ಮಂಗಳವಾರ, ಡಿಸೆಂಬರ್ 7, 2021
20 °C

ಐಆರ್‌ಎಸ್‌ಡಿಸಿ ಮುಚ್ಚಲು ರೈಲ್ವೆ ಸಚಿವಾಲಯ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ರೈಲ್ ಆರ್ಕೇಡ್‌’ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮವನ್ನೇ (ಐಆರ್‌ಎಸ್‌ಡಿಸಿ) ಮುಚ್ಚಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಇದರಿಂದಾಗಿ ಈ ರೈಲು ನಿಲ್ದಾಣ ಮತ್ತೆ ನೈರುತ್ಯ ರೈಲ್ವೆ ವ್ಯಾಪ್ತಿಗೆ ಬಂದಿದ್ದು, ನೈರುತ್ಯ ರೈಲ್ವೆ ಪ್ರಯಾಣಿಕರ ಪರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರೈಲ್ವೆ ಹೋರಾಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಶಿಫಾರಸಿನಂತೆ ರೈಲ್ವೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ರೈಲ್ವೆ ಮಂಡಳಿ ಸೋಮವಾರ ಆದೇಶ ಹೊರಡಿಸಿದೆ.

ಐಆರ್‌ಎಸ್‌ಡಿಸಿ ನಿರ್ವಹಿಸುತ್ತಿದ್ದ ಎಲ್ಲ ರೈಲು ನಿಲ್ದಾಣಗಳನ್ನು ಆಯಾ ರೈಲ್ವೆ ವಲಯಗಳಿಗೆ ಹಸ್ತಾಂತರಿಸಲು ಆದೇಶದಲ್ಲಿ ತಿಳಿಸಿದೆ. ಆ ನಿಗಮ ಆರಂಭಿಸಿದ್ದ ಯೋಜನೆಗಳ ಎಲ್ಲ ದಾಖಲೆ ಪತ್ರಗಳನ್ನೂ ಹಸ್ತಾಂತರಿಸುವಂತೆ ತಿಳಿಸಿದೆ.

ಕೆಎಸ್‌ಆರ್‌ ರೈಲು ನಿಲ್ದಾಣದ ಆವರಣದಲ್ಲಿ ‘ರೈಲ್ ಆರ್ಕೆಡ್’ ನಿರ್ಮಾಣಕ್ಕೆ ಐಎಸ್‌ಆರ್‌ಡಿಸಿ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ನಿಲ್ದಾಣದ ಹೊರ ಆವರಣದಲ್ಲಿ 15 ಸಾವಿರಕ್ಕೂ ಹೆಚ್ಚು ಚದರ ಅಡಿ ಜಾಗದಲ್ಲಿ ರೈಲ್ ಆರ್ಕೆಡ್ ನಿರ್ಮಿಸಲು ಉದ್ದೇಶಿಸಿತ್ತು. ಟೆಂಡರ್ ದಾಖಲೆಗಳ ಪ್ರಕಾರ 17 ಡೇರೆ ರೂಪದ ಮಳಿಗೆಗಳು (ರೆಸ್ಟೋರೆಂಟ್‌ಗಳು, ಕರಕುಶಲ ವಸ್ತುಗಳ ಮಳಿಗೆಗಳು, ಉಡುಗೊರೆ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಹಾಗೂ ವಿಶ್ರಾಂತಿ ಕೊಠಡಿಗಳು) ನಿರ್ಮಾಣವಾಗಲಿದ್ದವು.

ವಾಹನ ಮತ್ತು ಪ್ರಯಾಣಿಕರ ಸಂಚಾರಕ್ಕೆ ಈ ಆರ್ಕೇಡ್ ಅಡಚಣೆ ಉಂಟುಮಾಡುವ ಆತಂಕವನ್ನು ರೈಲ್ವೆ ಹೋರಾಟಗಾರರು ಮತ್ತು ಪ್ರಯಾಣಿಕರು ವ್ಯಕ್ತಪಡಿಸಿದ್ದರು. ವರಮಾನ ಹೆಚ್ಚಳಕ್ಕೆ ಹಲವು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸುವ ಆಲೋಚನೆಯನ್ನು ಐಎಸ್‌ಆರ್‌ಡಿಸಿ ಹೊಂದಿತ್ತು.

‘ರೈಲ್ವೆ ಸಚಿವಾಲಯದ ಈ ನಿರ್ಧಾರ ಸರಿಯಾಗಿದೆ. ನೈರುತ್ಯ ರೈಲ್ವೆ ಅಧಿಕಾರಿಗಳು ವಾಣಿಜ್ಯ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಳ್ಳದೆ ಪ್ರಯಾಣಿಕರ ಪರವಾದ ಆಲೋಚನೆಗಳನ್ನು ಮಾಡಲಿ’ ಎಂಬುದು ರೈಲ್ವೆ ಹೋರಾಟಗಾರರ ಅಭಿಪ್ರಾಯ.

‘ಪ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಳ, ಪಾರ್ಕಿಂಗ್ ಶುಲ್ಕ ಹೆಚ್ಚಳ ರೀತಿಯ ಹೊರೆಗಳನ್ನು ಕಡಿಮೆ ಆಗಲಿದೆ’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು