‘ಜಯಂತಿಗಳು ಜಾತಿಗೆ ಮಾತ್ರ ಸೀಮಿತವಾಗಿವೆ’

6

‘ಜಯಂತಿಗಳು ಜಾತಿಗೆ ಮಾತ್ರ ಸೀಮಿತವಾಗಿವೆ’

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಸಾಧಕರ ಹೆಸರಿನಲ್ಲಿ ನಡೆಯುವ ಬಹುತೇಕ ಎಲ್ಲಾ ಜಯಂತಿಗಳು, ಜಾತಿಗೆ ಮಾತ್ರ ಸೀಮಿತವಾಗಿವೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಮಹಮ್ಮದಿಯರ ಕನ್ನಡ ವೇದಿಕೆ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ್‌ ಧರ್ಮಗಳೆರಡು ಮಿಲನವಾಗಬೇಕು. ವೇದಾಂತದ ಮಿದುಳು ಹಾಗೂ ಇಸ್ಲಾಮಿನ ದೇಹವೇ ನಮ್ಮ ಮುನ್ನಡೆಗೆ ಹಾದಿ ಎಂದು ವಿವೇಕಾನಂದರು ಹೇಳಿದ್ದಾರೆ. ಅವರ ಹೆಸರನ್ನು ಹೇಳುವವರು ಮೊದಲು ವಿವೇಕಾನಂದರನ್ನು ಓದಿಕೊಳ್ಳಲಿ’ ಎಂದು ತಾಕೀತು ಮಾಡಿದರು.

‘ದಯವೇ ಧರ್ಮದ ಮೂಲವಯ್ಯ ಎನ್ನುವುದು ಈಗ ಭಯವೇ ಧರ್ಮದ ಮೂಲ ಎನ್ನುವಂತಾಗಿದೆ. ದುರುಪಯೋಗವಾಗುತ್ತಿರುವ ದೇವರು, ಧರ್ಮದ ಹೆಸರಿನಲ್ಲಿಯೇ ಇರುವ ಸಕಾರಾತ್ಮಕ ಚಿಂತನೆಗಳನ್ನು ಬಳಸಿಕೊಂಡು ಈ ಜಾತಿ, ಕೋಮು ಜಗಳಗಳನ್ನು ತಡೆಯಬೇಕು’ ಎಂದರು.

‘ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಯಾವ ಪ್ರದೇಶಕ್ಕೆ ಹೋಗುತ್ತಾರೋ ಅಲ್ಲಿನ ಮಹನೀಯರನ್ನು ನೆನಪಿಸಿಕೊಳ್ಳುತ್ತಾರೆ. ಬಸವಣ್ಣ, ಕಬೀರ, ವಿವೇಕಾನಂದರು, ಶರಣರು, ಸೂಫಿ ಸಂತರು... ಹೀಗೆ ಎಲ್ಲರೂ ಅವರಿಗೆ ನೆನಪಾಗುತ್ತಾರೆ. ಅವರ ಮಾತಿಗೆ ಅರ್ಥವಿದೆಯೇ ಎನ್ನುವುದನ್ನು ನಾವು ಪ್ರಶ್ನಿಸಿಕೊಳ್ಳದಿದ್ದರೆ, ಈ ದೇಶ ಇನ್ನೂ ಹದಗೆಟ್ಟು ಹೋಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದೇಹವೇ ದೇಗುಲ’ ಎಂದು ಹೇಳಿದವರು ಬಸವಣ್ಣ. ಆದರೆ, ಈಗ ದೇವಸ್ಥಾನಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಜಗಳಗಳು ಜಾಸ್ತಿಯಾಗುತ್ತಿವೆ. ಮಂದಿರ, ಮಸೀದಿಗಳನ್ನು ಇಟ್ಟುಕೊಂಡು ಚರ್ಚೆಗಳನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಬಸವಣ್ಣನ ಹೆಸರು ಹೇಳುವವರು, ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು’ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂ ಸುತಾರ, ‘ಜಗತ್ತಿನ ಇತಿಹಾಸದಲ್ಲಿ ದೇಶಕ್ಕೆ ಕಾಲಕ್ಕೆ ತಕ್ಕಂತೆ ನಾನಾ ಮತಗಳು ಹುಟ್ಟಿಕೊಂಡಿವೆ. ಎಲ್ಲಾ ಮತಗಳು ಪಥಗಳೇ ವಿನಾ ಮತವೇ ಪರಮಾತ್ಮನಲ್ಲ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ಹೀಗೆ ನಾವು ಸಾಧನೆಯ ಮೂಲಕ ಪರತತ್ವದಲ್ಲಿ ಸಮರಸವಾಗುವುದೇ ನಿಜವಾದ ಭಾವೈಕ್ಯತೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !