೊಬೆಲ್ ಪುರಸ್ಕೃತರು, ರಾಷ್ಟ್ರಪತಿಸರ್ವಪಲ್ಲಿ ರಾಧಾಕೃಷ್ಣನ್, ರಾಜ್ಯಪಾಲರಾದ ವಿ.ವಿ.ಗಿರಿ, ಸಿ. ರಾಜಗೋಪಾಲಚಾರಿ, ಸರ್ ಮಿರ್ಜಾ ಇಸ್ಮಾಯಿಲ್, ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್, ತಿರುವನಂತಪುರದ ರಾಜ ಮಾರ್ತಾಂಡ ವರ್ಮ, ವಿಜ್ಞಾನಿಗಳಾದ ಹೋಮಿ ಜೆ. ಭಾಭಾ, ವಿಕ್ರಮ್ ಸಾರಾಭಾಯಿ, ಪ್ರಖ್ಯಾತ ಸಂಗೀತಗಾರರು, ಸಾಹಿತಿಗಳು, ನೃತ್ಯಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಇಲ್ಲಿಗೆ ಭೇಟಿ ನೀಡಿ, ಉಪನ್ಯಾಸ ನೀಡಿದ್ದಾರೆ.

ಪ್ರತ್ಯೇಕ ಕಲಾ ವಿಭಾಗ:ಬಿ.ಪಿ. ವಾಡಿಯಾ ಅವರು ತಮ್ಮ ಸ್ವಂತ ಹಣದ ಜೊತೆಗೆ ದಾನಿಗಳು ಹಾಗೂ ಜನಸಾಮಾನ್ಯರಿಂದ ದೇಣಿಗೆಗೆ ಪಡೆದು, ಸಾರ್ವಜನಿಕ ಸಭಾಂಗಣ ಮತ್ತು ಗ್ರಂಥಾಲಯದ ಕಟ್ಟಡವನ್ನು ನಿರ್ಮಿಸಿದ್ದರು. ಈ ಸಂಸ್ಥೆಯು ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಕಲಾ ಪ್ರದರ್ಶನಕ್ಕಾಗಿ ಎರಡು ಸುಸಜ್ಜಿತ ಸಭಾಂಗಣಗಳನ್ನು ಹೊಂದಿದೆ.ಸಂಸ್ಥೆಯು 1945ರಿಂದ ಈವರೆಗೆ ಆರು ಮಂದಿ ಅಧ್ಯಕ್ಷರನ್ನು ಕಂಡಿದ್ದು, ವಿ.ಜೆ.ಪ್ರಸಾದ್ ಅವರು ಈಗಿನ ಅಧ್ಯಕ್ಷರು.

ಸಂಸ್ಥೆಯಲ್ಲಿ 3,702 ಆಜೀವ ಸದಸ್ಯರಿದ್ದಾರೆ. ವಿವಿಧ ಸಂಘ–ಸಂಸ್ಥೆಗಳೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯೋಜನೆಗಳಿಗೆ ಕೈಜೋಡಿಸುತ್ತಿವೆ. ಸಂಸ್ಥೆಯಲ್ಲಿ ಪ್ರತ್ಯೇಕ ಕಲಾ ವಿಭಾಗವಿದ್ದು, ದೇಶ–ವಿದೇಶದ ಪ್ರಮುಖ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನ ಕಂಡಿವೆ. ಚಿತ್ರಕಲಾ ಪ್ರದರ್ಶನಗಳನ್ನೂ ಆಯೋಜಿಸಲಾಗುತ್ತಿದೆ. ಬೇಸಿಗೆ ಶಿಬಿರವನ್ನೂ ಪ್ರತಿವರ್ಷ ಏರ್ಪಡಿಸಲಾಗುತ್ತಿದ್ದು, ಚಿತ್ರಕಲೆ, ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಉತ್ತೇಜನ ನಿಡಲಾಗುತ್ತಿದೆ.

‘ದೇಶದ ಅತಿ ದೊಡ್ಡ ಖಾಸಗಿ ಗ್ರಂಥಾಲಯ’
‘ಎಲ್ಲ ವಯೋಮಾನದವರಿಗಾಗಿ ದೊಡ್ಡ ಪುಸ್ತಕ ಭಂಡಾರರೇ ಇಲ್ಲಿದೆ. 1947ರಲ್ಲಿ ಪ್ರಾರಂಭವಾದ ಗ್ರಂಥಾಲಯವು ದಾನಿಗಳ ನೆರವಿನಿಂದ ನಡೆಯುತ್ತಿದೆ. 1951ರಲ್ಲಿ ವಾಡಿಯಾ ಭವನದ ಮೇಲ್ಭಾಗದಲ್ಲಿ ಗ್ರಂಥಾಲಯಕ್ಕೆ ವಿಶಾಲ ಭವನವನ್ನು ನಿರ್ಮಿಸಲಾಯಿತು. ಈ ಗ್ರಂಥಾಲಯವು ಈಗ ದೇಶದಲ್ಲಿಯೇ ಅತಿ ದೊಡ್ಡ ಖಾಸಗಿ ಗ್ರಂಥಾಲಯವೆಂದು ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಕರ ಗ್ರಂಥಗಳು ದೊರೆಯುತ್ತವೆ. ಮಕ್ಕಳಿಗಾಗಿಯೂ ಪ್ರತ್ಯೇಕ ಗ್ರಂಥಾಲಯವಿದ್ದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಂದ ವರ್ಷಕ್ಕೆ ₹ 200 ಶುಲ್ಕ ಪಡೆಯಲಾಗುತ್ತಿದೆ’ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅರಕಲಿ ವೆಂಕಟೇಶ್ ಪ್ರಸಾದ್ ತಿಳಿಸಿದರು.

*
ಸ್ವಯಂ ಸೇವಕರು, ದಾನಿಗಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಯು ಅಮೃತ ಮಹೋತ್ಸವ ಆಚರಿಸಿ, ಮುನ್ನಡೆಯುತ್ತಿದೆ. ಈ ಪಯಣದಲ್ಲಿ ಸರ್ಕಾರ ಹಾಗೂ ವಿವಿಧ ಸಂಘ–ಸಂಸ್ಥೆಗಳು ನಮಗೆ ಸಹಕಾರ ನೀಡಿವೆ.
-ಅರಕಲಿ ವೆಂಕಟೇಶ್ ಪ್ರಸಾದ್, ಐಐಡಬ್ಲ್ಯುಸಿ ಗೌರವ ಕಾರ್ಯದರ್ಶಿ

ಸಂಸ್ಥೆಯ ಹೆಜ್ಜೆ ಗುರುತು

1945 : ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌ ಪ್ರಾರಂಭ

1950: ಡಬ್ಲ್ಯುಕ್ಯು ಕಾಸ್ಮೊಪಾಲಿಟನ್ ವಿದ್ಯಾರ್ಥಿನಿಲಯ ಪ್ರಾರಂಭ

1951: ಮುಖ್ಯಗ್ರಂಥಾಲಯ ಮತ್ತು ಸಭಾಂಗಣ ಉದ್ಘಾಟನೆ

1955: ಗ್ರಂಥಾಲಯದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಪ್ರಾರಂಭ

1970: ರಜತ ಮಹೋತ್ಸವದ ಭಾಗವಾಗಿ ಮಕ್ಕಳಿಗಾಗಿ ಪ್ರತ್ಯೇಕ ಗ್ರಂಥಾಲಯದ ಕಟ್ಟಡ ಉದ್ಘಾಟನೆ

1995: ಸ್ವರ್ಣ ಮಹೋತ್ಸವ ಆಚರಣೆ

2005: ವಜ್ರ ಮಹೋತ್ಸವದ ಮನೋರಮಾ ಸಭಾಂಗಣ ಉದ್ಘಾಟನೆ

2019: ಪರಿಷತ್ ಮಕ್ಕಳ ಗ್ರಂಥಾಲಯ ಉದ್ಘಾಟನೆ

2021: ಅಮೃತ ಮಹೋತ್ಸವ ಆಚರಣೆ

ಅಂಕಿ–ಅಂಶಗಳು

85 ಸಾವಿರ:ಸಂಸ್ಥೆಯ ಗ್ರಂಥಾಲಯದಲ್ಲಿರುವ ಪುಸ್ತಕಗಳು

10 ಸಾವಿರ:ಮಕ್ಕಳ ಗ್ರಂಥಾಲಯದಲ್ಲಿರುವ ಪುಸ್ತಕಗಳು

2,100:ಸಂಸ್ಥೆಯಲ್ಲಿ ನಡೆದಿರುವ ಉಪನ್ಯಾಸಗಳು

3,600:ಸಂಸ್ಥೆಯಲ್ಲಿ ನಡೆದ ಕಲಾ ಪ್ರದರ್ಶನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT