ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ ಒನ್‌ ಸ್ಟೀಲ್‌ ಕಂಪನಿ ಮೇಲೆ ಐ.ಟಿ ದಾಳಿ

₹ 4.6 ಕೋಟಿ ಲೆಕ್ಕವಿಲ್ಲದ ಹಣ ವಶ: ಭಾರಿ ಅಕ್ರಮ ವಹಿವಾಟು ಪತ್ತೆ
Last Updated 14 ಆಗಸ್ಟ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬಿಣದ ಸಲಾಕೆಗಳು ಹಾಗೂ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಎ ಒನ್‌ ಸ್ಟೀಲ್‌ ಇಂಡಿಯಾ ಪ್ರೈವೇಟ್‌ ಲಿ. ಹಾಗೂ ಎ ಒನ್‌ ಸ್ಟೀಲ್‌ ಅಂಡ್‌ ಅಲಾಯ್ಸ್‌ ಪ್ರೈವೇಟ್‌ ಲಿ. ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿ ಲೆಕ್ಕ ಕೊಡದ ₹ 4.7 ಕೋಟಿ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದೆ.

ಸುನಿಲ್‌ ಕುಮಾರ್‌ ಜಾಲನ್‌ ಹಾಗೂ ಸಂದೀಪ್‌ ಕುಮಾರ್‌ ಜಾಲನ್‌ ಅವರು ನಿರ್ದೇಶಕರಾಗಿರುವ ಈ ಕಂಪನಿಗಳ ಬೆಂಗಳೂರು, ಬಳ್ಳಾರಿ ಹಾಗೂ ಹಿಂದೂಪುರದ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಅಕ್ರಮವಾಗಿ ವಹಿವಾಟು ನಡೆಸಿರುವುದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಂಪನಿಗಳು ಲೆಕ್ಕಕ್ಕೆ ತೋರಿಸದೆ ಹವಾಲಾ ಮಾರ್ಗದಲ್ಲಿ ವಹಿವಾಟು ನಡೆಸಿವೆ. ಒಂದಕ್ಕೆ ಒಂದು ಉಚಿತ ಯೋಜನೆ ನೆಪದಲ್ಲಿ ಒಂದೇ ಸರಕು ಮತ್ತು ಸೇವಾ ತೆರಿಗೆ ಇನ್‌ವಾಯ್ಸ್‌ ಬಳಸಿ ಎರಡೆರಡು ಲೋಡ್‌ ಉತ್ಪನ್ನವನ್ನು ಗ್ರಾಹಕರಿಗೆ ಕಳುಹಿಸಲಾಗಿದೆ. ಒಂದು ಲೋಡ್‌ ಬಿಲ್‌ ಹಣವನ್ನು ಚೆಕ್‌ನಲ್ಲಿ ಹಾಗೂ ಮತ್ತೊಂದು ಲೋಡ್‌ ಬಿಲ್‌ ಹಣವನ್ನು ನಗದಿನಲ್ಲಿ ಪಡೆಯಲಾಗಿದೆ.

ಹವಾಲಾ ಮಾರ್ಗದಲ್ಲಿ ವ್ಯವಹಾರ ನಡೆಸಿರುವುದಕ್ಕೆ ಡಿಜಿಟಲ್‌ ಸಾಕ್ಷ್ಯಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೊರೆತಿವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಸಾಗಿಸಿರುವ ಸಂಗತಿ ಈ ಕಂಪನಿಗಳ ಪ್ರಮುಖ ಉದ್ಯೋಗಿಗಳ ಮೊಬೈಲ್‌ ಸಂದೇಶಗಳಿಂದ ಬಯಲಾಗಿದೆ. ಅಲ್ಲದೆ, ಈ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ಬಿಡಿ ಕಾಗದಗಳು ಹಾಗೂ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಂಪನಿಗಳು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಇನ್‌ಪುಟ್‌ ಕ್ರೆಡಿಟ್‌ಗಳನ್ನು ದುರ್ಬಳಕೆ ಮಾಡಿಕೊಂಡಿವೆ. ಬಿಲ್‌ ಟ್ರೇಡರ್‌ಗಳಿಂದ ₹ 600 ಕೋಟಿಗೂ ಅಧಿಕ ಮೌಲ್ಯಕ್ಕೆ ಅಕಾಮಡೇಷನ್‌ ಬಿಲ್‌ ಪಡೆದಿದ್ದಾರೆ. ಈ ಬಿಲ್‌ಗಳನ್ನು ನಗದು ಕೊಟ್ಟು ಗುಜರಿ ಪದಾರ್ಥಗಳು ಹಾಗೂ ಲೆಕ್ಕವಿಲ್ಲದೆ ಉತ್ಪಾದಿಸಿದ ಉಕ್ಕಿನ ಸಲಾಕೆಗಳ ಬಾಬ್ತಿಗೆ ಬಳಸಲಾಗಿದೆ.

ಈ ಸಂಬಂಧ ಕಂಪನಿಯ ಲೆಕ್ಕಾಧಿಕಾರಿಗಳು, ಖರೀದಿ ವಿಭಾಗದ ಅಧಿಕಾರಿಗಳು, ಕ್ಯಾಷಿಯರ್‌ಗಳೂ ಸೇರಿದಂತೆ ಅನೇಕರ ಹೇಳಿಕೆಗಳನ್ನು ಪಡೆಯಲಾಗಿದೆ. ಈ ಕಂಪನಿಗಳಿಗೆ ಡಮ್ಮಿ ಬಿಲ್‌ಗಳನ್ನು ಕೊಡಲಾಗಿದೆ ಎಂದು ಅಕಾಮಡೇಷನ್‌ ಬಿಲ್‌ ಕಂಪನಿಗಳು ಒಪ್ಪಿಕೊಂಡಿವೆ.

ವಾಸ್ತವವಾಗಿ ಉತ್ಪನ್ನಗಳನ್ನು ವಿತರಣೆ ಮಾಡದಿದ್ದರೂ ಬಿಲ್‌ಗಳನ್ನು ಕೊಡಲಾಗಿದೆ ಎಂದೂ ಹೇಳಿರುವುದಾಗಿ ಐ.ಟಿ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT