ಶುಕ್ರವಾರ, ಆಗಸ್ಟ್ 19, 2022
22 °C

ಸಂವಿಧಾನದ ಅವಧಿ ಮುಗಿದಿದೆ ಎಂಬ ಚರ್ಚಾ ಸ್ಪರ್ಧೆ: ಶಾಲೆ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘72 ವರ್ಷಗಳ ಭಾರತ ಸಂವಿಧಾನದ ಅವಧಿ ಮುಗಿದಿದೆ ಎಂಬ ವಿಷಯದಡಿ ಶಾಲೆಯಲ್ಲಿ ಚರ್ಚಾಸ್ಪರ್ಧೆ ಆಯೋಜಿಸಿ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ’ ಎಂದು ಆರೋಪಿಸಿ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಂವಿಧಾನ ಸಂರಕ್ಷಣಾ ಏಕತಾ ಸಮಿತಿ ದೂರು ನೀಡಿದೆ.

‘ಮಾಗಡಿ ರಸ್ತೆಯ ತಾವರೆಕೆರೆಯಲ್ಲಿನ ವಿಇಎಸ್ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.26ರಂದು ಇಂಗ್ಲಿಷ್ ಭಾಷೆಯಲ್ಲಿ ಚರ್ಚಾ ಸ್ಪರ್ಧೆ ಆಯೋಜಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಿಕ್ಷಕ ರೋಹಿತ್ ಈ ಸ್ಪರ್ಧೆ ಆಯೋಜಿಸಿದ್ದು, ಅದಕ್ಕೆ ಮುಖ್ಯ ಶಿಕ್ಷಕರೂ ಸಮ್ಮತಿ ಸೂಚಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಚರ್ಚಾ ವಿಷಯವು ಭಾರತದ ಸಂವಿಧಾನವನ್ನು ಅವಮಾನಿಸುವಂತಿದೆ. ಅಲ್ಲದೇ, ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ‌ಅಪನಂಬಿಕೆ ಮತ್ತು ದ್ವೇಷ ಭಾವನೆ ಮೂಡಿಸುವ ದುರುದ್ದೇಶದಿಂದ ಕೂಡಿದೆ. ಸಂವಿಧಾನವನ್ನು ಅವಮಾನಿಸುವುದು ದೇಶವನ್ನು ಅವಮಾನಿಸಿದಂತೆ. ದೇಶದ್ರೋಹದ ಕೆಲಸ ಮಾಡಿರುವ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು.  ಸಂವಿಧಾನ ವಿರೋಧಿ ಶಾಲೆ ಎಂದು ಘೋಷಿಸಿ  ಶಾಲೆಯ ಪರವಾನಗಿ ರದ್ದುಗೊಳಿಸಬೇಕು. ಶಿಕ್ಷಕ ಮತ್ತು ಮುಖ್ಯ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಬೇಕು’ ಸಮಿತಿ ಒತ್ತಾಯಿಸಿದೆ.

‘ಸಂವಿಧಾನದ ಬಗ್ಗೆ ತಪ್ಪು ತಿಳಿವಳಿಕೆ ಮಾಡಿಸುವ ಪ್ರಯತ್ನಗಳನ್ನು ತಡೆಯಲು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಸೂಕ್ತ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹೊರಡಿಸಬೇಕು. ದೇಶದ್ರೋಹದ ಕೆಲಸ ಮಾಡಿರುವ ವಿಇಎಸ್‌ ಶಾಲೆಯ ವಿರುದ್ಧ ಪೊಲೀಸರಿಗೂ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಸಮಿತಿ ಸಂಚಾಲಕ ಎನ್.ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿ ಕೇಳಿದ ಡಿಡಿಪಿಐ

‘ವಿಇಎಸ್ ಶಾಲೆಯ ಮೇಲಿನ ಆರೋಪದ ಕುರಿತು ವಿವರಣೆ ಕೇಳಿ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ವರದಿಯನ್ನೂ ಕೇಳಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಉಪನಿರ್ದೇಶಕ ಬೈಲಾಂಜನೇಯ ತಿಳಿಸಿದರು.

‘ಸಂವಿಧಾನಕ್ಕೆ ಅಪಚಾರ ಮಾಡುವ ರೀತಿಯ ಕಾರ್ಯಕ್ರಮ ಆಯೋಜಿಸಿಲ್ಲ. ತಪ್ಪುಗಳಾಗಿದ್ದರೆ ಕ್ಷಮೆ ಕೇಳುತ್ತೇವೆ. ಕಾರ್ಯಕ್ರಮ ನಡೆಸುವುದಿಲ್ಲ ಎಂದು ಮುಖ್ಯ ಶಿಕ್ಷಕರು ವಾಟ್ಸ್‌ಆ್ಯಪ್‌ನಲ್ಲೇ ಪತ್ರ ಕಳುಹಿಸಿದ್ದಾರೆ’ ಎಂದು ಹೇಳಿದರು.

‘ಆದರೂ, ಈ ರೀತಿಯ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.