ಸೋಮವಾರ, ಆಗಸ್ಟ್ 15, 2022
20 °C
‘ಹಾಸ್ಟೆಲ್‌ ಕಟ್ಟಡಕ್ಕೆ ಸಿಗದ ಅನುಮತಿ ಒಳಾಂಗಣ ಕ್ರೀಡಾಂಗಣಕ್ಕೆ ಸಿಕ್ಕಿದ್ದು ಹೇಗೆ?’

ಉದ್ಯಾನದ ಜಾಗದಲ್ಲಿ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೆಹಳ್ಳಿ ವಾರ್ಡ್‌ನ ಸಹಕಾರ ನಗರದಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಬಿಬಿಎಂಪಿಗೆ ಸೇರ್ಪಡೆಯಾಗಿದ್ದ ನಗರಸಭೆ ಮತ್ತು ಪುರಸಭೆ ಪ್ರದೇಶಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ವಿಶೇಷ ಅನುದಾನದಲ್ಲಿ ₹ 6.55 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರಿಡಾಂಗಣ ನಿರ್ಮಿಸಲಾಗುತ್ತಿದೆ. ಇದಕ್ಕೆ 2018ರಲ್ಲೇ ಕಾರ್ಯಾದೇಶ ನೀಡಲಾಗಿದೆ. ಒಳಾಂಗಣ ಕ್ರೀಡಾಂಗಣದ ಕಾಮಗಾರಿಯೂ ಶೇ 50ರಷ್ಟು ಪೂರ್ಣಗೊಂಡಿದೆ. ಉದ್ಯಾನಕ್ಕೆ ಮೀಸಲಿರಿಸಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಪಾಲಿಕೆ ಕಟ್ಟಡ ನಿರ್ಮಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

‘ಇದೇ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ಉದ್ಯಾನಕ್ಕೆ ಮೀಸಲಾದ ಜಾಗ ಎಂಬ ಕಾರಣಕ್ಕೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಅದೇ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣದ ಕಟ್ಟಡ ನಿರ್ಮಾಣ ಹೇಗೆ ಸಾಧ್ಯ’ ಎಂದು ಬಿಜೆಪಿ ಮುಖಂಡ ಕೆ.ಎನ್‌.ಚಕ್ರಪಾಣಿ ಪ್ರಶ್ನಿಸಿದರು. 

‘ಒಳಾಂಗಣ ಕ್ರೀಡಾಂಗಣಕ್ಕೆ ಉದ್ಯಾನದ ಜಾಗ ಬಳಸಿಕೊಳ್ಳುವ ವಿಷಯ ತಿಳಿದು ನಾವು ಆರಂಭದಲ್ಲೇ ಅಧಿಕಾರಿಗಳನ್ನು ಭೇಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದ್ದೆವು. ನಮ್ಮ ಆಕ್ಷೇಪವನ್ನು ಕಡೆಗಣಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಬಡಾವಣೆಯಲ್ಲಿ ಒಟ್ಟು ಆರು ಕಡೆ ಉದ್ಯಾನಗಳಿಗೆ ಜಾಗ ಮೀಸಲಿಟ್ಟಿತ್ತು. ಅವುಗಳಲ್ಲಿ ಮೂರು ಕಡೆ ಮಾತ್ರ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ಜಾಗಗಳು ಹಾಗೆಯೇ ಇವೆ. ಅವುಗಳಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಬೇಕು. ಅನ್ಯ ಉದ್ಯೇಶಕ್ಕೆ ಬಳಸಬಾರದು’ ಎಂದು ಅವರು ಒತ್ತಾಯಿಸಿದರು. 

‘ಈ ಪ್ರದೇಶದಲ್ಲಿ ಜನವಸತಿ ಹೆಚ್ಚುತ್ತಿದೆ. ಹಾಗಾಗಿ ಕಟ್ಟಡಗಳಿಗಿಂತ ಉದ್ಯಾನದ ಅವಶ್ಯಕತೆ ಹೆಚ್ಚು ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಜಾಗ ಲಭ್ಯ ಇರುವ ಕಡೆ ಆದಷ್ಟು ಸಸಿಗಳನ್ನು ಬೆಳೆಸಬೇಕು’ ಎಂದು ಅವರು ಸಲಹೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಯಲಹಂಕ ವಲಯದ ಕಾರ್ಯಪಾಲಕ ಎಂಜಿನಿಯರ್‌ (ಯೋಜನೆ) ದೇವ ನಾಯ್ಕ್‌, ‘ನಾನು ಇತ್ತೀಚೆಗಷ್ಟೇ ಇಲ್ಲಿಗೆ ವರ್ಗಾವಣೆಗೊಂಡಿದ್ದೇನೆ. ಹಾಗಾಗಿ ಇದರ ಹಿನ್ನೆಲೆಯ ತಿಳಿಯದು’ ಎಂದರು.

‘ಇಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಬಗ್ಗೆ 2017ರಲ್ಲೇ ನಿರ್ಣಯ ಕೈಗೊಳ್ಳಲಾಗಿದೆ. 2018ರ ಜನವರಿ ತಿಂಗಳಲ್ಲೇ ಕಾರ್ಯಾದೇಶವನ್ನೂ ನೀಡಲಾಗಿದೆ. ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಕ್ಕೆ ಮೂರು ವರ್ಷಗಳ ಬಳಿಕ ಧುತ್ತೆಂದು ಆಕ್ಷೇಪ ವ್ಯಕ್ತವಾಗಿದ್ದಾದರೂ ಏಕೆ ಎಂದು ತಿಳಿಯದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು