ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟ್ಟಮಡು ಜಂಕ್ಷನ್‌ ಮೇಲ್ಸೇತುವೆ: ಹೆಚ್ಚುವರಿ ಅನುದಾನಕ್ಕೆ ನಕಾರ

ಅಮೃತ ನಗರ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಲಹೆ
Last Updated 22 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಹೊರವರ್ತುಲ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವ ₹ 152 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ನಗರಾಭಿವೃದ್ಧಿ ಇಲಾಖೆ ನಿರಾಕರಿಸಿದೆ.

ಈ ಕಾಮಗಾರಿಗೆ ₹ 62 ಕೋಟಿಗಳಷ್ಟು ಹೆಚ್ಚುವರಿ ಅನುದಾನದ ಅಗತ್ಯ ಇರುವುದರಿಂದ, ಇದನ್ನು ಅಮೃತ ನಗರೋತ್ಥಾನ ಯೋಜನೆಯಡಿ ಸೇರ್ಪಡೆಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿಗೆ ಸಲಹೆ ನೀಡಿದ್ದಾರೆ.

ಹೊರವರ್ತುಲ ರಸ್ತೆಯಲ್ಲಿ ಇಟ್ಟಮಡು ಜಂಕ್ಷನ್‌– ಫುಡ್‌ವರ್ಲ್ಡ್‌ ಜಂಕ್ಷನ್‌ ಹಾಗೂ ಕಾಮಾಕ್ಯ ಜಂಕ್ಷನ್‌ಗಳನ್ನು ಒಳಗೊಂಡು 1.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಬಿಬಿಎಂಪಿ ರೂಪಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆ ಪಡೆದು ₹ 152 ಕೋಟಿ ಅಂದಾಜು ವೆಚ್ಚದ ಸಮಗ್ರ ಯೋಜನಾ ವರದಿಯನ್ನು ಪಾಲಿಕೆ ತಯಾರಿಸಿದೆ.

ಸಿಗ್ನಲ್‌ಮುಕ್ತ ಕಾರಿಡಾರ್‌ ನಿರ್ಮಾಣಕ್ಕಾಗಿ 2019ರ ಸೆ.16ರಂದು ₹ 90 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ಬಳಕೆ ಆಗದೆ ಉಳಿದ ಅನುದಾನವನ್ನು ಈ ಮೇಲ್ಸೇತುವೆಗೆ ಬಳಸಲು ಬಿಬಿಎಂಪಿ ನಿರ್ಧರಿಸಿತ್ತು. ಸಿಗ್ನಲ್‌ಮುಕ್ತ ಕಾರಿಡಾರ್‌ ಯೋಜನೆಯಡಿ ಫುಡ್‌ವರ್ಲ್ಡ್‌ ಜಂಕ್ಷನ್‌ ಮತ್ತು ಜೇಡಿಮರ ಜಂಕ್ಷನ್‌ಗಳಲ್ಲಿ ಕೆಳಸೇತುವೆ ನಿರ್ಮಿಸುವ ಪ್ರಸ್ತಾವನೆಗಳನ್ನು ಬಿಬಿಎಂಪಿ ರದ್ದುಪಡಿಸಿದೆ. ಇದಕ್ಕೆ ಬಳಸಲು ಉದ್ದೇಶಿಸಿದ್ದ ₹ 37.54 ಕೋಟಿ ಅನುದಾನ ಖರ್ಚಾಗದೇ ಉಳಿದಿದೆ. ಅನುಮೋದನೆಗೊಂಡ ಕೆಲ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಸರ್ಕಾರ 2019ರ ಸೆ.20ರಂದು ಪರಿಷ್ಕರಿಸಿತ್ತು. ಆಯ್ದ ಕೆಲವು ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿಗೆ ಮೀಸಲಿಟ್ಟಿದ್ದ ₹ 50 ಕೋಟಿ ಅನುದಾನದಲ್ಲಿ ₹ 24.46 ಕೋಟಿ ಅನುದಾನವೂ ಖರ್ಚಾಗದೇ ಉಳಿದಿದೆ.

ಈ ಎರಡು ಕಾಮಗಾರಿಗಳ ಉಳಿಕೆ ಅನುದಾನಗಳ ಜೊತೆ ಇತರ ಕೆಲವು ಕಾಮಗಾರಿಗಳ ಉಳಿಕೆ ಅನುದಾನ ಬಳಸಿ ಈ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಬೇಕು. 2022–23ನೇ ಸಾಲಿನಲ್ಲಿ ಈ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ₹ 152 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಕಾಮಗಾರಿಗೆ ಟೆಂಡರ್‌ ಆಹ್ವಾನಿಸುವುದಕ್ಕೆ ಅನುಮೋದನೆ ನೀಡಬೇಕು ಎಂದು ಕೋರಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. ಬಿಬಿಎಂಪಿಯ ಈ ಪ್ರಸ್ತಾವವನ್ನು ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆ, ಈ ಪ್ರಸ್ತಾಪಿತ ಯೋಜನೆಗೆ ₹ 62 ಕೋಟಿ ಹೆಚ್ಚುವರಿ ಅನುದಾನದ ಅಗತ್ಯವಿದೆ. ಹಾಗಾಗಿ ಈ ಅನುದಾನವನ್ನು ಅಮೃತ ನಗರೋತ್ಥಾನ ಯೋಜನೆಯಡಿ ಬಳಸಲು ಅನುವು ಮಾಡಿಕೊಡಬೇಕಾಗುತ್ತದೆ. ಹಾಗಾಗಿ ಅಮೃತ ನಗರೋತ್ಥಾನ ಯೋಜನೆ ಅಡಿ ಈ ಕಾಮಗಾರಿಯನ್ನು ಸೇರ್ಪಡೆಗೊಳಿಸಿ ಕ್ರಿಯಾಯೊಜನೆ ತಯಾರಿಸಿ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಆ ಪ್ರಸ್ತಾವ ಅನುಮೋದನೆಗೊಂಡ ಬಳಿಕವೇ ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಫೆ 16ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT