ಮಂಗಳವಾರ, ನವೆಂಬರ್ 19, 2019
23 °C
ವಿದೇಶಿ ಬ್ಯಾಂಕ್‌ ಖಾತೆಗಳ ಪತ್ತೆ

ಅಘೋಷಿತ ಆಸ್ತಿ: ವಿವಿಧ ಕಂಪನಿಗಳ ಮೇಲೆ ಐ.ಟಿ ದಾಳಿ, ₹ 1.77 ಕೋಟಿ ಹಣ ವಶ

Published:
Updated:
Prajavani

ಬೆಂಗಳೂರು: ವೈದ್ಯಕೀಯ ಉಪಕರಣ ತಯಾರಿಕೆ ಹಾಗೂ ಮೂಲಸೌಲಭ್ಯ ಯೋಜನೆ ಅಭಿವೃದ್ಧಿ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ತೆರಿಗೆ ವಂಚನೆ, ರಹಸ್ಯ ಹೂಡಿಕೆ, ಅಘೋಷಿತ ವಿದೇಶಿ ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಆತ್ಯಾಧುನಿಕ ದಂತ ಆಸ್ಪತ್ರೆ ಮತ್ತು ಫ್ರಾಂಚೈಸಿಗಳನ್ನು ಹೊಂದಿ ರುವ ಕಾನ್‌ಫಿಡೆಂಟ್‌ ಡೆಂಟಲ್ ಈಕ್ವಿಪ್‌ಮೆಂಟ್‌ ಕಂಪನಿ, ಬೆಂಗಳೂರು ಬಯೋಜೀನ್‌ & ಪಿಜಿಬಿ ಎಂಜಿನಿಯರ್ಸ್‌ ಹಾಗೂ ಸ್ಕ್ಯಾರ್ನೆ ಟೆಕ್ನಾಲಜಿಸ್ ಕಂಪನಿಗಳ ಮೇಲೆ ದಾಳಿ ನಡೆದಿದೆ.

ಕಾನ್‌ಫಿಡೆಂಟ್‌ ಗ್ರೂಪ್‌ ಅತ್ಯಾಧುನಿಕ ದಂತ ಚಿಕಿತ್ಸಾ ಸಲಕರಣೆಗಳನ್ನು ತಯಾರಿಸಿ ಮಾರುತ್ತದೆ.  ಸ್ಕ್ಯಾರ್ನೆ ಟೆಕ್ನಾಲಜಿಸ್‌ ವೈದ್ಯಕೀಯ ಉಪಕರಣಗಳ ಮಾರಾಟ ಮತ್ತು ಸೇವೆ ಒದಗಿಸುತ್ತದೆ. ಪಿಜೆಬಿ ಎಂಜಿನಿಯರ್ಸ್‌ ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಕಂಪನಿ ಎಂದು ಐ.ಟಿ ಮೂಲಗಳು ತಿಳಿಸಿವೆ.

ದಾಳಿ ವೇಳೆ ಉದ್ಯೋಗಿಯೊಬ್ಬರ ಮನೆಯಿಂದ ₹ 1.77 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ. ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಕಂಪನಿ ಷೇರುಗಳ ನೈಜ ಮಾರುಕಟ್ಟೆ ಬೆಲೆಯನ್ನು ವ್ಯತ್ಯಯ ಮಾಡುತ್ತಿದ್ದ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದಲ್ಲದೆ, ಕಂಪನಿ ಮತ್ತು ಅವುಗಳ ಪ್ರವರ್ತಕರು ಹೊಂದಿರುವ ಮೂಲ ಬಂಡವಾಳವನ್ನು ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಡವಾಳ ತರುವ ಆಸ್ತಿಗಳ ಮೇಲಿನ ವೆಚ್ಚವನ್ನು ವರಮಾನ ವೆಚ್ಚ ಎಂದು ಬಿಂಬಿಸಿ, ನಷ್ಟ ತೋರಿಸಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ದಂತ ಸಲಕರಣೆಗಳ ತಯಾರಿಕಾ ಕಂಪನಿ ಮಾರಾಟ ಉತ್ತೇಜನ ಹಾಗೂ ಕಮಿಷನ್‌ ಬಾಬ್ತಿನಲ್ಲಿ ಅಧಿಕ ವೆಚ್ಚ ತೋರಿಸಿದೆ. ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ಕಾರ್ಮಿಕ ವೇತನದ ಬಾಬ್ತಿನಲ್ಲಿ ನಗದು ವೋಚರ್‌ಗಳನ್ನು ನೀಡಿರುವುದಾಗಿ ಹೇಳಿದೆ. ಕಂಪನಿ ಕಾರ್ಮಿಕರ ಹೇಳಿಕೆಗಳಿಂದ ಈ ವ್ಯವಹಾರಗಳು ಬಯಲಿಗೆ ಬಂದಿದೆ.

ಅಧಿಕ ವೆಚ್ಚಗಳನ್ನು ತೋರಿಸುವ ಮೂಲಕ ದಂತ ಚಿಕಿತ್ಸಾ ಸಲಕರಣೆಗಳ ಕಂಪನಿ  ₹ 33.48 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಹೊಂದಿರುವುದು ಪತ್ತೆ ಆಗಿದೆ. ವೈದ್ಯಕೀಯ ಸಲಕರಣೆಗಳ ತಯಾರಿಕಾ ಕಂಪನಿ ಪ್ರವರ್ತಕರು ₹ 71.39 ಕೋಟಿ ಮೌಲ್ಯದ ಷೇರು ಬಂಡವಾಳವನ್ನು ದೇಶಿ ಹಾಗೂ ವಿದೇಶಿ ಕಂಪನಿಗಳಿಗೆ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಲೆಕ್ಕಪತ್ರಗಳ ಪರಿಶೀಲನೆಯಿಂದ ಷೇರುಗಳ ಬೆಲೆಯಲ್ಲಿ ₹ 175 ಕೋಟಿ ವ್ಯತ್ಯಾಸ ಕಂಡುಬಂದಿದೆ. ಇದನ್ನು ಕಂಪನಿ ಮಾಲೀಕರು ಆಸ್ತಿ ಖರೀದಿಗೆ ಉಪಯೋಗಿಸಿದ್ದಾರೆ ಎಂದೂ ಐ.ಟಿ ಮೂಲಗಳು ವಿವರಿಸಿವೆ.

ಪ್ರತಿಕ್ರಿಯಿಸಿ (+)