ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಆಶಾಕಿರಣ ‘ಜಲೋದ್‌ಬಸ್ಟ್‌’

ಮ್ಯಾನ್‌ಹೋಲ್‌ ಸ್ವಚ್ಛತೆಗೆ ಸುಲಭ ಸಾಧನ, ಶೌಚಗುಂಡಿಗೆ ಇಳಿದು ಸಾವಿಗೀಡಾಗುವ ಪ್ರಕರಣಕ್ಕೆ ಕಡಿವಾಣ
Last Updated 1 ಮಾರ್ಚ್ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾನ್‌ಹೋಲ್‌ಗಳನ್ನು (ಮಲಗುಂಡಿ) ಸಂಪೂರ್ಣ ವಾಗಿ ಮತ್ತು ಸುಲಭವಾಗಿ ಸ್ವಚ್ಛ ಗೊಳಿಸುವ ‘ಜಲೋದ್‌ಬಸ್ಟ್‌’ ಎಂಬ ಯಂತ್ರವನ್ನು ರಾಕೇಶ್‌ ಕಸ್ಬಾ ಎಂಬುವರು ಅಭಿವೃದ್ಧಿ ಪಡಿಸಿದ್ದಾರೆ.

‘ಶೌಚಗುಂಡಿಯಲ್ಲಿ ಇಳಿದ ಪೌರ ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಈ ಸಂದರ್ಭದಲ್ಲಿ, ಈ ಯಂತ್ರ ಅವರ ಬದುಕಿನಲ್ಲಿ ಆಶಾಕಿರಣವಾಗಲಿದೆ’ ಎಂದು ಅವರು ಹೇಳುತ್ತಾರೆ.

ಸದ್ಯ, ದೊಡ್ಡ ಯಂತ್ರಗಳ ಸಹಾಯ ದಿಂದ ಶೌಚಗುಂಡಿ ಸ್ವಚ್ಛಗೊಳಿಸಲಾಗುತ್ತಿದೆಯಾದರೂ, ತಳದಲ್ಲಿ ಇರುವ ಕೆಸರು ತೆಗೆಯಲು ಪೌರಕಾರ್ಮಿಕರು ಗುಂಡಿಯಲ್ಲಿ ಇಳಿಯಲೇಬೇಕಾಗಿದೆ. ಆದರೆ, ಈ ಯಂತ್ರವು ಆ ಕಷ್ಟವನ್ನು ಬಗೆಹರಿಸಲಿದೆ.

ಹೇಗೆ ಕೆಲಸ ಮಾಡಲಿದೆ ‘ಜಲೋದ್‌ ಬಸ್ಟ್‌’?: ಈಗಾಗಲೇ ಚಾಲ್ತಿಯಲ್ಲಿರುವ ಮಲಸ್ವಚ್ಛತಾ ಯಂತ್ರಗಳಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಆದರೆ, ಇದರಲ್ಲಿ ಎರಡು ಪೈಪ್‌ಗಳನ್ನು ಅಳವಡಿಸಲಾಗಿದ್ದು, ಕೊಳಚೆಯನ್ನು ಹೀರಿಕೊಂಡು, ಮತ್ತೊಂದು ಪೈಪ್‌ ಮೂಲಕ ಹೊರ ಹಾಕಲಾಗುತ್ತದೆ. ಅಲ್ಲದೆ, ಗುಂಡಿಯ ಅಥವಾ ಟ್ರಕ್‌ನ ತಳಮಟ್ಟದಲ್ಲಿರುವ ಮಲವನ್ನು ಸ್ವಚ್ಛಗೊಳಿಸುವ ರೀತಿಯಲ್ಲಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ.

ಗಂಟೆಗೆ 800 ಲೀಟರ್‌ಗಳಷ್ಟು ಕೊಳಚೆ ನೀರನ್ನು ಇದು ಹೊರತೆಗೆಯುತ್ತದೆ. ಇದಲ್ಲದೆ, ಮತ್ತೊಂದು ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, 1 ಸಾವಿರ ಲೀಟರ್‌ ಟ್ಯಾಂಕ್‌ ಜೊತೆ ಅಳವಡಿಸಬಹುದಾದ ಇದು, ಗಂಟೆಗೆ 2 ಸಾವಿರ ಲೀಟರ್‌ ಕೊಳಚೆ ನೀರನ್ನು ಹೊರ ತೆಗೆಯುವ ಸಾಮರ್ಥ್ಯ ಹೊಂದಿರುತ್ತದೆ.

ಮತ್ತೊಂದು, 1 ಸಾವಿರ ಲೀಟರ್ ಟ್ಯಾಂಕ್‌ ಜೊತೆ ಬರುತ್ತದೆ. ಗಂಟೆಗೆ 2 ಸಾವಿರ ಲೀಟರ್‌ ಕೊಳಚೆಯನ್ನು ಸ್ವಚ್ಛಗೊಳಿಸುತ್ತದೆ. ಟ್ರಕ್‌ ಟ್ಯಾಂಕ್‌ನ ಕ್ಲೀನ್‌ ಮಾಡಿದರೆ ಸ್ವಯಂಚಾಲಿತವಾಗುತ್ತದೆ.

‘ಶೌಚಗುಂಡಿಗಳಲ್ಲಿ ಅಥವಾ ಇಂತಹ ಕೊಳಚೆ ಸಂಗ್ರಹಿಸುವ ಟ್ರಕ್‌ಗಳಲ್ಲಿ ತೀರಾ ತಳಮಟ್ಟದಲ್ಲಿರುವ ಕೆಸರನ್ನು ಈಗಿರುವ ಯಂತ್ರಗಳು ಸ್ವಚ್ಛಗೊಳಿಸುವುದಿಲ್ಲ. ಇದನ್ನು ತೆಗೆಯಲು ಪೌರಕಾರ್ಮಿಕರು ಗುಂಡಿ ಯೊಳಗೆ ಇಳಿಯಬೇಕಾಗಿದೆ. ಆದರೆ, ಈ ಯಂತ್ರದಲ್ಲಿ ಕೊಳಚೆ ಸಂಗ್ರಹಿಸುವ ಪೈಪ್‌ನ ತುದಿಯಲ್ಲಿ ಸುತ್ತಿಗೆ ಮಾದರಿಯ ಸಾಧನ ಅಳವಡಿಸಲಾಗಿದೆ. ತಳದಲ್ಲಿನ ಗಟ್ಟಿ ಕೆಸರನ್ನು ಒಡೆದು ಪುಡಿ ಮಾಡುತ್ತದೆ. ನೀರಿನ ಜೊತೆಗೆ ಈ ಕೆಸರು ಹೊರಬರುತ್ತದೆ. ಟ್ರಕ್‌ಗಳನ್ನು ಕೂಡ ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸಬಹುದು’ ಎಂದು ಜಲೋದ್‌ ಬಸ್ತ್‌ ಕಂಪನಿಯ ಉತ್ಪನ್ನ ವಿಭಾಗದ ಮುಖ್ಯಸ್ಥ ಎಸ್.ವಿ. ಗುಣರಾಮನ್‌ ಹೇಳುತ್ತಾರೆ.

‘ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ 20 ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ರಾಕೇಶ್‌ ಇದನ್ನು ಅಭಿವೃದ್ಧಿಪಡಿಸಿದ್ದು, ಸದ್ಯ ಒಂದು ಯಂತ್ರಕ್ಕೆ ₹60 ಸಾವಿರ ದರ ನಿಗದಿ ಪಡಿಸಲಾಗಿದೆ. ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಯಂತ್ರಗಳನ್ನು ಉತ್ಪಾದಿಸಿದರೆ ದರ ಕಡಿಮೆಯಾಗುತ್ತದೆ’ ಎಂದು ಅವರು ತಿಳಿಸಿದರು.

‘ಉದ್ಯಮವೂ ಆಗಬಹುದು’
‘ಮಲ ಸ್ವಚ್ಛಗೊಳಿಸುವ ಕಾರ್ಯವನ್ನು ಜಾತಿ ಆಧಾರದ ಮೇಲೆ ನೋಡಲಾಗು ತ್ತಿದೆ. ಆದರೆ, ಸುಲಭವಾಗಿ ಕೊಂಡೊಯ್ಯಬಹುದಾದ ಈ ಯಂತ್ರವನ್ನು ಯಾರು ಬೇಕಾದರೂ ಬಳಸಬಹುದು. ₹60 ಸಾವಿರಕ್ಕೆ ಕೊಂಡು, ಬಾಡಿಗೆಗೂ ನೀಡಬಹುದು. ಶೌಚಗುಂಡಿಯೊಳಗೆ ಇಳಿಯುವ ಪ್ರಮೇಯವೇ ಬರುವುದಿಲ್ಲವಾದ್ದರಿಂದ, ಘನತೆಯ ಬದುಕು ಪೌರಕಾರ್ಮಿಕರದಾಗುತ್ತದೆ. ಜಲಮಂಡಳಿ ಅಥವಾ ಬಿಬಿಎಂಪಿ ಸಹಕಾರ ನೀಡಿದರೆ ದೊಡ್ಡ ಪ್ರಮಾಣದಲ್ಲಿ ಈ ಯಂತ್ರವನ್ನು ಉತ್ಪಾದಿಸಲು ಸಿದ್ಧರಿದ್ದೇವೆ’ ಎಂದು ಗುಣರಾಮನ್‌ ತಿಳಿಸಿದರು.

**
ಈ ಯಂತ್ರದ ಮೂಲಕ ಸ್ವಯಂ ಚಾಲಿತವಾಗಿ ಶೌಚ ಗುಂಡಿಯನ್ನು ಸ್ವಚ್ಛ ಮಾಡಬಹುದು. ಇದಕ್ಕಾಗಿ ಪೌರಕಾರ್ಮಿಕರು ಶೌಚ ಗುಂಡಿಗೆ ಇಳಿಯಬೇಕಿಲ್ಲ.
-ರಾಕೇಶ್ ಕಸ್ಪಾ, ಜಲೋದ್ ಬಸ್ಟ್ ಯಂತ್ರ ಅಭಿವೃದ್ಧಿಪಡಿಸಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT