ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲತ್ತಿ ಗ್ರಾಮದಲ್ಲಿ ನೀರಿಗಾಗಿ ಸಂಕಷ್ಟ

ಬತ್ತಿ ಹೋದ ಕೊಳವೆ ಬಾವಿಗಳು; ಗ್ರಾಮಸ್ಥರ ಪರದಾಟ
Last Updated 17 ಏಪ್ರಿಲ್ 2018, 8:38 IST
ಅಕ್ಷರ ಗಾತ್ರ

ಹಿರೇಕೆರೂರ: ಸತತ ಬರಗಾಲದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಸಮೀಪದ ಹುಲ್ಲತ್ತಿ ಗ್ರಾಮದಲ್ಲಿ ಜನತೆ ನೀರಿಗಾಗಿ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ. ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಮನೆ ಮನೆಗೆ ನಳದ ಸಂಪರ್ಕ ಕಲ್ಪಿಸಿ ನೀರು ಬಿಡಲಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಮಳೆ ಇಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿರುವ ಪರಿಣಾಮ, ನೀರಿಗಾಗಿ ಜನತೆ ತೊಂದರೆ ಅನುಭವಿಸುವಂತಾಗಿದೆ. ನೀರಿನ ಕೊರತೆಯಿಂದ ಮನೆ ಮನೆಗೆ ನೀರು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಕೆರೆ, ಹೊಂಡಗಳ ಬದಿಯಲ್ಲಿ ನೀರು ಬಿಡಲಾಗುತ್ತಿದೆ.

ಜನತೆ ನೀರಿಗಾಗಿಯೇ ಸಿದ್ಧಪಡಿಸಿಕೊಂಡಿರುವ ಬಂಡಿಗಳಲ್ಲಿ ನೀರು ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರತಿ ಮನೆಯಲ್ಲಿ ನೀರಿನ ಬಂಡಿಗಳಿವೆ. ಸ್ವಂತ ಕೊಳವೆ ಬಾವಿ ಹೊಂದಿರುವ ರೈತರು ತಮ್ಮ ಕೊಳವೆ ಬಾವಿಗಳಿಂದ ಟ್ರ್ಯಾಕ್ಟರ್ ಮೂಲಕ ಮನೆಗೆ ನೀರು ತರುತ್ತಿದ್ದಾರೆ.

‘ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಗೆ ಗ್ರಾಮ ಪಂಚಾಯ್ತಿಯಿಂದ ಅವಿರತ ಶ್ರಮಿಸುತ್ತಿದ್ದೇವೆ. ಕೊಳವೆ ಬಾವಿಗಳು ಬತ್ತಿ ಹೋಗುತ್ತಿರುವುದರಿಂದ ನೀರಿನ ಕೊರತೆ ಕಾಣುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರವಿ ಹಾದ್ರಿಹಳ್ಳಿ ತಿಳಿಸಿದರು.

‘ಸದ್ಯ ಗ್ರಾಮದಲ್ಲಿ 4 ಕೊಳವೆ ಬಾವಿಗಳು ಇವೆ. ಇವುಗಳನ್ನು ಸತತವಾಗಿ ಸುಸ್ಥಿತಿಯಲ್ಲಿಟ್ಟರೆ ನೀರು ಇಂಗಿ ಹೋಗುವ ಆತಂಕವಿದೆ. ಹಾಗಾಗಿ, ನಿತ್ಯ ಬೆಳಿಗ್ಗೆ 5ರಿಂದ 10ರವರೆಗೆ ಹಾಗೂ ಸಂಜೆ 4ರಿಂದ 7ರವರೆಗೆ ನೀರು ಬಿಡುವ ವ್ಯವಸ್ಥೆ ಮಾಡಿದ್ದೇವೆ’ ಎಂದು ಹೇಳಿದರು.

ಗ್ರಾಮಸ್ಥನಿಂದ ಉಚಿತ ನೀರು ಪೂರೈಕೆ

‘ಪಂಚಾಯ್ತಿಯಿಂದ 15ರಿಂದ 20 ಕೊಳವೆ ಬಾವಿಗಳನ್ನು ಕೊರೆಸಿದರೂ, ನೀರು ಸಿಕ್ಕಿಲ್ಲ. ಗ್ರಾಮದ ಲಕ್ಕನಗೌಡ ಬಣಕಾರ ಎಂಬುವವರು ತಮ್ಮ ಕೊಳವೆ ಬಾವಿಯಿಂದ ಜನತೆಗೆ ಉಚಿತವಾಗಿ ನೀರು ನೀಡುತ್ತಿದ್ದಾರೆ. ಪಂಚಾಯ್ತಿಯಿಂದ ಇದಕ್ಕೆ ಹಣ ನೀಡುವ ಅವಕಾಶವಿದೆ. ಆದರೆ, ಅವರು ಹಣ ಸ್ವೀಕರಿಸದೇ ಉಚಿತವಾಗಿ ನೀರು ಕೊಡುತ್ತಿದ್ದಾರೆ. ಬಸವಂತಪ್ಪ ದೀವಿಗಿಹಳ್ಳಿ ಎಂಬುವವರು ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಮಾರು 2 ವರ್ಷಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರವಿ ಹಾದ್ರಿಹಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT