ಶುಕ್ರವಾರ, ಡಿಸೆಂಬರ್ 13, 2019
26 °C
ಹೊಸ ಮಾರುಕಟ್ಟೆ ಜಾಗದ ಬಗ್ಗೆ ಗೊಂದಲ l ನಗರದ ಹೊರಭಾಗದಲ್ಲಿ ಭೂಮಿಪೂಜೆ ನಡೆದು ದಶಕ ಕಳೆದರೂ ಆರಂಭವಾಗದ ಕಾಮಗಾರಿ

ಜೆ.ಸಿ.ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆಗೆ ಗ್ರಹಣ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹೃದಯಭಾಗದ ಕಲಾಸಿಪಾಳ್ಯದಲ್ಲಿರುವ ಐತಿಹಾಸಿಕ ಜಯಚಾಮರಾಜೇಂದ್ರ ಮಾರುಕಟ್ಟೆ (ಜೆ.ಸಿ.ಮಾರುಕಟ್ಟೆ) ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಮಾರುಕಟ್ಟೆ ಸ್ಥಳಾಂತರಿಸಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ. ಹೊಸ ಮಾರುಕಟ್ಟೆಗೆ ನಗರದ ಹೊರಭಾಗದಲ್ಲಿ ಭೂಮಿಪೂಜೆ ನೆರವೇರಿಸಿ ದಶಕ ಕಳೆದರೂ ಇನ್ನೂ ಕಟ್ಟಡವೇ ನಿರ್ಮಾಣವಾಗಿಲ್ಲ.

ಜೆ.ಸಿ.ಮಾರುಕಟ್ಟೆಯಲ್ಲಿ ಅಗತ್ಯ ಸೌಕರ್ಯಗಳಿಲ್ಲದ ಕಾರಣ ಬೇಸತ್ತ ವ್ಯಾಪಾರಿಗಳು ಮಾರುಕಟ್ಟೆ ಸ್ಥಳಾಂತರಕ್ಕೆ ಅಂದಿನಿಂದ ಎಲ್ಲ ಸರ್ಕಾರಗಳ ಬಾಗಿಲು ತಟ್ಟಿದ್ದಾರೆ. ಹೊಸ ಮಾರುಕಟ್ಟೆ ಎಲ್ಲಿ ನಿರ್ಮಾಣ ಆಗಲಿದೆ ಎಂಬ ಮಾಹಿತಿಯೂ ಸಿಗದೆ ವ್ಯಾಪಾರಿಗಳು ಗೊಂದಲದಲ್ಲಿ ಸಿಲುಕಿದ್ದರು.

ಮೊದಲು ಕೆ.ಆರ್‌.ಮಾರುಕಟ್ಟೆಯ ಅಧೀನದಲ್ಲಿದ್ದ ಜೆ.ಸಿ.ಮಾರುಕಟ್ಟೆಯನ್ನು 1984ರಲ್ಲಿ ಕಲಾಸಿಪಾಳ್ಯಕ್ಕೆ ಸ್ಥಳಾಂತರಿಸಲಾಯಿತು. ಪಾಲಿಕೆ ಜಾಗದಲ್ಲಿದ್ದ ಮಾರುಕಟ್ಟೆ ಕೊನೆಗೆ 1992ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧೀನಕ್ಕೆ ಸೇರಿತು. ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಮಾರುಕಟ್ಟೆಯಲ್ಲಿ 400ಕ್ಕೂ ಹೆಚ್ಚು ತರಕಾರಿ ಅಂಗಡಿಗಳಿವೆ.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬ್ಯಾಟರಾಯನಪುರದ ಬಳಿ 30 ಎಕರೆ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದ್ದರು. ವರ್ಷಗಳೇ ಕಳೆದರೂ ಮಾರುಕಟ್ಟೆ ನಿರ್ಮಾಣ ಆಗಲೇ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬ್ಯಾಟರಾಯನಪುರ ಬದಲಿಗೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸಿಂಗೇನ ಅಗ್ರಹಾರದ ಬಳಿ ಎಪಿಎಂಸಿಗೆ ನೀಡಿರುವ 43 ಎಕರೆ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ನಿಖರ ಮಾಹಿತಿ ಇಲ್ಲದ ಕಾರಣ ಮಾರುಕಟ್ಟೆ ಸ್ಥಳಾಂತರ ಬ್ಯಾಟರಾಯನಪುರಕ್ಕೋ? ಅಥವಾ ಸಿಂಗೇನ ಅಗ್ರಹಾರಕ್ಕೋ? ಎಂದು ವ್ಯಾಪಾರಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.

ಈಗಿನ ಮಾರುಕಟ್ಟೆ ಕಿರಿದಾಗಿದ್ದು, ತರಕಾರಿ ಹೊತ್ತು ತರುವ ವಾಹನಗಳಿಗೆ ಸೂಕ್ತ ಜಾಗವೂ ಇಲ್ಲದೆ, ನಿತ್ಯ ರಾಶಿ ಕಸದಲ್ಲೇ ಹೆಜ್ಜೆ ಹಾಕುವ ರೈತರ ಅಸಹಾಯಕತೆ ಕಂಡು ಕೊನೆಯ ಪಕ್ಷ ಸಗಟು ವ್ಯಾಪಾರವನ್ನಾದರೂ ಶೀಘ್ರವಾಗಿ ಸ್ಥಳಾಂತರ ಮಾಡಿ ಎಂದು ವ್ಯಾಪಾರಿಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. 

‘ಮಾರುಕಟ್ಟೆಯಲ್ಲಿ ದಿನದ 24 ಗಂಟೆಯೂ ವ್ಯಾಪಾರ ನಡೆಯುತ್ತದೆ. ರಾಜ್ಯದ ವಿವಿಧೆಡೆಯಿಂದ ತರಕಾರಿ ಹೊತ್ತು ತರುವ ರೈತರಿಗೆ ಉಪಹಾರಕ್ಕಾಗಿ ಹೋಟೆಲ್‌, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಿಲ್ಲ. ಮಾರುಕಟ್ಟೆ ಕಿರಿದಾದ ಕಾರಣ ಭಾರಿ ವಾಹನಗಳು ಬಂದರೆ ಸಿಲುಕಿಕೊಳ್ಳುತ್ತವೆ. ಇದರಿಂದ ಮಾರುಕಟ್ಟೆಯ ಎಲ್ಲ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗಿರುತ್ತದೆ. ನಿತ್ಯ ಇಲ್ಲಿ ಸಂಗ್ರಹವಾಗುವ ಕಸ ರಸ್ತೆಗಳಲ್ಲೇ ಕೊಳೆತು ದುರ್ನಾತ ಬೀರುತ್ತದೆ’ ಎಂದು ಬೆಂಗಳೂರು ತರಕಾರಿ ಸಗಟು ಮಾರುಕಟ್ಟೆ ವರ್ತಕರ ಸಂಘದ ಸಹ ಕಾರ್ಯದರ್ಶಿ ಬಿ.ಎನ್‌.ಪ್ರಸನ್ನ ವಿವರಿಸಿದರು.

‘ಪರವಾನಗಿ ಹೊಂದಿರುವ ಅಂಗಡಿಗಳಿಗಿಂತ ರಸ್ತೆಯಲ್ಲೇ ಹೆಚ್ಚು ಅಂಗಡಿಗಳು ಅಕ್ರಮವಾಗಿ ತೆರೆದಿರುತ್ತವೆ. ಜನಜಂಗುಳಿ ವೇಳೆ ಇಲ್ಲಿ ಜೇಬುಗಳ್ಳರ ಹಾವಳಿಯೂ ಹೆಚ್ಚಾಗಿದ್ದು, ಕಣ್ಣ ಮುಂದೆಯೇ ಕಳವು ನಡೆದರೂ ಸಹಾಯಕ್ಕೆ ಯಾರೂ ಬರುವುದಿಲ್ಲ. ಈ ಬಗ್ಗೆ ಮಾರುಕಟ್ಟೆಗೆ ಪೊಲೀಸರನ್ನು ನಿಯೋಜಿಸಲು ಸ್ಥಳೀಯ ಠಾಣೆಯನ್ನು ಸಂಪರ್ಕಿಸಿದಾಗ ಸಿಬ್ಬಂದಿ ಕೊರತೆ ಇದೆ ಎಂಬ ಕಾರಣ ನೀಡಿ ಸುಮ್ಮನಾದರು’ ಎಂದು ಅಳಲು ತೋಡಿಕೊಂಡರು.

‘ಮಾರುಕಟ್ಟೆಯಲ್ಲಿ ಭದ್ರತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕಸ ಹಾಕಲು ಒಂದೂ ಕಸದ ಬುಟ್ಟಿ ಇಲ್ಲ. ಬಿದ್ದ ಕಸವನ್ನು ತೆರವು ಮಾಡಬೇಕು. ಕೆಲವರು, ನಿಷೇಧಿತ ಪ್ಲಾಸ್ಟಿಕ್‌ ಕವರ್‌ ಅನ್ನು ಪ್ರತಿದಿನ ಬೆಳಿಗ್ಗೆ ತಂದು ಅಕ್ರಮವಾಗಿ ವ್ಯಾಪಾರಿಗಳಿಗೆ ಮಾರುತ್ತಾರೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

 

‘ಜೆ.ಸಿ.ಮಾರುಕಟ್ಟೆ–ಅನೇಕರಿಗೆ ತಿಳಿದಿಲ್ಲ’

‘ಬೆಂಗಳೂರು ಜನರಿಗೆ ಮಾರುಕಟ್ಟೆ ಎಂದ‌ ಕೂಡಲೆ ನೆನಪಾಗುವುದು ಕೆ.ಆರ್‌.ಮಾರುಕಟ್ಟೆ. ಆದರೆ, ಇದರ ಸಮೀಪವೇ ಜೆ.ಸಿ.ಮಾರುಕಟ್ಟೆ ಇದೆ ಎಂದು ಹಲವರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ಜೆ.ಸಿ.ಮಾರುಕಟ್ಟೆ ಯಾವುದೇ ಮುಖ್ಯ ರಸ್ತೆಗೆ ಹೊಂದಿಕೊಂಡಿಲ್ಲ’ ಎನ್ನುತ್ತಾರೆ ವ್ಯಾಪಾರಿ ವಿಜಯ ಕುಮಾರ್‌.

‘ಕೆ.ಆರ್‌.ಮಾರುಕಟ್ಟೆಯ ಬಸ್‌ ನಿಲ್ದಾಣದ ಸಮೀಪವೇ ಇದ್ದರೂ ರಸ್ತೆಯಿಂದ ಒಳಭಾಗದಲ್ಲಿರುವ ಕಾರಣ ಮಾರುಕಟ್ಟೆ ವಿಳಾಸ ಹೇಳಲೂ ಜನ ತೊದಲುತ್ತಾರೆ. ಆದರೆ, ಕಲಾಸಿಪಾಳ್ಯ ಮಾರುಕಟ್ಟೆ ಎಂದೇ ಜನ ತಿಳಿದಿದ್ದಾರೆ. ಎಪಿಎಂಸಿ ವತಿಯಿಂದ ಜಯಚಾಮರಾಜೇಂದ್ರ ಮಾರುಕಟ್ಟೆ ಎಂದು ನಾಮಫಲಕ ಅಳವಡಿಸಬೇಕು’ ಎಂದು ಮನವಿ ಮಾಡಿದರು.

‘ಸಗಟು ವ್ಯಾಪಾರ ಮಾತ್ರ ಸ್ಥಳಾಂತರಿಸಿ’

‘ತರಕಾರಿ ವ್ಯಾಪಾರಕ್ಕೆ ಈ ಜಾಗ ಸೂಕ್ತವಾಗಿದೆ. ಆದರೆ, ಸಗಟು ವ್ಯಾಪಾರಕ್ಕೆ ಮಾರುಕಟ್ಟೆ ಕಿರಿದಾಗಿದೆ. ಭಾರಿ ವಾಹನಗಳ ಪ್ರವೇಶಕ್ಕೂ ಇಲ್ಲಿ ಸ್ಥಳವಿಲ್ಲ. ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ಸಗಟು ವ್ಯಾಪಾರ ಎರಡೂ ನಡೆಯುತ್ತದೆ. ಈ ಬಗ್ಗೆ ರೈತರಲ್ಲೂ ಗೊಂದಲವಿದ್ದು, ಇದಕ್ಕಾಗಿ ಸಗಟು ವ್ಯಾಪಾರವನ್ನು ಮಾತ್ರ ಸ್ಥಳಾಂತರಿಸಬೇಕು. ಮಾರುಕಟ್ಟೆಯ ಗುಣಮಟ್ಟ ಹೆಚ್ಚಿಸಿ, ಚಿಲ್ಲರೆ ವ್ಯಾಪಾರಕ್ಕೆ ಇಲ್ಲೇ ಅವಕಾಶ ನೀಡಬೇಕು’ ಎಂದು ತರಕಾರಿ ವ್ಯಾ‍ಪಾರಿ ಪ್ರಸನ್ನ ಒತ್ತಾಯಿಸಿದರು.

***

ಸಗಟು ಮಾರುಕಟ್ಟೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
-ಸನಾ ಉಲ್ಲಾ ಖಾನ್‌, ಬೆಂಗಳೂರು ತರಕಾರಿ ಸಗಟು ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ

ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲು ಸಿ.ಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದು, ಒತ್ತುವರಿ ತೆರವಾದರೆ 6 ತಿಂಗಳ ಒಳಗೆ ಸ್ಥಳಾಂತರವಾಗಲಿದೆ.
-ಕರೀಗೌಡ, ನಿರ್ದೇಶಕ, ಕೃಷಿ ಮಾರುಕಟ್ಟೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು