ಶನಿವಾರ, ಜುಲೈ 2, 2022
26 °C

ನಕಲಿ ದಾಖಲೆ ನೀಡಿ ₹ 3 ಕೋಟಿ ಕ್ಲೇಮ್: ವಿಮಾ ಕಂಪನಿಗೆ ಪಂಗನಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಮೆ ಕಂಪನಿಯೊಂದಕ್ಕೆ ನಕಲಿ ದಾಖಲೆಗಳನ್ನು ಕೊಟ್ಟು ₹ 3 ಕೋಟಿ ಕ್ಲೇಮ್ ಮಾಡಿಕೊಂಡಿರುವ ಆರೋಪದಡಿ ಸುಪ್ರಿಯಾ ಲಕಾಕುಲ್ ಎಂಬುವರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪನಿ ವ್ಯವಸ್ಥಾಪಕ ಪಿ.ಬಿ. ಗಣಪತಿ ಅವರು ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿ, ವಂಚನೆ ಆರೋಪದಡಿ ಸುಪ್ರಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸುಪ್ರಿಯಾ ಅವರ ಪತಿ ಕೃಷ್ಣಪ್ರಸಾದ್, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2021ರ ಮಾರ್ಚ್‌ನಲ್ಲಿ ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ‘ಮಹಾರಕ್ಷಾ ಸುಪ್ರಿಂ’ ವಿಮೆ ಮಾಡಿಸಿದ್ದರು. ವರ್ಷದ ಕಂತು ₹ 51,777 ಪಾವತಿಸಿದ್ದರು. ಕೆಲ ತಿಂಗಳ ನಂತರ ಅನಾರೋಗ್ಯದಿಂದ ಮೃತಪಟ್ಟಿದ್ದರು’.

‘2021ರ ಜುಲೈ 19ರಂದು ವಿಮೆ ಕಂಪನಿ ಕಚೇರಿಗೆ ಬಂದಿದ್ದ ಸುಪ್ರಿಯಾ, ‘ಪತಿ ಕೃಷ್ಣಪ್ರಸಾದ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಮೆಗೆ ನನ್ನ ನಾಮನಿರ್ದೇಶನವಿದೆ. ವಿಮೆ ಕ್ಲೇಮ್ ಮಾಡಿಕೊಡಿ’ ಎಂದಿದ್ದರು. ಪೂರಕ ದಾಖಲೆಗಳನ್ನೂ ನೀಡಿದ್ದರು. ಆ ‍ಪ್ರಕಾ, ಡಿಸೆಂಬರ್ 16ರಂದು ₹ 3 ಕೋಟಿ ಹಣವನ್ನು ಕಂಪನಿಯಿಂದ ನೀಡಲಾಗಿತ್ತು.’

‘ಕೆಲದಿನದ ನಂತರ ಕಂಪನಿ ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರು, ‘ಕೃಷ್ಣಪ್ರಸಾದ್ ಅವರು ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾರೆ. ಅವರ ಪತ್ನಿ ನಕಲಿ ದಾಖಲೆ ಕೊಟ್ಟು, ಹಣ ‌ಕ್ಲೇಮ್ ಮಾಡಿಕೊಂಡಿದ್ದಾರೆ’ ಎಂದಿದ್ದರು. ಅದೇ ಮಾಹಿತಿ ಆಧರಿಸಿ ಕಂಪನಿ ಅಧಿಕಾರಿಗಳು, ತನಿಖೆ ನಡೆಸಿದಾಗಲೇ ಮಹಿಳೆ ಕೃತ್ಯ ಬಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು