ಭಾನುವಾರ, ಏಪ್ರಿಲ್ 5, 2020
19 °C
ಜಲಮಂಡಳಿ: ಬಿ.ಇ ಪದವೀಧರರಿಗೆ ಸಹಾಯಕ ಹುದ್ದೆ ನಿರಾಕರಣೆ – ಅಭ್ಯರ್ಥಿಗಳ ಆಕ್ರೋಶ

ಬಿ.ಇ ಪದವಿ ವಿಜ್ಞಾನ ವಿಷಯವಲ್ಲ!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮಂಡಳಿಯ ಪ್ರಕಾರ ಎಂಜಿನಿಯರಿಂಗ್‌ ಪದವಿ (ಬಿ.ಇ) ‘ವಿಜ್ಞಾನ’ ವಿಷಯದಡಿ ಬರುವುದಿಲ್ಲ! ಈ ಕಾರಣ ಮುಂದಿಟ್ಟು, ಬಿಇ ಪದವೀಧರರನ್ನು ಸಹಾಯಕ ಹುದ್ದೆಗಳ ನೇಮಕಾತಿಗೆ ಜಲಮಂಡಳಿ ಪರಿಗಣಿಸಿಲ್ಲ. ಮಂಡಳಿಯ ಈ ನಡೆ, ಬಿ.ಇ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜಲಮಂಡಳಿಯು ವಿವಿಧ ವೃಂದಗಳ ಅಡಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ಈ ಪೈಕಿ, 20 ಸಹಾಯಕರ ಹುದ್ದೆಗೂ ಅರ್ಜಿ ಆಹ್ವಾನಿಸಿತ್ತು. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದೂ ಸೂಚಿಸಲಾಗಿತ್ತು. ಬಿ.ಇ ಪದವೀಧರರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದರು.

‘ಬಿ.ಇಯನ್ನು ವಿಜ್ಞಾನ ಪದವಿ ಎಂದು ಪರಿಗಣಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದೆ. ಪರೀಕ್ಷೆಗೆ ಪ್ರವೇಶ ಪತ್ರವೂ ಬಂದಿತ್ತು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದೇನೆ. ಆದರೆ, ಈಗ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದ ಕಾರಣ ಹುದ್ದೆಗೆ ಪರಿಗಣಿಸುವುದಿಲ್ಲ ಎಂದು ಜಲಮಂಡಳಿ ಹೇಳುತ್ತಿದೆ’ ಎಂದು ಬಿ.ಇ ಪದವೀಧರರಾಗಿರುವ ಅಭ್ಯರ್ಥಿಯೊಬ್ಬರು ದೂರಿದರು. 

‘ಅರ್ಜಿ ಪರಿಶೀಲನೆ ವೇಳೆಯಲ್ಲಿಯೇ ಈ ಕಾರಣ ನೀಡಿ ತಿರಸ್ಕರಿಸಬೇಕಿತ್ತು. ಪರೀಕ್ಷೆ ಬರೆಸಿ, ದಾಖಲೆ ಪರಿಶೀಲನೆ ಮಾಡಿದ ನಂತರ ತಿರಸ್ಕರಿಸಿರುವುದು ಸರಿಯಲ್ಲ’ ಎಂದು ಅವರು ಹೇಳಿದರು. 

‘ಬಿ.ಇಯನ್ನು ವಿಜ್ಞಾನ ನಿಕಾಯದಡಿಯ ಒಂದು ಪದವಿ ಎಂಬುದಾಗಿ ಪರಿಗಣಿಸಬೇಕು ಎಂದು ಇಂಥದ್ದೇ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ ಆದೇಶ ಮಾಡಿದೆ. ಈ ವಿಷಯವನ್ನು ಗಮನಕ್ಕೆ ತಂದರೂ ಜಲಮಂಡಳಿಯ ಅಧಿಕಾರಿಗಳು ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು. 

‘ಈ ಬಗ್ಗೆ ಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರನ್ನೂ ನಾವು ಸಂಪರ್ಕಿಸಿದೆವು. ವೃಂದ ಮತ್ತು ನೇಮಕಾತಿ ನಿಯಮದನ್ವಯ ನಾವು ಇಡೀ ಪ್ರಕ್ರಿಯೆ ನಡೆಸುತ್ತಿದ್ದೇವೆ. ನೀವು ಬೇಕಾದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದರು’ ಎಂಬುದಾಗಿ ಬಿ.ಇ ಪದವೀಧರರಾಗಿರುವ ಮತ್ತೊಬ್ಬ ಅಭ್ಯರ್ಥಿ ಹೇಳಿದರು.

ತಾತ್ಕಾಲಿಕ ಆಯ್ಕೆಪಟ್ಟಿಗೆ ತಡೆ: ಸಹಾಯಕ ಹುದ್ದೆಗೆ ಸೇರಿದಂತೆ ವಿವಿಧ ಹುದ್ದೆಗಳ ಆಯ್ಕೆಗೆ 1:3ರ ಅನುಪಾತದಲ್ಲಿ ಈಗಾಗಲೇ ನಡೆಸಲಾಗಿರುವ ಮೂಲ ದಾಖಲಾತಿ ಪರಿಶೀಲನೆಗಳಲ್ಲಿ ಅರ್ಹ ಅಭ್ಯರ್ಥಿಗಳಳು ಲಭ್ಯವಾಗದ ಕಾರಣ, ಈ ವೃಂದಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಜಲಮಂಡಳಿಯು ಫೆ.26ರ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದಲ್ಲಿ ನಂತರದ ಮೆರಿಟ್‌ನಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ
ನಡೆಸಿದ ತರುವಾಯ ಮತ್ತೊಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ. 

‘ನಂತರದ ಮೆರಿಟ್‌ನಲ್ಲಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳುವ ಮೂಲಕ ಬಿ.ಇ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಆಯ್ಕೆ ಪ್ರಕ್ರಿಯೆ ಮೂಲಕ ಹೊರಗಿಡುವ ಯತ್ನವನ್ನು ಜಲಮಂಡಳಿ ಮಾಡುತ್ತಿದೆ’ ಎಂದು ಅಭ್ಯರ್ಥಿ ದೂರಿದರು.

‘ನಿಯಮದ ಪ್ರಕಾರ ನೇಮಕ’

‘ವಿವಿಧ ಹುದ್ದೆಗಳ ನೇಮಕಾತಿಗೆ 2018ರ ಅಧಿಸೂಚನೆ ಹೊರಡಿಸಲಾಗಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರನ್ನು ಮಾತ್ರ ಸಹಾಯಕ ಹುದ್ದೆಗೆ ಪರಿಗಣಿಸಬೇಕು. ಅದರಂತೆಯೇ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದೇವೆ. ಈ ಹಂತದಲ್ಲಿ ನಿಯಮ ಮಾರ್ಪಡಿಸಲು ಸಾಧ್ಯವಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)