ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ ಕಾರ್ಮಿಕರ ಮೇಲಿನ ದಬ್ಬಾಳಿಕೆ ನಿಲ್ಲಲಿ: ಮೇಧಾ ಪಾಟ್ಕರ್‌

Last Updated 14 ಜನವರಿ 2022, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕರು, ಸಂಘಟನೆ ಕಟ್ಟಿಕೊಂಡು ಆ ಮೂಲಕ ತಮ್ಮ ಕಾನೂನುಬದ್ಧ ಹಕ್ಕುಗಳಿಗಾಗಿ ಒತ್ತಾಯಿಸಿದ್ದಾರೆ. ಈ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಿರುವುದು ಸರಿಯಲ್ಲ.ಭಾರತದ ಮೊದಲ ಸಾರ್ವಜನಿಕ ವಲಯದ ಉದ್ದಿಮೆಯಾಗಿರುವ ಐಟಿಐ ಲಿಮಿಟೆಡ್‌ ತನ್ನ ನಿರ್ಧಾರ ಹಿಂಪಡೆಯಬೇಕು. 80 ಕಾರ್ಮಿಕರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಆಗ್ರಹಿಸಿದರು.

ತಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿರುವ ಐಟಿಐ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಕಾರ್ಮಿಕರು ಸತತ 45 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

‘ಐಟಿಐಆಡಳಿತ ಮಂಡಳಿಯು ಕಾರ್ಮಿಕರ ಶ್ರಮವನ್ನು ಹೀರಿ, ಅವರ ಮೇಲೆ ದಬ್ಬಾಳಿಕೆ ನಡೆಸಿ ತನ್ನ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಸಂಘಟನೆ ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು. 1926ರ ಟ್ರೇಡ್‌ ಯೂನಿಯನ್‌ ಕಾಯ್ದೆಯಲ್ಲೇ ಇದನ್ನು ಖಚಿತಪಡಿಸಲಾಗಿದೆ. ಸಂಘಟನೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ದೌರ್ಜನ್ಯ ನಡೆಸುತ್ತಿರುವುದು ಖಂಡನಾರ್ಹ’ ಎಂದರು.

‘ಐಟಿಐ ಆಡಳಿತ ಮಂಡಳಿಯು ಕೇಂದ್ರ ಕಾರ್ಮಿಕ ಇಲಾಖೆಯ ಸೂಚನೆ ಪಾಲಿಸಬೇಕು.ವಜಾಗೊಳಿಸಿರುವ ಎಲ್ಲಾ ಕಾರ್ಮಿಕರನ್ನೂ ಮರು ನೇಮಕ ಮಾಡಿಕೊಳ್ಳುವಂತೆ ಐಟಿಐ ಆಡಳಿತ ಮಂಡಳಿಗೆ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸಬೇಕು. ಇಲ್ಲದಿದ್ದರೆಆಲ್‌ ಇಂಡಿಯಾ ಸೆಂಟ್ರಲ್ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಎಐಸಿಸಿಟಿಯು) ಸಹಯೋಗದಲ್ಲಿ ದೇಶವ್ಯಾಪಿ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಕ್ಲಿಫ್ಟನ್ ಡಿ’ ರೊಜಾರಿಯೋ, ‘ಐಟಿಐ ಕಾರ್ಮಿಕರ ಹೋರಾಟ ಐತಿಹಾಸಿಕವಾದದ್ದು. ಗುತ್ತಿಗೆದಾರರಾಗಿ ಹಲವು ವರ್ಷ ಕೆಲಸ ಮಾಡಿರುವವರು ಸೇವೆ ಕಾಯಂಗೊಳಿಸುವಂತೆ ಈಗ ಹೋರಾಟ ಮಾಡುತ್ತಿದ್ದಾರೆ. ಆಡಳಿತ ವರ್ಗದವರು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದರು.

ಕೆಜಿಎಲ್‌ಯು ಐಟಿಐ ಘಟಕದ ಅಧ್ಯಕ್ಷ ಹೇಮಂತ್, ‘ಕಂಪನಿಗಾಗಿ ಮೂರು ದಶಕಗಳಿಂದ ಕರ್ತವ್ಯ ನಿರ್ವಹಿಸಿದವರನ್ನೇ ಕೆಲಸದಿಂದ ವಜಾಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ 45 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಆಡಳಿತ ಮಂಡಳಿ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಕಾರ್ಮಿಕರ ಬಗೆಗೆ ಕಂಪನಿ ತಳೆದಿರುವ ಧೋರಣೆಗೆ ಇದು ಸಾಕ್ಷಿ’ ಎಂದು ದೂರಿದರು.

ಗೃಹ ಕಾರ್ಮಿಕರ ಸಂಘದ ಅಧ್ಯಕ್ಷೆ ಸಿಸ್ಟರ್ ಸೀಲಿಯಾ ಮತ್ತು ಗಮನ ಮಹಿಳಾ ಸಮೂಹದ ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT