ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ

7
ಪತ್ನಿಗೆ 22 ಬಾರಿ ಚೂರಿ ಇರಿತ!

ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ

Published:
Updated:

ಬೆಂಗಳೂರು: ‘ಮನೆ ಬಿಟ್ಟು ಹೋಗುತ್ತೇನೆ’ ಎಂದಿದ್ದಕ್ಕೆ ದೇಹದ ವಿವಿಧೆಡೆ 22 ಬಾರಿ ಚೂರಿಯಿಂದ ಇರಿದು ಪತ್ನಿಯನ್ನು ಹತ್ಯೆಗೈದ ಸೆಕ್ಯುರಿಟಿ ಗಾರ್ಡ್‌ವೊಬ್ಬ, ನಂತರ ತಾನೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಜೆ.ಪಿ.ನಗರ ಒಂದನೇ ಹಂತದ ರಾಯಲ್‌ ಕೌಂಟಿ ಲೇಔಟ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಗೀತಾ (33) ಕೊಲೆಯಾದವರು. ಆರೋಪಿ ಕುಮಾರ್ (38) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಂಧ್ರಪ್ರದೇಶದ ಕುಮಾರ್, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗೀತಾ ಅವರನ್ನು ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ 9 ವರ್ಷದ ಗಂಡು ಮಗನಿದ್ದಾನೆ. ನಾಲ್ಕು ವರ್ಷಗಳಿಂದ ರಾಯಲ್‌ ಕೌಂಟಿ ಲೇಔಟ್‌ನ ‘ಸುಶೀಲಾ ರೆಸಿಡೆನ್ಸಿ’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕುಮಾರ್, ಪತ್ನಿ–ಮಗನ ಜತೆ ಅಲ್ಲೇ ಶೆಡ್‌ನಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಗ ಟ್ಯೂಷನ್‌ಗೆ ತೆರಳಿದಾಗ ದಂಪತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಆರೋಪಿ ಚಾಕುವಿನಿಂದ ಹೊಟ್ಟೆ, ತೊಡೆ, ಕುತ್ತಿಗೆ ಭಾಗಕ್ಕೆ ಮನಸೋಇಚ್ಛೆ ಇರಿದಿದ್ದಾನೆ. ಬಳಿಕ ತಾನೂ ಹೊಟ್ಟೆಗೆ ಚುಚ್ಚಿಕೊಂಡು ಆಚೆ ಬಂದಿದ್ದಾನೆ. ಆತನನ್ನು ಆ ಸ್ಥಿತಿಯಲ್ಲಿ ನೋಡಿ ಗಾಬರಿಗೊಂಡ ಕಟ್ಟಡದ ನಿವಾಸಿಗಳು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಕೋಣನಕುಂಟೆ ಪೊಲೀಸರು, ಆರೋಪಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಗೀತಾ ದೇಹಕ್ಕೆ 22 ಬಾರಿ ಇರಿಯಲಾಗಿದೆ’ ಎಂದು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಶೀಲ ಶಂಕಿಸಿ ಹತ್ಯೆ

‘ಒಂದು ತಿಂಗಳಿನಿಂದ ಪತ್ನಿ ಪರಿಚಿತ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರವಾಗಿ ನಿತ್ಯ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಆತನಿಂದ ದೂರ ಇರುವಂತೆ ಬೈದು ಬುದ್ಧಿ ಹೇಳಿದರೂ ಆಕೆ ಮಾತು ಕೇಳಲಿಲ್ಲ. ಸೋಮವಾರ ಸಂಜೆ ಜಗಳವಾದಾಗ, ‘ನಿಮ್ಮ ಸಹವಾಸ ಬೇಡ. ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗುತ್ತೇನೆ’ ಎಂದಳು. ಕೋಪದ ಭರದಲ್ಲಿ ಚಾಕುವಿನಿಂದ ಇರಿದುಬಿಟ್ಟೆ. ಆ ನಂತರ ಭಯ ಶುರುವಾಗಿ ನಾನೂ ಚುಚ್ಚಿಕೊಂಡೆ’ ಎಂದು ಕುಮಾರ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !