ಮೆಟ್ರೊ ನಿಲ್ದಾಣಕ್ಕೆ ಇನ್ಫೊಸಿಸ್‌ ₹200 ಕೋಟಿ ದೇಣಿಗೆ

7
19ರಂದು ಬಿಎಂಆರ್‌ಸಿಎಲ್‌–ಪ್ರತಿಷ್ಠಾನ ಒಪ್ಪಂದ

ಮೆಟ್ರೊ ನಿಲ್ದಾಣಕ್ಕೆ ಇನ್ಫೊಸಿಸ್‌ ₹200 ಕೋಟಿ ದೇಣಿಗೆ

Published:
Updated:

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೊ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನ ₹200 ಕೋಟಿ ದೇಣಿಗೆ ನೀಡಲಿದೆ. ಈ ಸಂಬಂಧ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ಇನ್ಫೊಸಿಸ್‌ ಪ್ರತಿಷ್ಠಾನ ಇದೇ 19ರಂದು ಒಪ್ಪಂದ ಮಾಡಿಕೊಳ್ಳಲಿವೆ.

ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಶನಿವಾರ ಭೇಟಿ ಮಾಡಿ ಸಮಾಲೋಚಿಸಿದರು. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಇನ್ಫೊಸಿಸ್‌ ಕೇಂದ್ರ ಕಚೇರಿಯ ಸಮೀಪದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದೆ.

‘ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಕಾರ್ಯಗಳಾಗಿವೆ. ಕಿದ್ವಾಯಿ ಆಸ್ಪತ್ರೆಗೆ ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಇದೀಗ ಮೆಟ್ರೊ ನಿಲ್ದಾಣ ಮತ್ತು ಹಳಿಗಳ ನಿರ್ಮಾಣಕ್ಕೆ ₹200 ಕೋಟಿಗಳನ್ನು ವ್ಯಯಿಸಲು ತೀರ್ಮಾನಿಸಿದ್ದಾರೆ. ಇದೊಂದು ದೊಡ್ಡ ಮೊತ್ತ’ ಎಂದು ಕುಮಾರಸ್ವಾಮಿ ತಿಳಿಸಿದರು.

ಅನೇಕ ಕಾರ್ಪೊರೇಟ್ ಸಂಸ್ಥೆಗಳಿಗೆ ಸುಧಾಮೂರ್ತಿ ಸ್ಫೂರ್ತಿಯಾಗಿದ್ದಾರೆ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.

‘ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು..’ ಎಂಬ ಸರ್ವಜ್ಞನ ವಚನದಂತೆ ದುಡಿದ ಹಣವನ್ನು ಜನರಿಗಾಗಿ ವೆಚ್ಚ ಮಾಡುವುದಲ್ಲಿನ ಸಂತೋಷ ಬೇರೆ ಯಾವುದರಲ್ಲಿ ಇಲ್ಲ. ಮೆಟ್ರೊ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣ ಪೂರ್ಣಗೊಂಡ ನಂತರ 30 ವರ್ಷಗಳವರೆಗೆ ಅದರ ನಿರ್ವಹಣೆಯನ್ನು ಪ್ರತಿಷ್ಠಾನ ನೋಡಿಕೊಳ್ಳಲಿದೆ ಎಂದು ಸುಧಾಮೂರ್ತಿ ತಿಳಿಸಿದರು.

ಮೆಟ್ರೊ ಎರಡನೇ ಹಂತದ ಯೋಜನೆಯ ಆರ್‌.ವಿ.ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಈ ನಿಲ್ದಾಣ ಇರಲಿದೆ. ಈ ಹಂತದಲ್ಲಿ ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್, ನಾಗಸಂದ್ರ–ಬಿಐಇಸಿ, ಪುಟ್ಟೇನಹಳ್ಳಿ–ಅಂಜನಾಪುರ, ಗೊಟ್ಟಿಗೆರೆ–ಐಐಎಂಬಿ–ನಾಗವಾರ ಮಾರ್ಗ ನಿರ್ಮಾಣವಾಗಲಿದೆ.

ಎರಡನೇ ಹಂತ 2021ಕ್ಕೆ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. 2022ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧಾನಸಭಾ ಅಧಿವೇಶನದಲ್ಲಿ ತಿಳಿಸಿದ್ದರು.

ನವೀನ ಹೂಡಿಕೆ ಮಾದರಿ: ಎರಡನೇ ಹಂತದ ಯೋಜನೆಗೆ ನವೀನ ಹೂಡಿಕೆ (ಇನೊವೇಟಿವ್‌ ಫೈನಾನ್ಸಿಂಗ್‌) ಮಾದರಿಯನ್ವಯ ಹಣಕಾಸು ಹೊಂದಿಸಲು ನಿಗಮ ಮುಂದಾಗಿದೆ.

ಕಾಡುಬೀಸನಹಳ್ಳಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ₹100 ಕೋಟಿ ನೀಡುವ ಸಂಬಂಧ ಎಂಬೆಸಿ ಟೆಕ್‌ ವಿಲೇಜ್‌ ನಿಗಮದ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಹೊರವರ್ತುಲ ರಸ್ತೆಯಲ್ಲಿ ನಿಲ್ದಾಣಗಳ ನಿರ್ಮಾಣಕ್ಕೆ ಪ್ರೆಸ್ಟೀಜ್‌ ಸಮೂಹ ಹಾಗೂ ಇಂಟೆಲ್‌ ಜತೆಗೆ ಒಪ್ಪಂದ ಮಾಡಿಕೊಡಲು ನಿಗಮ ಯೋಜಿಸಿದೆ. ಹೆಬ್ಬಗೋಡಿ ನಿಲ್ದಾಣ ನಿರ್ಮಾಣಕ್ಕೆ ನೆರವು ನೀಡಲು ಬಯೋಕಾನ್‌ ಆಸಕ್ತಿ ತೋರಿದೆ.

*

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !