ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಿಸುವ ‘ಜಲನಿಧಿ’

ಬಜೆಟ್‌ನಲ್ಲಿ ಘೋಷಿಸುವಂತೆ ಜಲಾನಯನ ಇಲಾಖೆ ಪ್ರಸ್ತಾವ
Last Updated 4 ಫೆಬ್ರುವರಿ 2023, 18:53 IST
ಅಕ್ಷರ ಗಾತ್ರ

ಬೆಂಗಳೂರು: ಬರಪೀಡಿತ ಪ್ರದೇಶದಲ್ಲಿ ಮಳೆ ನೀರು ಸಂಗ್ರಹದ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶದ ‘ಜಲನಿಧಿ’ ಯೋಜನೆ ಜಾರಿಗೊಳಿಸಲು ಜಲಾನಯನ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

ಇದೇ ತಿಂಗಳು ಮಂಡಿಸಲಿರುವ ಬಜೆಟ್‌ನಲ್ಲಿ ‘ಜಲನಿಧಿ’ ಯೋಜನೆ ಯನ್ನು ಘೋಷಿಸುವಂತೆಯೂ ಇಲಾಖೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.

ಈ ಯೋಜನೆಯಡಿ ರಾಜ್ಯದ ಬರಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ 100 ತಾಲ್ಲೂಕುಗಳ ಮೂರು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸಬಹುದು. ಯೋಜನೆಯಡಿ ಸಣ್ಣ ಕೆರೆಗಳು, ಆಳವಿಲ್ಲದ ಸಣ್ಣ ಬಾವಿಗಳು, ಕಲ್ಯಾಣಿಗಳನ್ನು ನಿರ್ಮಿಸಬಹುದು. ಇದರಿಂದ ನೀರಿನ ಸುಸ್ಥಿರತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ಇಲಾಖೆ ಪ್ರತಿಪಾದಿಸಿದೆ.

ಕರ್ನಾಟಕದ ಐದನೇ ಮೂರು ಭಾಗ ಬರಪೀಡಿತವಾಗಿದೆ. ಕಳೆದ ಎರಡು ದಶಕಗಳಲ್ಲಿ 15 ವರ್ಷ ಬರ ಕಾಡಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಅಂತರ್ಜಲ ಕುಸಿದು ಹೋಗಿದೆ. ಆದರೆ ಈ ಪ್ರದೇಶಗಳಲ್ಲಿ ನೀರಿನ ಬೇಡಿಕೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ‘ಜಲನಿಧಿ ಯೋಜನೆಯ ಮೂಲಕ ಅಂತರ್ಜಲ ಹೆಚ್ಚುವುದರ ಜತೆಗೆ ಬೇಸಿಗೆಯಲ್ಲೂ ನೀರು ಲಭ್ಯವಾಗುವಂತೆ ಮಾಡುವುದಾಗಿದೆ’ ಎಂದು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿಎಂಕೆಎಸ್‌ವೈ) 2.0 ಅಡಿ 57 ತಾಲ್ಲೂಕುಗಳಲ್ಲಿ ಮಳೆ ನೀರು ಸಂಗ್ರಹ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಬರ ತಡೆಗಾಗಿ ಜಲಾನಯನ ಅಭಿವೃದ್ಧಿ ಯೋಜನೆಯಡಿ 100 ತಾಲ್ಲೂಕುಗಳನ್ನು ಮತ್ತು ಕೃಷಿಯ ಸ್ಥಿತಿ ಸ್ಥಾಪಕತ್ವಕ್ಕಾಗಿ ಜಲಾನಯನ ಪುನರುಜ್ಜೀವಗೊಳಿಸಲು 20 ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಈ ಯೋಜನೆಗಳಡಿ ಬರಪೀಡಿತವಾದ ಎಲ್ಲ ಪ್ರದೇಶಗಳನ್ನು ಒಳಪಡಿಸಲು ಸಾಧ್ಯವಾಗಿಲ್ಲ. ಕ್ಲಸ್ಟರ್‌ ಹಂತದಲ್ಲಿ ಮಾತ್ರ ಜಾರಿ ಆಗಿದೆ. ರಾಜ್ಯ ಸರ್ಕಾರ ಪ್ರಾಯೋಜಿತ ಜಲನಿಧಿ ಯೋಜನೆಯಡಿ ಎಲ್ಲ ಕಡೆಗಳಲ್ಲೂ ಮಳೆ ನೀರು ಸಂಗ್ರಹ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT