ಭಾನುವಾರ, ಮೇ 9, 2021
19 °C
ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರ– ಪಾಲಿಕೆ ಸದಸ್ಯ ಡಿ.ಎನ್.ರಮೇಶ್ ಅಭಯ

ಸುಂಕೇನಹಳ್ಳಿ ವಾರ್ಡ್‌ನಲ್ಲಿ ‘ಜನಸ್ಪಂದನ’: ಸಂಚಾರವೇ ಕಿರಿಕಿರಿ, ಕಸ ಸುರಿಯದಿರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮನೆಯ ಗೇಟ್ ತೆಗೆಯಲು ಆಗದಂತೆ ನಿಲ್ಲುವ ಕಾರುಗಳು, ರಸ್ತೆಗೆ ಕಾಲಿಟ್ಟರೆ ಮೈಮೇಲೆ ನುಗ್ಗುವ ವಾಹನಗಳು, ನಡೆದು ಹೋಗೋಣ ಎಂದರೆ ಫುಟ್‌ಪಾತ್ ಮೇಲೆಯೂ ದ್ವಿಚಕ್ರ ವಾಹನಗಳ ಸಾಲು. ದಯವಿಟ್ಟು ಸಮಸ್ಯೆ ಸರಿಪಡಿಸಿ...’ ಸುಂಕೇನಹಳ್ಳಿ ವಾರ್ಡ್‌ ನಿವಾಸಿಗಳು ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳನ್ನು ಬೇಡಿಕೊಂಡಿದ್ದು ಹೀಗೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ‍ತ್ರಿಕೆಗಳ ಆಶ್ರಯದಲ್ಲಿ ಬಸವನಗುಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವು ಈ ವಾರ್ಡ್‌ನ ಜನರು ಪ್ರಮುಖ ಸಮಸ್ಯೆಗಳನ್ನು ತಮ್ಮ ಪ್ರತಿನಿಧಿ ಮತ್ತು ಅಧಿಕಾರಿಗಳ ಬಳಿ ಹೇಳಿಕೊಳ್ಳಲು ನೆರವಾಯಿತು.

‌‘ಕೆ.ಶ್ಯಾಮ ಅಯ್ಯಂಗಾರ್ ರಸ್ತೆ, ದತ್ತಾತ್ರೇಯ ರಸ್ತೆ, ಶಂಕರಪುರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಕಲ್ಯಾಣ ಮಂಟಪ, ದೇವಸ್ಥಾನ, ಮೆಟ್ರೊ ನಿಲ್ದಾಣ, ಹೋಟೆಲ್‌ಗಳಿಗೆ ಬರುವ ಜನರು ತಮ್ಮ ಕಾರುಗಳನ್ನು ನಮ್ಮ ಮನೆಗಳ ಮುಂದೆ ನಿಲ್ಲಿಸಿ ಹೋಗುತ್ತಾರೆ. ನಮ್ಮ ಕಾರು, ಬೈಕ್‌ಗಳನ್ನು ಹೊರಗೆ ತೆಗೆಯಲು ಆಗದೆ ನಡೆದುಕೊಂಡು ಅಥವಾ ಆಟೋರಿಕ್ಷಾ ಹತ್ತಿ ಹೋಗಬೇಕಾದ ಸ್ಥಿತಿ ಇದೆ. ಕೇಳಿದರೆ ರಸ್ತೆ ನಿಮ್ಮದೇ ಎಂದು ಪ್ರಶ್ನಿಸುತ್ತಾರೆ ಏನು ಮಾಡಬೇಕು’ ಎಂದು ಸುಬ್ರಹ್ಮಣ್ಯ, ಮಂಜುನಾಥ್ ಎಂಬುವರು ಅಳಲು ತೋಡಿಕೊಂಡರು.

‘ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ ಇದೆ, ಹಲವು ರಸ್ತೆಗಳಲ್ಲಿ ದ್ವಿಮುಖ ಸಂಚಾರ ಇದೆ. ಮಲ್ಲೇಶ್ವರದ ಮಾದರಿಯಲ್ಲಿ ಎಲ್ಲಾ ಮುಖ್ಯರಸ್ತೆಗಳನ್ನು ಏಕಮುಖ ಸಂಚಾರ ಮಾಡಬೇಕು’ ಎಂದು ಒತ್ತಾಯಿಸಿದರು.

ನಾಗರಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ‍ಪಾಲಿಕೆ ಸದಸ್ಯ ಡಿ.ಎನ್.ರಮೇಶ್, ‘ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ಸಂಚಾರ ದಟ್ಟಣೆ ಸಮಸ್ಯೆ ಇಡೀ ನಗರದಲ್ಲಿದೆ. ಪರಿಹರಿಸಲು ಸಂಚಾರ ಪೊಲೀಸರು ಶ್ರಮಿಸುತ್ತಿದ್ದಾರೆ. ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಕ್ಯಾಮರಾ ಹಾಕಿಸಲು ₹1 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ಹೇಳಿದರು.

‘ಮೊಬೈಲ್, ಸರಗಳ್ಳತನ’
‘ಬಸಪ್ಪ ಪಾರ್ಕ್ ಬಳಿ ಕಳ್ಳತನ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರನ್ನು ಗುರಿ ಮಾಡಿ ಸರ ಮತ್ತು ಮೊಬೈಲ್‌ ದೂರವಾಣಿ ಕಸಿದುಕೊಂಡು ಹೋಗುವುದು ಹೆಚ್ಚಾಗಿದೆ’ ಎಂದು ಶ್ರೀನಿವಾಸಮೂರ್ತಿ ಎಂಬುವರು ದೂರಿದರು.

‘ಪುಂಡರು ಗುಂಪು ಕಟ್ಟಿಕೊಂಡು ನಿಲ್ಲುತ್ತಾರೆ. ಬೀದಿ ದೀಪಗಳೂ ಇಲ್ಲದ ಕಾರಣ ಹಿರಿಯರು, ಮಹಿಳೆಯರು ತಿರುಗಾಡುವುದೇ ಕಷ್ಟವಾಗಿದೆ’ ಎಂದರು. ಇದಕ್ಕೆ ಹಲವರು ಧ್ವನಿಗೂಡಿಸಿ ‘ಕಳ್ಳರ ಕಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಬಿ.ಎಸ್. ಪಾಟೀಲ, ‘ಬಸಪ್ಪ ಪಾರ್ಕ್ ಬಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲು ಆಗುವುದಿಲ್ಲ. ನಾಗರಿಕರೂ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಸಾರ್ವಜನಿಕವಾಗಿ ಧೂಮಪಾನ ನಿಷೇಧಿಸಿದ್ದರೂ, ಸಾಯಿ ಕಾಂಡಿಮೆಂಟ್ಸ್ ಬಳಿ ಸಿಗರೇಟ್ ಅಡ್ಡವಾಗಿದೆ. ಜನರು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದರು. ‘ಆ ಅಂಗಡಿಗೆ ನೋಟಿಸ್ ನೀಡಲಾಗುವುದು’ ಎಂದು ಬಿ.ಎಸ್. ಪಾಟೀಲ ತಿಳಿಸಿದರು.

‘ಅಲ್ಲಲ್ಲಿ ಬೀಳುವ ಕಸ’
‘ವಾರಕ್ಕೊಮ್ಮೆ, ವಾರದಲ್ಲಿ ಎರಡು ದಿನ ಕಸ ಸಂಗ್ರಹಕ್ಕೆ ಬಿಬಿಎಂಪಿ ಸಿಬ್ಬಂದಿ ಬರುವ ಕಾರಣ ಅಲ್ಲಲ್ಲಿ ಕಸ ಬೀಳುತ್ತಿದೆ’ ಎಂದು ನಿವಾಸಿಗಳು ದೂರಿದರು.

‘ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕೊಟ್ಟರೆ ಪಾಲಿಕೆ ಸಿಬ್ಬಂದಿ ಹಸಿ ಕಸವನ್ನು ರಸ್ತೆ ಬದಿಯೇ ಸುರಿದು ಹೋಗುತ್ತಾರೆ’ ಎಂದು ಶ್ರೀನಿವಾಸ ಮೂರ್ತಿ ದೂರಿದರು.

‘ಎರಡು ಮೂರು ತಿಂಗಳಿಂದ ಸಮಸ್ಯೆ ಹೇಳಿದರೂ ಪ್ರಯೋಜನ ಆಗಿಲ್ಲ. ಬೀದಿ ದೀಪಗಳ ನಿರ್ವಹಣೆಯೂ ಇಲ್ಲ’ ಎಂದು ಎಸ್. ವೆಂಕಟೇಶ್‌ ಆರೋಪಿಸಿದರು.

‘ಕಸದ ಸಮಸ್ಯೆ ಎಲ್ಲಾ ವಾರ್ಡ್‌ಗಳಲ್ಲೂ ಇದೆ. ನಿರ್ವಹಣೆ ವ್ಯವಸ್ಥೆ ಬದಲಿಸಲು ಮಾತುಕತೆ ನಡೆಯುತ್ತಿದೆ. ಇದರ ನಡುವೆಯೂ ವಾರ್ಡ್‌ನಲ್ಲಿ ಸುತ್ತಾಡಿ 25 ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿದ್ದೇವೆ. ಅಲ್ಲಿ ಜನ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಿಸಿದ್ದೇವೆ’ ಎಂದು ಪಾಲಿಕೆ ಸದಸ್ಯ ಡಿ.ಎನ್. ರಮೇಶ್ ಹೇಳಿದರು.

‘ಆಟಕ್ಕೆ ಮೈದಾನ ಉಳಿಸಿ’
ನ್ಯಾಷನಲ್ ಕಾಲೇಜು ಮೈದಾನವನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬೇರೆ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ ಎಂದು ನಿವಾಸಿಗಳು ದೂರಿದರು.

ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ.ಮುರಳೀಧರ್ ಮತ್ತು ಮಂಜುನಾಥ್ ಈ ವಿಷಯ ಪ್ರಸ್ತಾಪಿಸಿ, ‘ಮೈದಾನದಲ್ಲಿ ತಿಂಗಳಿಗೆ ಐದು ದಿನ ಮಾತ್ರ ಬೇರೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕು. ಅದು ನ್ಯಾಯಾಲಯದ ಆದೇಶ’ ಎಂದರು.

‘ಬಿ.ಎಸ್. ಚಂದ್ರಶೇಖರ್ ಅವರಿಂದ ಆದಿಯಾಗಿ ಅನಿಲ್‌ಕುಂಬ್ಳೆ ತನಕ ಸಾಕಷ್ಟು ಮಂದಿ ಈ ಮೈದಾನದಲ್ಲಿ ವೃತ್ತಿ ಆರಂಭಿಸಿದ್ದಾರೆ. ಸಾವಿರಾರು ಜನ ದಿನವೂ ಅಭ್ಯಾಸ ಮಾಡುತ್ತಾರೆ. ಬೇರೆ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಬದಲು, ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ’ ಎಂದು ಮುರಳಿಧರ್ ಸಲಹೆ ನೀಡಿದರು.

‘ಕಾಮಗಾರಿಗೆ ಚಾಲನೆ’
‘ವಾರ್ಡ್‌ನಲ್ಲಿ ಕಾಮಗಾರಿಗಳು ಈಗ ಆರಂಭವಾಗಿವೆ. ಮುಂದಿನ ಆರು ತಿಂಗಳಲ್ಲಿ ಎಲ್ಲಾ ಕೆಲಸ ಮುಗಿಯಲಿವೆ. ನಮ್ಮ ವಾರ್ಡ್‌ನಲ್ಲಿ 8,500 ಮನೆಗಳಿವೆ. 6 ಸಾವಿರ ಜನರ ನಂಬರ್ ನನ್ನ ಮೊಬೈಲ್‌ ಫೋನ್‌ನಲ್ಲಿ ಸೇವ್ ಆಗಿದೆ. ಸಮಸ್ಯೆಗಳಿದ್ದರೆ ಜನ ಯಾವಾಗ ಬೇಕಿದ್ದರೂ ಕರೆ ಮಾಡಬಹುದು. ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಡಿ.ಎನ್‌.ರಮೇಶ್‌ ಭರವಸೆ ನೀಡಿದರು.

ರಸ್ತೆ ಗುಂಡಿಯಿಂದ ಒತ್ತುವರಿ ವರೆಗೆ...
ರಾಮಚಂದ್ರ ಮನೋಹರ್:
ಗೋವಿಂದಪ್ಪ ರಸ್ತೆ ಬಳಿ ಇರುವ ಗಲ್ಲಿಯಲ್ಲಿ ಸರ್ಕಾರಿ ಜಾಗವನ್ನು ಒಂದೂವರೆ ಅಡಿ ಒತ್ತುವರಿ ಮಾಡಿ ಕೆಲವರು ಕಟ್ಟಡ ಕಟ್ಟಿದ್ದು, ತೆರವುಗೊಳಿಸಿ.

ರಮೇಶ್‌, ಪಾಲಿಕೆ ಸದಸ್ಯ: ಸರ್ಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರೂ ತೆರವುಗೊಳಿಸಲಾಗುವುದು. ಅಧಿಕಾರಿಗಳ ಜತೆಗೆ ಭಾನುವಾರವೇ ಸ್ಥಳ ಪರಿಶೀಲನೆ ನಡೆಸುತ್ತೇನೆ.

**

ಶ್ರೀನಿವಾಸ್: ಕೆಂಪೇಗೌಡನಗರ ಮುಖ್ಯರಸ್ತೆ ಗುಂಡಿ ಬಿದ್ದಿದೆ. ಗುಂಡಿ ಮುಚ್ಚುವ ಕೆಲಸವನ್ನು ಸಮರ್ಪಕವಾಗಿ ಮಾಡಿಲ್ಲ. ಗಾಂಧಿ ಬಜಾರ್‌ನಲ್ಲೂ ಇದೇ ಸ್ಥಿತಿ ಇದೆ.

ಎಸ್.ಪ್ರದೀಪ್‌ಕುಮಾರ್, ಕಾರ್ಯಪಾಲಕ ಎಂಜಿನಿಯರ್: ಗುಂಡಿ ಮುಚ್ಚುವ ಕೆಲಸ ಇನ್ನೂ ನಡೆಯುತ್ತಿದೆ. ಡಿವಿಜಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಎಲ್ಲವೂ ಶೀಘ್ರವೇ ಸರಿಯಾಗಲಿದೆ.

**

ಶ್ರೀನಿವಾಸ್: ನೋ ಪಾರ್ಕಿಂಗ್ ಫಲಕ ಇಲ್ಲದ ಕಡೆಯೂ ವಾಹನಗಳನ್ನು ಪೊಲೀಸರು ಎತ್ತಿಕೊಂಡು ಹೋಗುತ್ತಾರೆ. ಎಲ್ಲೆಲ್ಲಿ ವಾಹನ ನಿಲ್ಲಿಸಬಾರದು ಎಂಬುದಕ್ಕೆ ಫಲಕ ಹಾಕಿಸಿ. ವಾಹನ ಟೋಯಿಂಗ್ ಮಾಡುವ ಮುನ್ನ ಮಾನವೀಯವಾಗಿ ವರ್ತಿಸಿ.

ವೆಂಕಟರಾಮ್, ಟ್ರಾಫಿಕ್ ಪೊಲೀಸ್: ರಾಜ್ಯಪತ್ರದಲ್ಲಿ ಘೋಷಣೆಯಾದ ಸ್ಥಳಗಳಲ್ಲಿ ಮಾತ್ರ ನೋಪಾರ್ಕಿಂಗ್ ಫಲಕ ಹಾಕಬಹುದು. ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲು ವಾಹನಗಳನ್ನು ತೆರವುಗೊಳಿಸುತ್ತೇವೆ. ಜನ ಸಹಕರಿಸಬೇಕು.

**

ರವಿಕುಮಾರ್: ಕೆಂಪಾಂಬುದಿ ಕೆರೆ ಒತ್ತುವರಿ ತೆರವುಗೊಳಿಸದೆ ಅಭಿವೃದ್ಧಿಗೊಳಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ.

ರಮೇಶ್‌: ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

**

ಸುಬ್ರಹ್ಮಣ್ಯ: ಎಲ್ಲಾ ರಸ್ತೆಯಲ್ಲೂ ದ್ವಿಮುಖ ಸಂಚಾರ ಇರುವ ಕಾರಣ ದಟ್ಟಣೆ ಹೆಚ್ಚಾಗಿದೆ. ಹಣ್ಣಿನ ಗಾಡಿಗಳು ನಿಲ್ಲುವುದರಿಂದಲೂ ಸಮಸ್ಯೆ ಆಗುತ್ತಿದೆ.

ರಮೇಶ್: ಸಂಚಾರ ದಟ್ಟಣೆ ವಿಷಯವನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಹಣ್ಣಿನ ಗಾಡಿಗಳನ್ನು ತೆಗೆಸುವ ಕೆಲಸವನ್ನು ಒಂದು ವಾರದಲ್ಲಿ ಮಾಡುತ್ತೇನೆ.

**

ಕಿರಣಾ ಶಾನಭಾಗ: ಕಸದ ಗಾಡಿ 3–4 ದಿನಗಳಿಗೊಮ್ಮೆ ಬರುತ್ತದೆ. ಅದು ಮನೆ ಹತ್ತಿರವೂ ಬರುವುದಿಲ್ಲ. ನಾಲ್ಕೈದು ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗಿ ಕಸ ಕೊಡಬೇಕಿದೆ.

ರಮೇಶ್‌: ರಸ್ತೆ ಕಿರಿದಾಗಿರುವ ಕಾರಣ ಸಮಸ್ಯೆ ಇದೆ. ಗಾಡಿ ಮನೆ ಹತ್ತಿರ ಬರದಿದ್ದರೆ ನನಗೆ ಕರೆ ಮಾಡಿ.

**

ಸಾವಿತ್ರಿ ರಾವ್: ದತ್ತಾತ್ರೇಯ ರಸ್ತೆಯಲ್ಲಿ ಮನೆಯಿಂದ ಹೊರಗೆ ಬರಲು ಆಗುವುದೇ ಇಲ್ಲ. ಕಲ್ಯಾಣ ಮಂಟಪಕ್ಕೆ ಹೋಗುವವರು ನಮ್ಮ ಮನೆ ಮುಂದೆ ವಾಹನ ನಿಲ್ಲಿಸುತ್ತಾರೆ. ಫುಟ್‌ಪಾತ್ ಮೇಲೆಯೂ ಸ್ಕೂಟರ್‌ಗಳು ಇರುತ್ತವೆ. ಪಾದಚಾರಿಗಳಿಗೆ ಜಾಗವೇ ಇಲ್ಲ.

ರಮೇಶ್: ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.

**

ಕೆ.ಶಾಮಲಾ: ನಮ್ಮ ಮನೆ ಮುಂದೆಯೇ ಕಸ ತಂದು ಸುರಿಯುತ್ತಾರೆ. ಇದರಿಂದ ದುರ್ವಾಸನೆ ಹೆಚ್ಚುತ್ತಿದೆ. ಇಲಿ ಹೆಗ್ಗಣಗಳು ಹೆಚ್ಚಾಗಿವೆ.

ರಮೇಶ್: ಸ್ಥಳ ಪರಿಶೀಲನೆ ನಡೆಸಿ ಕಸ ಸ್ವಚ್ಛಗೊಳಿಸಲಾಗುವುದು. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು.

**

ವಿಜೇತ್‌, ಹನುಮಂತನಗರ: ವಿಜಯಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ ಬಳಿ ರಸ್ತೆ ಮಧ್ಯದಲ್ಲಿ ವಿಭಜಕ ಇಲ್ಲದ ಕಾರಣ ಬಿಎಂಟಿಸಿ ಬಸ್ ಹಾಗೂ ಇತರ ವಾಹನಗಳು ಅಡ್ಡಾದಿಡ್ಡಿ ನುಗ್ಗಿ ಅಪಘಾತ ಉಂಟು ಮಾಡುತ್ತಿವೆ.

ರಮೇಶ್: ಸ್ಥಳ ಪರಿಶೀಲನೆ ನಡೆಸಿ ರಸ್ತೆ ವಿಭಜಕ ಹಾಕಿಸಲಾಗುವುದು.

** 

ಉಮಾಪ್ರಭು: ರಂಗರಾವ್ ರಸ್ತೆಯಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ವಯಸ್ಸಾದವರು ತಿರುಗಾಡಲು ಸಾಧ್ಯವಾಗುತ್ತಿಲ್ಲ.

ರಮೇಶ್: ಬೀದಿ ನಾಯಿಗಳ ಕಾಟ ಹೆಚ್ಚಾಗಿರುವ ಬಗ್ಗೆ ಪರಿಶೀಲಿಸಲಾಗುವುದು

**

ವನಜಾಕ್ಷಿ: ಡಿವಿಜಿ ರಸ್ತೆಯಲ್ಲಿ ತಳ್ಳುವ ಗಾಡಿಯವರು ಹೆಚ್ಚಾಗಿದ್ದು, ಅಂಗಡಿಗಳ ವ್ಯಾಪಾರಕ್ಕೆ ತೊಂದರೆಯಾಗಿದೆ.

ರಮೇಶ್: ಹೊರ ರಾಜ್ಯದಿಂದ ನೂರಕ್ಕೂ ಹೆಚ್ಚು ಜನರ ಗುಂಪು ಬಂದಿದೆ. ಅವರು ಈ ರೀತಿಯ ಅವಾಂತರ ಸೃಷ್ಟಿಸುತ್ತಿದ್ದಾರೆ. ಬೀದಿ ಬದಿ ಅಂಗಡಿಯವರೆಲ್ಲರೂ ಸಭೆ ಕರೆಯಿರಿ, ನಾನೂ ಬರುತ್ತೇನೆ. ಏನು ಮಾಡಬೇಕು ಎಂಬುದನ್ನು ಚರ್ಚಿಸೋಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು