ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಯ ಕನವರಿಕೆಯಲ್ಲಿ ಕಾಶ್ಮೀರಿ ಪಂಡಿತ ಸಮುದಾಯ

Last Updated 6 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರದ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಬೆಂಗಳೂರಿನ ಕಾಶ್ಮೀರಿ ಮುಸ್ಲಿಮರ ಭಾವನೆಗಳನ್ನು ತೆರೆದಿಟ್ಟಿದ್ದ ‘ಮೆಟ್ರೊ’ ಈಗ ಕಾಶ್ಮೀರಿ ಪಂಡಿತ ಸಮುದಾಯದ ಸಂತಸ, ಸಂಭ್ರಮವನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಗಳೂರಿನಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರು ಸಂಭ್ರಮಿಸುತ್ತಿದ್ದಾರೆ.

ಕಣಿವೆ ರಾಜ್ಯದಿಂದ ವಲಸೆ ಬಂದ 300 ಮುಸ್ಲಿಂ ಕುಟುಂಬ ಮತ್ತು 400ಕ್ಕೂ ಹೆಚ್ಚುಕಾಶ್ಮೀರಿ ಪಂಡಿತರ ಕುಟುಂಬಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿವೆ. ಒಂದೇ ರಾಜ್ಯದವರಾದರೂ ಎರಡೂ ಸಮುದಾಯಗಳದ್ದು ಭಿನ್ನ ಧ್ವನಿ ಮತ್ತು ವಿಭಿನ್ನ ನಿಲುವು.

1990ರಲ್ಲಿ ಕಾಶ್ಮೀರದಿಂದವಲಸೆ ಬಂದ ಪಂಡಿತರ ಕುಟುಂಬಗಳು 30 ವರ್ಷಗಳಿಂದ ವ್ಯಾಪಾರ, ಉದ್ದಿಮೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. 70 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರ ರದ್ದು ಮಾಡುತ್ತಲೇ ಹಲವಾರು ಪಂಡಿತರ ಕುಟುಂಬಗಳುಮತ್ತೆ ತವರು ರಾಜ್ಯಕ್ಕೆ ಮರಳಿ, ಅಲ್ಲಿಯೇ ಬೇರೂರುವ ಕನಸು ಕಾಣುತ್ತಿವೆ.

ಉಗ್ರರ ಉಪಟಳದಿಂದ ತತ್ತರಿಸಿದ್ದ, ನೆತ್ತರಿನಿಂದ ತೊಯ್ದಿದ್ದ ಕಣಿವೆಯಲ್ಲಿ ಬದಲಾವಣೆಯ ಹೊಸ ಗಾಳಿ ಬೀಸಲಿದೆ. ಶಾಂತಿ, ನೆಮ್ಮದಿ ನೆಲೆಸಲಿದೆ. ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಪಂಡಿತ ಸಮುದಾಯವಿದೆ. ಅವರ ಸಂತಸ, ಸಂಭ್ರಮಕ್ಕೆ ಪಾರವೇ ಇಲ್ಲ. ಅವರಿಗೆ ಈಗ ಆಕಾಶ ಮೂರೇ ಗೇಣು. ತವರು ರಾಜ್ಯಕ್ಕೆ ಮರಳುವ ಉತ್ಸಾಹದಲ್ಲಿರುವ ಪಂಡಿತ ಸಮುದಾಯ ವರ್ಷಗಳ ನಂತರ ತವರು ನೆಲವನ್ನು ಮೆಟ್ಟುವ, ಬಂಧುಗಳೊಂದಿಗೆ ಒಂದಾಗುವ ತವಕದಲ್ಲಿದೆ.

* * *

70 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರ ರದ್ದು ಮಾಡಲು ಎಂಟೆದೆ ಬೇಕಿತ್ತು. ಆ ದಿಸೆಯಲ್ಲಿ ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ ಎನ್ನುತ್ತದೆ ಬೆಂಗಳೂರಿನ ಕಾಶ್ಮೀರಿ ಹಿಂದು ಕಲ್ಚರಲ್‌ ವೆಲ್‌ಫೇರ್‌ ಟ್ರಸ್ಟ್‌.

ಇದೊಂದು ಐತಿಹಾಸಿಕ ನಿರ್ಧಾರ. ಸಂವಿಧಾನದ 370 ವಿಧಿ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳ ನಡುವೆ ಅಡ್ಡಗೋಡೆಯಾಗಿತ್ತು. ವಿಶೇಷಾಧಿಕಾರ ಕಣಿವೆ ರಾಜ್ಯದ ಜನರಿಗೆ ಶಾಪವಾಗಿ ಪರಿಣಮಿಸಿತ್ತೇ ವಿನಾ ವರವಾಗಿರಲಿಲ್ಲ ಎನ್ನುವುದು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಆರ್‌.ಕೆ. ಮಟ್ಟೂ ಅವರ ವಾದ. ಮಟ್ಟೂ ಏನು ಹೇಳುತ್ತಾರೆ ಎನ್ನುವುದನ್ನು ಅವರ ಮಾತಲ್ಲೇ ಕೇಳಿ.

ಭಯೋತ್ಪಾದನೆಗೆ ಅಂಕುಶ

ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿ ಸಿದ್ದ 71 ವರ್ಷಗಳಷ್ಟು ಹಳೆಯದಾದ ಗೋಡೆ ನೆಲಸಮವಾಗಿದೆ. ಇದು ರಾಜ್ಯದ ಅಭಿವೃದ್ಧಿಗೂ ಅಡ್ಡವಾಗಿತ್ತು. ಈಗ ಭಾರತ ಒಂದು ಸಂಪೂರ್ಣ ರಾಷ್ಟ್ರವಾಗಿ ಹೊರಹೊಮ್ಮಿದೆ. ಒಂದು ರಾಷ್ಟ್ರ, ಒಂದು ಕಾನೂನು ಪರಿಕಲ್ಪನೆ ನನಸಾಗಿದೆ.

ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ಮತ್ತು ಪ್ರತ್ಯೇಕ ಕಾನೂನಿನಿಂದ ಕೆಲವೇ ಕೆಲವು ರಾಜಕೀಯ ನಾಯಕರು ಮತ್ತು ಕುಟುಂಬಗಳಿಗೆ ಲಾಭವಾಗಿತ್ತೇ ಹೊರತು ಜನಸಾಮಾನ್ಯರಿಗಲ್ಲ. ಕೇಂದ್ರದ ಮಧ್ಯೆ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿಯೇ ಮುಸ್ಲಿಂ ರಾಜ್ಯವಾಗಿ ಪರಿವರ್ತನೆಗೊಂಡಿತ್ತು. ಈಗ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ.

ನಮ್ಮ ಮನೆ, ಮಠ ಕಸಿದುಕೊಂಡು ಹೊರದಬ್ಬಲಾಗಿತ್ತು.ನಮ್ಮ ಆಸ್ತಿ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರೋಹಿಂಗ್ಯಾಗಳ ಪಾಲಾಗಿವೆ.

ಕಾಶ್ಮೀರಿಗಳಾದ ನಮಗೂ 370ನೇ ಕಲಂ ವಿಶೇಷ ಸವಲತ್ತು ಪಡೆಯಬಹುದಾಗಿತ್ತು. ಆದರೆ, ಪಂಡಿತ ಸಮುದಾಯ ಇದಕ್ಕೆ ವಿರುದ್ಧವಾಗಿತ್ತು. ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ನಮಗೆ ಖುಷಿ ತಂದಿದೆ. ಎಲ್ಲರೂ ಸೇರಿ ಸೋಮವಾರ ಸಂಭ್ರಮಿಸಿದ್ದೇವೆ. ಕಣಿವೆಯಲ್ಲಿ ಶಾಂತಿ ನೆಲೆಸಲಿದೆ. ಕಾಶ್ಮೀರ ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ.

ನೆಹರೂ ಕಾರಣ

20 ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಹೊರತಾಗಿ ಬೇರೆ ಯಾವ ಸರ್ಕಾರವಿದ್ದರೂ ಇಂಥದೊಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಕಾಂಗ್ರೆಸ್‌ ಮತ್ತು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಕಾಶ್ಮೀರದ ರಾಜಕೀಯ ನಾಯಕ ಶೇಖ್‌ ಅಬ್ದುಲ್ಲಾ ಕಾರಣ ಎನ್ನುವುದು ಉದ್ಯಮಿ ಜಿ.ಎಲ್‌. ಸಪ್ರು ವಾದ. 1976ರಲ್ಲಿ ಬೆಂಗಳೂರಿಗೆ ವಲಸೆ ಬಂದಿರುವ ಅವರು ಸ್ವಂತ ಟ್ರಾನ್ಸ್‌ಪೋರ್ಟ್‌ ಸಂಸ್ಥೆ ಹೊಂದಿದ್ದಾರೆ.

‘ಕಾಂಗ್ರೆಸ್‌ನಿಂದ ಪಂಡಿತರಿಗೆ ಅನ್ಯಾಯವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಿಜವಾದ ನ್ಯಾಯ ದೊರೆತಿದೆ.ನಮಗೆ ಸಂತಸವಾಗಿದೆ. ಪಂಡಿತರಿಗೆ ತವರು ರಾಜ್ಯಕ್ಕೆ ಮರಳಲು ಮಾರ್ಗ ಸುಗಮವಾದಾಂತಾಗಿದೆ. ಬಿಟ್ಟು ಬಂದ ಮನೆ, ಆಸ್ತಿ ಏನಾಗಿವೆ ಗೊತ್ತಿಲ್ಲ. ಪಂಡಿತರ ಕುಟುಂಬಗಳು ಕ್ರಮೇಣ ತವರು ರಾಜ್ಯಕ್ಕೆ ಮರಳಲು ಮಾನಸಿಕವಾಗಿ ಸಜ್ಜಾಗಿವೆ’ ಎಂದರು.

ಬಹಳ ವರ್ಷಗಳ ಬೇಡಿಕೆ

ಅನೇಕ ದಿನಗಳ ಬೇಡಿಕೆ ಈಗ ಈಡೇರಿದೆ. ದೇಹ ಬೆಂಗಳೂರಿನಲ್ಲಿದ್ದರೂ ಮನಸ್ಸು ಕಾಶ್ಮೀರದಲ್ಲಿತ್ತು ಎಂದು ಮತ್ತೊಬ್ಬ ಕಾಶ್ಮೀರಿ ಪಂಡಿತ ಪ್ರಾಣೇಶ್‌ ನಗ್ರಿ ಸಂತಸ ಹಂಚಿಕೊಂಡರು. 1990ರಿಂದಲೇ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಮಾರಕವಾಗಿದ್ದ ದೊಡ್ಡ ತಪ್ಪೊಂದನ್ನು ಸರ್ಕಾರ ಈಗ ಸರಿಪಡಿಸಿದೆ ಎನ್ನುವುದು ಅವರ ನಿಲುವು.

‘ಕಾಶ್ಮೀರ ಈಗ ನಿಜವಾಗಿ ಭಾರತದ ಅವಿಭಾಜ್ಯ ಅಂಗ ಎಂಬ ಭಾವನೆ ಬರುತ್ತಿದೆ. ಕಾಶ್ಮೀರಿಗಳೂ ಇನ್ನುಮುಂದೆ ಎದೆಯುಬ್ಬಿಸಿ ನಾವೂ ಭಾರತೀಯರು ಎಂದು ಗಟ್ಟಿಯಾಗಿ ಹೇಳಬಹುದು. ತಕ್ಷಣ ತವರು ರಾಜ್ಯಕ್ಕೆ ಮರಳಲು ಸಾಧ್ಯವಿಲ್ಲದಿದ್ದರೂ, ನಿಧಾನವಾಗಿ ಮರಳಬಹುದು. ಅಲ್ಲಿಗೆ ಹೋಗಲು ಧೈರ್ಯ ಬಂದಿದೆ’ ಎಂದು ಅಹುಜಾ ಮನದಾಳವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT