ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day | ಹೆಣ್ಣುಮಕ್ಕಳಿಗೆ ‘ರಾಣಿ ಚನ್ನಮ್ಮ’ ಆತ್ಮರಕ್ಷಣೆ ಪಾಠ

ಮಹಿಳಾ ಪೊಲೀಸರಿಗೆ 3 ತಿಂಗಳ ವಿಶೇಷ ತರಬೇತಿ * ಶಾಲಾ–ಕಾಲೇಜುಗಳಲ್ಲಿ ವಿಶೇಷ ಕಾರ್ಯಾಗಾರ
Last Updated 7 ಮಾರ್ಚ್ 2023, 20:37 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು– ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆಂದು ರಚಿಸಲಾಗಿರುವ ಮಹಿಳಾ ಪೊಲೀಸರ ‘ರಾಣಿ ಚನ್ನಮ್ಮ ಪಡೆ’, ಆತ್ಮರಕ್ಷಣೆ ಹಾಗೂ ಕಾನೂನುಗಳ ಬಗ್ಗೆ ನಗರದ ಎಲ್ಲ ಹೆಣ್ಣುಮಕ್ಕಳಿಗೆ ಸದ್ಯದಲ್ಲೇ ವಿಶೇಷ ಪಾಠ ಮಾಡಲಿದೆ.

ಮಹಿಳೆಯರು ಅಪಾಯದಲ್ಲಿದ್ದ ಸಂದರ್ಭದಲ್ಲಿ ರಕ್ಷಣೆ ಒದಗಿಸುವ ಹಾಗೂ ದೌರ್ಜನ್ಯ ತಡೆಯುವ ಉದ್ದೇಶದಿಂದ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಠಾಣೆಯಲ್ಲಿ ಮೊದಲ ಬಾರಿಗೆ ರಾಣಿ ಚನ್ನಮ್ಮ ಪಡೆ ರಚಿಸಲಾಗಿತ್ತು. ನಂತರ, ಹಲವು ಠಾಣೆ ಹಾಗೂ ವಿಭಾಗಗಳಲ್ಲಿ ಪಡೆಯ ಕಾರ್ಯಾಚರಣೆ ವಿಸ್ತರಣೆಯಾಯಿತು.

ನಿಯಂತ್ರಣ ಕೊಠಡಿ ಹಾಗೂ ಸುರಕ್ಷಾ ಆ್ಯಪ್‌ ಮೂಲಕ ತುರ್ತು ಕರೆ ಮಾಡುವ ಮಹಿಳೆಯರಿಗೆ ಪಡೆಯ ಸಿಬ್ಬಂದಿ ರಕ್ಷಣೆ ನೀಡುತ್ತಿದ್ದರು. ಹೀಗಾಗಿ, ಪಡೆಯ ಕೆಲಸಕ್ಕೆ ಜನರಿಂದ ಉತ್ತಮ ಸ್ಪಂದನ ವ್ಯಕ್ತವಾಗಿತ್ತು.

‘ಸೇಫ್ ಸಿಟಿ’ ಯೋಜನೆ ಜಾರಿಗೊಳ್ಳುತ್ತಿದ್ದಂತೆ ಪಡೆಯ ಸದಸ್ಯೆಯರಿಗೆ ವಿಶೇಷ ಪುನರ್ ಮನನ ತರಬೇತಿ ನೀಡಲು ಹಾಗೂ ಅವರಿಂದ ನಗರದ ಎಲ್ಲ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಪಾಠ ಮಾಡಿಸಲು ತೀರ್ಮಾನಿಸಲಾಯಿತು.

ಇದರ ಭಾಗವಾಗಿ, ಎರಡೂವರೆ ತಿಂಗಳಿನಿಂದ ರಾಣಿ ಚನ್ನಮ್ಮ ಪಡೆಯ ಮಹಿಳಾ ಸಿಬ್ಬಂದಿಗೆ ವಿಶೇಷ ಪುನರ್ ಮನನ ತರಬೇತಿ ನೀಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದೆ.

‘ರಾಣಿ ಚನ್ನಮ್ಮ ಪಡೆಗೆ ಆಯ್ಕೆ ಮಾಡಲಾಗಿರುವ 60 ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಕೋರಮಂಗಲ ಹಾಗೂ ಯಲಹಂಕದಲ್ಲಿ ಪುನರ್ ತರಬೇತಿ ನೀಡಲಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ತರಬೇತಿ ಇದಾಗಿದೆ. ಮಾರ್ಷಲ್ ಆರ್ಟ್ಸ್ ಹಾಗೂ ಇತರೆ ಸ್ವಯಂ– ರಕ್ಷಣೆ ಕಲೆಗಳನ್ನು ಕಲಿಸಲಾಗುತ್ತಿದೆ. ಆತ್ಮರಕ್ಷಣೆಯ ತಂತ್ರಗಳು, ಕಾನೂನು ಅರಿವು ಹಾಗೂ ಇತರೆ ಮಾಹಿತಿಗಳ ಬಗ್ಗೆ ಪರಿಣತರು ಸುಸಜ್ಜಿತ ತರಬೇತಿ ನೀಡುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತರಬೇತಿ ಅಂತಿಮ ಹಂತದಲ್ಲಿದೆ. ಇದು ಮುಗಿದ ಬಳಿಕ, ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ರಾಣಿ ಚನ್ನಮ್ಮ ಪಡೆ ಚುರುಕಿನ ಕಾರ್ಯಾಚರಣೆ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಅಗತ್ಯವಿರುವ ಕಡೆಗಳಲ್ಲಿ ಕಾರ್ಯಾಗಾರ: ‘ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಈ ಪಡೆ ರಚಿಸಲಾಗಿದೆ. ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗೆ ಆತ್ಮರಕ್ಷಣೆ ಕಲಿಸುವುದು ಇದರ ಮುಖ್ಯ ಉದ್ದೇಶ. ಪ್ರತಿಯೊಂದು ಶಾಲೆ–ಕಾಲೇಜು, ಐಟಿ–ಬಿಟಿ ಕಂಪನಿಗಳು, ಕಾರ್ಖಾನೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಪಡೆಯ ಸದಸ್ಯೆಯರು ವಿಶೇಷ ಕಾರ್ಯಾಗಾರ ನಡೆಸಿಕೊಡಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿ
ಹೇಳಿದರು.

‘ಎದುರಾಳಿಯನ್ನು ಸಮರ್ಥವಾಗಿ ಎದುರಿಸುವ ಆತ್ಮರಕ್ಷಣೆ ತಂತ್ರಗಳು, ಮಹಿಳಾ ರಕ್ಷಣಾ ಕಾನೂನುಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ, ಡ್ರಗ್ಸ್ ವಿರುದ್ಧದ ಎನ್‌ಡಿಪಿಎಸ್ ಕಾಯ್ದೆ, ಸೈಬರ್ ಕ್ರೈಂ ವಿರುದ್ಧದ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಇತರೆ ವಿಷಯಗಳನ್ನು ಹೆಣ್ಣು ಮಕ್ಕಳಿಗೆ ಮಹಿಳಾ ಸಿಬ್ಬಂದಿ ತಿಳಿಸಲಿದ್ದಾರೆ. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

*
2021ರಲ್ಲಿ ರಾಣಿ ಚನ್ನಮ್ಮ ಪಡೆ ರಚಿಸಲಾಗಿತ್ತು.ಇವರಿಗೆ ಪುನರ್ ಮನನ ತರಬೇತಿ ನೀಡಲಾಗುತ್ತಿದೆ. ಇವರು ನಂತರದಲ್ಲಿ ಆತ್ಮರಕ್ಷಣೆಯ ಪಾಠ ಮಾಡಲಿದ್ದಾರೆ.
-ಸಿ.ಕೆ. ಬಾಬಾ, ಆಗ್ನೇಯ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT