ಬೆಂಗಳೂರು: ಶಾಂತಿನಗರದಲ್ಲಿರುವ ಜೈನ ಮಂದಿರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಪ್ರವೀಣ್ ಕುಮಾರ್ ಅಲಿಯಾಸ್ ಪಿಂಟು (29), ಜೋಶಿ ರಾಮ್ (24), ಗೋವಿಂದ್‌ಕುಮಾರ್ ಹಾಗೂ ರಾಜೇಂದ್ರಕುಮಾರ್ ಬಂಧಿತರು. ₹ 9.75 ಲಕ್ಷ ಮೌಲ್ಯದ 14 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾಜಸ್ಥಾನ ಮೂಲದ ಆರೋಪಿಗಳು, ಟೈಲ್ಸ್ ಜೋಡಣೆ ಕೆಲಸಕ್ಕೆಂದು ಜೈನ ಮಂದಿರಕ್ಕೆ ಬಂದಿದ್ದರು. ಮಂದಿರದಲ್ಲಿ ಹಲವು ದಿನ ಕೆಲಸ ಮಾಡಿದ್ದರು. ಇದೇ ಸಂದರ್ಭದಲ್ಲಿ, ಮಂದಿರದಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಗಮನಿಸಿದ್ದರು. ಸೆ. 9ರಂದು ರಾತ್ರಿ ಬೆಳ್ಳಿ ಸಾಮಗ್ರಿ ಕದ್ದುಕೊಂಡು ರಾಜಸ್ಥಾನಕ್ಕೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಕಳ್ಳತನದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ಇತರೆ ಸುಳಿವು ಆಧರಿಸಿ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಯಿತು’ ಎಂದು ಹೇಳಿದರು.
ಮಣ್ಣಿನಲ್ಲಿ ಹೂತಿಟ್ಟಿದ್ದರು: ‘ಕದ್ದೊಯ್ದಿದ್ದ ಬೆಳ್ಳಿ ಸಾಮಗ್ರಿಗಳನ್ನು ಆರೋಪಿಗಳು, ತಮ್ಮೂರಿನಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಅದನ್ನು ಹೊರಗೆ ತೆಗೆದು ಜಪ್ತಿ ಮಾಡಿ ನಗರಕ್ಕೆ ತರಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.