ಮಂಗಳವಾರ, ಡಿಸೆಂಬರ್ 7, 2021
20 °C
ಮನೆ ಸಾಗಿಸಲು ಕೃತ್ಯವೆಂದ ಮಹಿಳೆ

‘ಭಕ್ತೆ’ ಸೋಗಿನಲ್ಲಿ ದೇವರ ಬೆಳ್ಳಿ ಸಾಮಗ್ರಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿರುವ ಜೈನ ಬಸದಿಯೊಂದಕ್ಕೆ ಭಕ್ತೆ ಸೋಗಿನಲ್ಲಿ ಪ್ರವೇಶಿಸಿ ದೇವರ ಬೆಳ್ಳಿ ಸಾಮಗ್ರಿಗಳನ್ನು ಕದ್ದಿದ್ದ ಆರೋಪದಡಿ ಮಂಜು ಅಲಿಯಾಸ್ ಮುನ್ನಿಬಾನು (35) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

‘ಅ. 16ರಂದು ಬೆಳ್ಳಿ ಸಾಮಗ್ರಿಗಳು ಕಳ್ಳತನವಾಗಿದ್ದವು. ಈ ಬಗ್ಗೆ ಭಕ್ತರೊಬ್ಬರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಮುನ್ನಿಬಾನುಳನ್ನು ಬಂಧಿಸಲಾಗಿದೆ. 379 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಸದಿಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೂರುದಾರ ಹಾಗೂ ಅವರ ಕುಟುಂಬದವರು, ದೇವರ ಬೆಳ್ಳಿ ಸಾಮಗ್ರಿಗಳನ್ನು ಬಸದಿಗೆ ತಂದು ಪೂಜೆ ಮಾಡಿದ್ದರು. ಪೂಜೆ ಮುಗಿದ ನಂತರ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿ ಇರಿಸಿದ್ದರು. ಪ್ರಸಾದ ನೀಡಲೆಂದು ದೂರುದಾರ ಬಸದಿಯಿಂದ ಹೊರಗೆ ಹೋಗಿದ್ದರು. ಇದೇ ಸಂದರ್ಭದಲ್ಲೇ ಆರೋಪಿ, ಚೀಲವನ್ನು ಕದ್ದುಕೊಂಡು ಹೋಗಿದ್ದರು’ ಎಂದೂ ತಿಳಿಸಿದರು.

ಮನೆ ಸಾಗಿಸಲು ಕೃತ್ಯ: ‘ಜೈನ ಸಮುದಾಯಕ್ಕೆ ಸೇರಿದ್ದ ಮಂಜು, ಅನ್ಯಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ತನ್ನ ಹೆಸರು ಮುನ್ನಿಬಾಯಿ ಎಂಬುದಾಗಿ ಬದಲಾಯಿಸಿಕೊಂಡಿದ್ದಾಳೆ. ಈಕೆಯ ಪತಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮದ್ಯವ್ಯಸನಿಯಾಗಿದ್ದ ಪತಿ, ದುಡಿದ ಹಣವನ್ನೆಲ್ಲ ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದ. ಮನೆ ನಡೆಸುವುದು ಕಷ್ಟವಾಗಿತ್ತು. ಇದೇ ಕಾರಣಕ್ಕೆ ಆರೋಪಿ, ಕಳ್ಳತನ ಮಾಡಲಾರಂಭಿಸಿದ್ದಳು. ಈ ಬಗ್ಗೆ ಆಕೆ ಹೇಳಿಕೆ ನೀಡಿದ್ದಾಳೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು